ಸಾರಾಂಶ
ತಾಲೂಕು ಕಚೇರಿ ಎದುರು ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಿಷ್ಟಾವದಿ ಮುಷ್ಕರ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕು ಗ್ರಾಮ ಆಡಳಿತಾಧಿಕಾರಿಗಳಿಗೆ ಸರ್ಕಾರ 17 ಆ್ಯಪ್ ನೀಡಿ ಅಲ್ಪ ಕಾಲಾವಧಿಯೊಳಗೆ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಗ್ರಾಮ ಆಡಳಿತಾಧಿಕಾರಿಗಳ ತಾಲೂಕು ಸಂಘದ ಅಧ್ಯಕ್ಷ ಜಿ.ಸಿ.ಸುನೀಲ್ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವದಿ ಮುಷ್ಕರದಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರ ನಮಗೆ ಮೂಲಭೂತ ಸೌಕರ್ಯ ಮಾಡಿಕೊಟ್ಟಿಲ್ಲ. ಕುರ್ಚಿ, ಟೇಬಲ್, ದಾಖಲೆ ಇಡಲು ಅಲ್ಮೇರ, ಮೊಬೈಲ್ ಸಹ ಕೊಟ್ಟಿಲ್ಲ. ಆ್ಯಪ್‌ಗಳ ನಿರ್ವಹಣೆಗೆ ಸೂಕ್ತ ತರಬೇತಿ ಸಹ ನೀಡಿಲ್ಲ. ಸದಾ ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ನಾವು ಕರ್ತವ್ಯಕ್ಕೆ ಬರುವ ಮುಂಚೆಯೂ ವಿಸಿ ಸಭೆ ಇರುತ್ತದೆ. ಕಚೇರಿ ಕೆಲಸ ಮುಗಿದ ನಂತರವೂ ವಿಸಿ ಇರುತ್ತದೆ. ಆದ್ದರಿಂದ ಕೆಲಸದ ಅವಧಿಗೂ ಮುನ್ನ ಹಾಗೂ ನಂತರ ವರ್ಚುವಲ್ ಸಭೆಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.ಮೊಬೈಲ್ ತತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೆ ಆಗಿರುವ ಎಲ್ಲಾ ಅಮಾನತುಗಳನ್ನು ರದ್ದು ಪಡಿಸಿ ಹಿಂಪಡೆಯಬೇಕು. ಕೆಸಿಎಸ್‌ಆರ್ ನಿಯಮದಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು, ಮೆಮೋ ಹಾಕುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳೆ ಸಮೀಕ್ಷೆ ಹಾಗೂ ಬೆಳೆ ಹಾನಿ ಪರಿಹಾರದ ಕೆಲಸಗಳನ್ನು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ನಿರ್ವಹಿಸುವಂತೆ ಆದೇಶ ನೀಡಬೇಕು . ಮಳೆ ಹಾನಿ ಪ್ರಕರಣಗಳ ಜವಾಬ್ದಾರಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಂದ ಕೈ ಬಿಡಬೇಕು. ಪ್ರಸ್ತುತ ಇರುವ ರಾಂಕಿಗ್ ಪದ್ಧತಿ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ಪೆನ್ ಡೌನ್ ಚಳುವಳಿ ಮಾಡುತ್ತೇವೆ. ಅರ್ಧಿಷ್ಟಾವದಿ ಮುಷ್ಕರ ಮುಂದುವರಿಸುತ್ತೇವೆ ಎಂದರು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಮಂಜುನಾಥ್ ಮಾತನಾಡಿ, ಗ್ರಾಮ ಆಡಳಿತಾಧಿಕಾರಿಗಳಿಗೆ ಸರ್ಕಾರ ಸರಿಯಾದ ಮೂಲ ಭೂತ ಸೌಕರ್ಯ ನೀಡದೆ ಕೆಲಸ ಮಾಡಿಸಿಕೊಳ್ಳುತ್ತಿದ್ದು ಇದರಿಂದ ಅವರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ಇಂದು ಗ್ರಾಮ ಆಡಳಿತಾಧಿ ಕಾರಿಗಳು ತಾಲೂಕು ಕೇಂದ್ರದಲ್ಲಿ ಮುಷ್ಕರ ಹಮ್ಮಿಕೊಂಡಿದ್ದಾರೆ. ನಾಳಿ ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ಮಾಡುತ್ತಾರೆ. ಸರ್ಕಾರ ಸ್ಪಂದಿಸದಿದ್ದರೆ ಮುಂದೆ ರಾಜ್ಯಾಧ್ಯಂತ ಮುಷ್ಕರ ನಡೆಸುತ್ತಾರೆ. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ. ಹಾಗೆಯೇ ಜಿಲ್ಲಾಧ್ಯಕ್ಷರು ಸಹ ಬೆಂಬಲ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳ ನ್ಯಾಯವಾದ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಮುಷ್ಕರದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಕಾರ್ಯದರ್ಶಿ ಜೆ.ನವೀನ್, ಖಜಾಂಚಿ ಟಿ.ಮಂಜುಳಾ, ಉಪಾಧ್ಯಕ್ಷ ವಿಶ್ವನಾಥ್ ಹಾಗೂ ಇತರ ಗ್ರಾಮ ಆಡಳಿತಾಧಿಕಾರಿಗಳು ಭಾಗವಹಿಸಿದ್ದರು.ನಂತರ ತಹಶೀಲ್ದಾರ್ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.