ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸೇವಾನಿರತ ಸರ್ಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಯಾವುದೇ ಆತಂಕ ಪಡದೆ, ಸರ್ಕಾರಿ ನೌಕರರು ನಿರ್ಭೀತಿಯಿಂದ ಪ್ರಾಮಾಣಿಕವಾಗಿ ಜನಸಾಮಾನ್ಯರ ಸೇವೆಗೆ ಸಮರ್ಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.ತಮ್ಮ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಸರ್ಕಾರಿ ನೌಕರರ ಕುಂದು-ಕೊರತೆ, ಸಮಸ್ಯೆ, ಸೇವಾ ಸೌಲಭ್ಯಗಳ ತ್ವರಿತ ಸ್ಪಂದನೆಗಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನೌಕರರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಯಾವುದೇ ಅಭದ್ರತೆ ಕಾಡದಂತೆ ನೋಡಿಕೊಳ್ಳಬೇಕಾದುದು ಹಾಗೂ ವ್ಯವಸ್ಥೆಗೆ ಪೂರಕವಾಗಿ ಸಹಕರಿಸಬೇಕಾದುದು ನಾಗರೀಕರೆಲ್ಲರ ಕರ್ತವ್ಯವಾಗಿದೆ. ಜೊತೆಗೆ ನೌಕರರಿಗೆ ಸೂಕ್ತ ರಕ್ಷಣೆ ಸಿಗಬೇಕು. ಹೀಗಾಗಿ ಕರ್ತವ್ಯ ನಿರತ ನೌಕರರ ಮೇಲೆ ಸಲ್ಲದ ಕಾರಣಕ್ಕೆ ಹಲ್ಲೆಗೆ ಮುಂದಾಗುವುದು, ಅನುಚಿತವಾಗಿ ವರ್ತಿಸುವುದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ದಂಡನೆಗೆ ಗುರುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಆರ್.ಟಿ.ಐ. ಅರ್ಜಿಗಳನ್ನು ಸಲ್ಲಿಸಿ, ಅಧಿಕಾರಿಗಳಿಗೆ ಇನ್ನಿಲ್ಲದಂತೆ ಕಾಡುವುದು, ಬೇಡಿಕೆ ಸಲ್ಲಿಸುವುದು, ಸೇವಾ ಕ್ಷೇತ್ರದಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಪತ್ರಿಕೆಗಳಲ್ಲಿ ಆಧಾರರಹಿತ ಆರೋಪ ಮಾಡುವುದಲ್ಲದೇ ಅಸಂವಿಧಾನಿಕ ಪದಗಳ ಬಳಕೆ ಮಾಡುತ್ತಿರುವುದನ್ನೂ ಸಹ ಗಂಭೀರವಾಗಿ ಪರಿಗಣಿಸಲಾಗುವುದು. ಅಂತಹ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.ಜಿಲ್ಲೆ, ನಗರ ಮತ್ತು ಪಟ್ಪಣ ಪ್ರದೇಶಗಳಲ್ಲಿ ನೌಕರರ ಬೇಡಿಕೆಗನುಗುಣವಾಗಿ ವಸತಿ ಗೃಹಗಳು ದೊರೆಯುತ್ತಿಲ್ಲ. ಅಲ್ಲದೇ ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಅನೇಕ ವಸತಿ ಗೃಹಗಳು ದುರಸ್ತಿ ಕಾಣದಿರುವುದನ್ನು ಕೂಡ ಗಮನಿಸಲಾಗಿದೆ. ಲಭ್ಯವಿರುವ ವಸತಿ ಗೃಹಗಳ ಹಂಚಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಿದ ಅವರು, ವಸತಿ ಗೃಹಗಳ ದುರಸ್ತಿ ಬಗ್ಗೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದರು.
ಆರೋಗ್ಯ ಸಂಜೀವಿನಿ ಯೋಜನೆಯಡಿ ಜಿಲ್ಲಾ ಕೇಂದ್ರಗಳಲ್ಲಿನ ಅನೇಕ ಆಸ್ಪತ್ರೆಗಳು ಆರೋಗ್ಯ ಸೇವೆ ಒದಗಿಸಲು ಈವರೆಗೆ ನೋಂದಣಿಯಾಗಿಲ್ಲ. ನಗರದ ಪ್ರತಿಷ್ಠಿತ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ನೌಕರರಿಗೆ ಈ ಯೋಜನೆಯಡಿ ಆರೋಗ್ಯ ಸೇವೆ ಒದಗಿಸಲು ಮುಂದಾಗುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್ ಅವರು ಮಾತನಾಡಿ, ಕಾಲಕಾಲಕ್ಕೆ ಬದಲಾಗುತ್ತಿರುವ ಆಡಳಿತ ವ್ಯವಸ್ಥೆಗೆ ಪೂರಕವಾಗಿ ನೌಕರರೂ ಕೂಡ ಹೊಂದಿಕೊಳ್ಳಬೇಕಾಗಿದೆ. ಸೇವಾವಧಿಯಲ್ಲಿ ನೌಕರರಿಗೆ ಹೊಸದಾಗಿ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಮತ್ತು ಕಾಯ್ದೆಗಳ ಪೂರ್ಣ ಜ್ಞಾನ ಇರಬೇಕು. ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ನೌಕರರಿಗೂ ಅರಿವು ಇರಬೇಕಾದುದು ಅಗತ್ಯ. ಈ ದಿಸೆಯಲ್ಲಿ ತರಬೇತಿ ಕಾರ್ಯಾಗಾರಗಳನ್ನು ಜಿಲ್ಲಾಡಳಿತ ಮತ್ತು ಆಡಳಿತ ಸುಧಾರಣಾ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ಆಯೋಜಿಸಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ವರ್ಗಾವಣೆಗೊಂಡು ಜಿಲ್ಲೆಗೆ ಬಂದಲ್ಲಿ ಅವರ ಮಕ್ಕಳ ಶಿಕ್ಷಣ ಮುಂದುವರೆಸಲು ಶಾಲಾ ದಾಖಲಾತಿಗಾಗಿ ತೆರಳಿದಾಗ, ಪ್ರವೇಶ ನಿರಾಕರಿಸುವುದು ಸಾಮಾನ್ಯ ಸಂಗತಿಯಾಗಿದೆ. ಶಾಲಾ ಆಡಳಿತ ಮಂಡಳಿಯವರಿಗೆ ದಾಖಲಾತಿಗಾಗಿ ಸೂಕ್ತ ಮಾರ್ಗದರ್ಶನ ನೀಡುವಂತೆ ಆರ್.ಮೋಹನ್ ಕುಮಾರ್ ಮನವಿ ಮಾಡಿದರು.ಸಭೆಯಲ್ಲಿ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗಾರೆಡ್ಡಿ, ಜಿ.ಪಂ. ಉಪಕಾರ್ಯದರ್ಶಿ ಸುಜಾತಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಆರ್.ಪಾಪಣ್ಣ, ಡಾ. ಹಿರೇಮಠ್, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ಉಮೇಶ್ ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರುಗಳು ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.