ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಆಧುನಿಕ ಜಗತ್ತಿನಲ್ಲಿ ಬಹುತೇಕರು ಒತ್ತಡಕ್ಕೆ ಸಿಲುಕಿದ್ದು, ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಒತ್ತಡ ದೂರವಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಪಟ್ಟಣದಲ್ಲಿ ರೋಟರಿ ಕದಂಬ ಆಯೋಜಿಸಿದ್ದ ವಲಯ 10ರ ಕುಮದ್ವತಿ ಕಲಾ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಡುವು ಸಿಗದ ಕಾರಣ ಎಲ್ಲರೂ ಒತ್ತಡದಲ್ಲೆ ಜೀವನ ಸಾಗಿಸುತ್ತಿದ್ದಾರೆ ಎಂದರು.
ಜನರು ಈ ಹಿಂದೆ ಒತ್ತಡ ರಹಿತ ಜೀವನ ನಡೆಸುತ್ತಿದ್ದರು. ಅವರೆಲ್ಲರೂ ಜನಪದ ಸಂಗೀತ, ನಾಟಕ, ಸಾಹಿತ್ಯ, ಗ್ರಾಮೀಣ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಒತ್ತಡ ನಿರ್ವಹಣೆ ಮಾಡುವುದಕ್ಕಾಗಿ ಎಲ್ಲರೂ ಸಂಗೀತ ಕೇಳುವುದು, ಸಾಹಿತ್ಯ ಓದು, ನಾಟಕ, ಚಲನಚಿತ್ರ ವೀಕ್ಷಣೆ ಹೀಗೆ ಹಲವು ಬಗೆಯ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ರಂಗಭೂಮಿ, ಕಿರುತೆರೆ ನಟ ಕೆ.ರವಿ ಮಾತನಾಡಿ, ರಂಗಭೂಮಿ ಚಟುವಟಿಕೆಯಲ್ಲಿ ಯುವಕರು ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ. ಅದು ಆಕರ್ಷಣೆ ಕಳೆದುಕೊಂಡಿದ್ದು ಎಲ್ಲರೂ ಹೊಡಿಬಡಿ ಚಿತ್ರಗಳತ್ತ ಆಕರ್ಷಿತರಾಗಿದ್ದಾರೆ. ಶಾಲಾ ದಿನಗಳಲ್ಲಿ ಸಾಹಿತ್ಯ, ರಂಗಭೂಮಿ ಚಟುವಟಿಕೆಗೆ ಆದ್ಯತೆ ಪ್ರೋತ್ಸಾಹ ನೀಡಬೇಕು. ಪ್ರತಿಭಾ ಕಾರಂಜಿ ಮೂಲಕ ಪ್ರಾಥಮಿಕ ಶಾಲಾ ಹಂತದಲ್ಲೆ ಸರಕಾರ ಅದಕ್ಕೆ ಅವಕಾಶ ಕಲ್ಪಿಸಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ರೋಟರಿ ವಲಯ10 ಸದಸ್ಯರಿಗೆ ಹಾಡು, ನೃತ್ಯ, ಏಕಪಾತ್ರಾಭಿನಯ, ಸೇರಿದಂತೆ ವಿವಿಧ ಸ್ಪರ್ಧೆ ನಡೆಯಿತು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.ರೋಟರಿ ಸಹಾಯಕ ಗೋವರ್ನರ್ ಎಸ್.ಆರ್. ನಾಗರಾಜ್ ಮಾತನಾಡಿ, ಸ್ಪರ್ಧೆಯಲ್ಲಿ ವಿಜೇತ ತಂಡದವರು ನ.10 ರಂದು ಕುಂದಾಪುರದಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಇದರಿಂದ ರೋಟರಿ ಸದಸ್ಯರ ಪ್ರತಿಭೆ ಅನಾವರಣಗೊಳ್ಳುತ್ತದೆ ಎಂದು ಹೇಳಿದರು.
ರೋಟರಿ ಕದಂಬ ಅಧ್ಯಕ್ಷ ಎ.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಶಿವಕುಮಾರ್, ರವೀಂದ್ರನಾಥ ಐತಾಳ್, ಎಂ.ಅರ್.ರಘು, ಹರೀಶ್ ಮೊದಲಿಯಾರ್, ಕೋಟೋಜಿರಾವ್, ಮಧುಕೇಶ್ವರ್, ಲಕ್ಷ್ಮಣ್, ವಿರೇಂದ್ರ ವಾಲಿ ಇದ್ದರು.