ರಾಜ್ಯ ಒಕ್ಕಲಿಗರ ಸಂಘವು ಸಮಾಜದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದಾಖಲಿಸುವ, ಸಂಶೋಧಿಸುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಸಮಾಜದ ಇತಿಹಾಸದಲ್ಲಿ ಕೊಡುಗೆ ನೀಡಿದ ಮಹನೀಯರು, ಶಿಕ್ಷಣ ಪ್ರೇಮಿಗಳು, ದಾನಿಗಳು, ರೈತ ನಾಯಕರು, ಸಮಾಜ ಸುಧಾರಕರು ಮತ್ತು ನಿಸ್ವಾರ್ಥ ಸೇವಕರ ಜೀವನಚರಿತ್ರೆಗಳನ್ನು ಸಂಗ್ರಹಿಸಬೇಕು. ನಮ್ಮ ಇತಿಹಾಸವನ್ನು ತಿಳಿಯದ ಪೀಳಿಗೆಗೆ ನಮ್ಮ ಹಿರಿಯರ ತ್ಯಾಗದ ಮಹತ್ವ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆಸ್ತಿ ದುರುಪಯೋಗ, ಅಕ್ರಮ ವರ್ಗಾವಣೆ ಅಥವಾ ಸಮಾಜದ ಹಿತಕ್ಕೆ ವಿರುದ್ಧವಾದ ನಿರ್ಧಾರಗಳಿಗೆ ಅವಕಾಶವಿಲ್ಲದಂತೆ ಒಕ್ಕಲಿಗರ ಸಂಘದ ಆಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಎಂ.ಎಂ.ಫೌಂಡೇಷನ್ ಅಧ್ಯಕ್ಷ ಮಹಾಲಿಂಗೇಗೌಡ ಮುದ್ದನಘಟ್ಟ ಹೇಳಿದ್ದಾರೆ.

ಸಂಘದ ಆಸ್ತಿ ಉಳಿದರೆ ಸಂಸ್ಥೆ ಉಳಿಯುತ್ತದೆ. ಸಂಸ್ಥೆ ಉಳಿದರೆ ಸಮಾಜದ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಭರವಸೆ ಉಳಿಯುತ್ತದೆ. ಅಧಿಕಾರಕ್ಕಾಗಿ ಆಂತರಿಕ ಕಚ್ಚಾಟಕ್ಕೆ ಅವಕಾಶ ನೀಡದೆ ಸಮಾಜದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘದಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ನಿರ್ದೇಶಕ ಸ್ಥಾನ, ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ ಮತ್ತು ಇತರ ಪದಾಧಿಕಾರಿಗಳ ಸ್ಥಾನಗಳಿಗೆ ಸ್ಪರ್ಧೆ ನಡೆಯುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸಹಜ ಪ್ರಕ್ರಿಯೆ. ಆದರೆ, ಸ್ಪರ್ಧೆ ವೈಯಕ್ತಿಕ ದ್ವೇಷವಾಗಿ ಮಾರ್ಪಾಡಾಗಬಾರದು. ಅಧಿಕಾರಕ್ಕಾಗಿ ಗುಂಪುಗಾರಿಕೆ, ಪರಸ್ಪರ ಆರೋಪ- ಪ್ರತ್ಯಾರೋಪ, ಪ್ರತಿಷ್ಠೆಯ ಸಂಘರ್ಷ ಮತ್ತು ಆಂತರಿಕ ಕಚ್ಚಾಟಗಳು ಸಮಾಜದ ಅಭಿವೃದ್ಧಿಯ ಉದ್ದೇಶವನ್ನೇ ಮರೆಮಾಚುವಂತಾಗಬಾರದು ಎಂದಿದ್ದಾರೆ.

ಒಂದು ಸ್ಥಾನಕ್ಕಾಗಿ ಹತ್ತು ಜನರು ಸ್ಪರ್ಧಿಸಬಹುದು. ಆದರೆ ಆ ಹತ್ತು ಜನರೂ ಸಮಾಜದ ಅಭಿವೃದ್ಧಿಗಾಗಿ ಒಂದೇ ವೇದಿಕೆಯಲ್ಲಿ ಕೈಜೋಡಿಸಲು ಸಾಧ್ಯವಾಗಬೇಕು. ಅಧ್ಯಕ್ಷ ಸ್ಥಾನವನ್ನು ಯಾರು ಪಡೆಯಬೇಕು ಎಂಬ ಚರ್ಚೆಗಿಂತ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಹೇಗೆ ಒದಗಿಸಬೇಕು ಎಂಬ ಚರ್ಚೆ ಮುಖ್ಯವಾಗಬೇಕು. ಯಾರು ಅಧಿಕಾರದಲ್ಲಿರಬೇಕು ಎಂಬ ಪೈಪೋಟಿಗಿಂತ, ಸಂಘದ ಆಸ್ತಿಯನ್ನು ಹೇಗೆ ರಕ್ಷಿಸಬೇಕು ಎಂಬ ಚಿಂತನೆ ಮುಖ್ಯವಾಗಬೇಕು ಎಂದು ತಿಳಿಸಿದ್ದಾರೆ.

ಒಗ್ಗಟ್ಟಿನಿಂದ ತೆಗೆದುಕೊಳ್ಳುವ ಒಂದು ಉತ್ತಮ ನಿರ್ಧಾರ ಸಾವಿರಾರು ಕುಟುಂಬಗಳಿಗೆ ಉಪಯೋಗವಾಗಬಹುದು. ಆದರೆ ಅನಗತ್ಯ ಆಂತರಿಕ ಸಂಘರ್ಷದಿಂದ ಅಮೂಲ್ಯವಾದ ಸಮಯ, ಸಂಪನ್ಮೂಲ ಮತ್ತು ಸಮಾಜದ ವಿಶ್ವಾಸ ವ್ಯರ್ಥವಾಗಬಹುದು. ನಾವು ಯಾವ ಗುಂಪಿನವರು ಎಂಬುದಕ್ಕಿಂತ, ನಾವು ಯಾವ ಸಮಾಜದ ಸೇವಕರು ಎಂಬುದನ್ನು ಮೊದಲು ನೆನಪಿಸಿಕೊಳ್ಳಬೇಕು ಎಂದಿದ್ದಾರೆ.

ರಾಜ್ಯ ಒಕ್ಕಲಿಗರ ಸಂಘವು ಸಮಾಜದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದಾಖಲಿಸುವ, ಸಂಶೋಧಿಸುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು. ಸಮಾಜದ ಇತಿಹಾಸದಲ್ಲಿ ಕೊಡುಗೆ ನೀಡಿದ ಮಹನೀಯರು, ಶಿಕ್ಷಣ ಪ್ರೇಮಿಗಳು, ದಾನಿಗಳು, ರೈತ ನಾಯಕರು, ಸಮಾಜ ಸುಧಾರಕರು ಮತ್ತು ನಿಸ್ವಾರ್ಥ ಸೇವಕರ ಜೀವನಚರಿತ್ರೆಗಳನ್ನು ಸಂಗ್ರಹಿಸಬೇಕು. ನಮ್ಮ ಇತಿಹಾಸವನ್ನು ತಿಳಿಯದ ಪೀಳಿಗೆಗೆ ನಮ್ಮ ಹಿರಿಯರ ತ್ಯಾಗದ ಮಹತ್ವ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.

ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ವಸತಿ ಸೌಲಭ್ಯ, ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ವೃತ್ತಿಪರ ಶಿಕ್ಷಣಕ್ಕೆ ನೆರವು ಮತ್ತು ಉದ್ಯೋಗಾಧಾರಿತ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಕೈಗೊಳ್ಳಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಒಕ್ಕಲಿಗರ ಸಂಘಕ್ಕೆ ನವಚೈತನ್ಯ ನೀಡಬೇಕು ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.