ಪರವಾನಗಿ ಪಡೆಯದೇ ಹಾಗೂ ನೋಂದಣಿ ಇಲ್ಲದೇ ಸಂಚರಿಸುತ್ತಿರುವ ಆಟೋಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಪರವಾನಗಿ ಪಡೆಯದೇ ಹಾಗೂ ನೋಂದಣಿ ಇಲ್ಲದೇ ಸಂಚರಿಸುತ್ತಿರುವ ಆಟೋಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, 20 ವರ್ಷಗಳ ಮೇಲ್ಪಟ್ಟ ಮೈನ್ಸ್ ಲಾರಿಗಳ ಓಡಾಟ ಈಗಾಗಲೇ ನಿರ್ಬಂಧಿಸಲಾಗಿದ್ದು, ಒಂದು ವೇಳೆ ಇಂತಹ ಲಾರಿಗಳು ಸಂಚಾರ ಮಾಡಿದರೆ ಅಂತಹ ವಾಹನಗಳನ್ನು ಸೀಜ್ ಮಾಡಬೇಕು. ಅಪಘಾತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಟ್ಯಾಕ್ಟರ್-ಟ್ರಾಲಿಗಳಿಗೆ ರೇಡಿಯಂ ಸ್ಟಿಕ್ಕರ್ ಅಳವಡಿಕೆ ಮಾಡುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಪ್ರಸ್ತುತ 7,993 ಆಟೋಗಳಿಗೆ ಅಧಿಕೃತ ಪರವಾನಗಿ ನೀಡಲಾಗಿದೆ. ಆದರೆ, ಒಟ್ಟು ನೋಂದಾಯಿತ ಆಟೋಗಳ ಸಂಖ್ಯೆ 10,223 ರಷ್ಟಿದ್ದು, ಸುಮಾರು 2,230 ಆಟೋಗಳು ಪರವಾನಗಿ ಇಲ್ಲದೆ ರಸ್ತೆಗಿಳಿಯುತ್ತಿರುವುದು ಗಮನಕ್ಕೆ ಬಂದಿದೆ. ಪರವಾನಗಿ ಇಲ್ಲದ ಆಟೋಗಳ ಪೈಕಿ ಸುಮಾರು 1,000 ವಾಹನಗಳು ಬೇರೆಡೆಗೆ ಸ್ಥಳಾಂತರವಾಗಿರಬಹುದು ಅಥವಾ ನೋಂದಣಿ ರದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಇನ್ನುಳಿದ ಒಂದು ಸಾವಿರಕ್ಕೂ ಅಧಿಕ ಆಟೋಗಳು ಕಾನೂನುಬಾಹಿರವಾಗಿ ಸಂಚರಿಸುತ್ತಿದ್ದು, ಇವುಗಳ ವಿರುದ್ಧ ತಕ್ಷಣವೇ ಜಂಟಿ ಕಾರ್ಯಾಚರಣೆ ನಡೆಸಲಾಗುವುದು. ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಟ್ಯಾಕ್ಟರ್‌ಗಳಿದ್ದು, ಆಂದೋಲನದ ಮೂಲಕ 2500 ಟ್ಯಾಕ್ಟರ್‌ಗಳಿಗೆ ಮಾತ್ರ ರೇಡಿಯಂ ಸ್ಟಿಕ್ಕರ್ ಅಳವಡಿಕೆ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳೆಸಿಂಗೆ ಹೇಳಿದರು.

ಜಿಲ್ಲೆಯಲ್ಲಿ ಒಟ್ಟು 441 ಪ್ರಾಣಾಪಾಯಕಾರಿ ಅಪಘಾತಗಳು ಸಂಭವಿಸಿದ್ದು, 463 ಜನರು ಸಾವನ್ನಪ್ಪಿದ್ದರು. ಒಟ್ಟು 1,110 ಸಾಮಾನ್ಯ ಅಪಘಾತಗಳಲ್ಲಿ 2,600 ಜನರು ಗಾಯಗೊಂಡಿದ್ದರು. 2024 ರಲ್ಲಿ ಪ್ರಾಣಾಪಾಯಕಾರಿ ಅಪಘಾತಗಳ ಸಂಖ್ಯೆ 419ಕ್ಕೆ ಇಳಿಕೆಯಾಗಿದೆ. ಆದರೆ, ಸಾವಿನ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆ ಕಂಡುಬಂದಿತ್ತು. ಕಟ್ಟುನಿಟ್ಟಿನ ಕ್ರಮಗಳಿಂದಾಗಿ 2025ರಲ್ಲಿ ಪ್ರಾಣಾಪಾಯಕಾರಿ ಅಪಘಾತಗಳ ಸಂಖ್ಯೆ 384ಕ್ಕೆ ಕುಸಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.

ರಸ್ತೆ ಅಪಘಾತಗಳ ನಿರ್ವಹಣೆ ಮತ್ತು ಸಂತ್ರಸ್ತರಿಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ‘ಸಮಗ್ರ ರಸ್ತೆ ಅಪಘಾತ ದತ್ತಾಂಶ’ ಎಂಬ ಹೊಸ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರ ವಿವರ ಮತ್ತು ವಾಹನದ ಮಾಹಿತಿಯನ್ನು ಏಳು ವಿವಿಧ ಫಾರಂಗಳಲ್ಲಿ ದಾಖಲಿಸುತ್ತಾರೆ. ಎಂಜಿನಿಯರಿಂಗ್ ಇಲಾಖೆಯು ರಸ್ತೆಯ ದೋಷಗಳು ಅಥವಾ ಅಪಘಾತಕ್ಕೆ ಕಾರಣವಾದ ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸಿ ವರದಿ ನೀಡುತ್ತದೆ ಎಂದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ನಾಗರಾಜ್, ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡ, ಶಿವಕುಮಾರ್, ಸತ್ಯನಾರಾಯಣ್ ರಾವ್ ಎಂ.ಜಿ ಪೌರಾಯುಕ್ತೆ ಲಕ್ಷ್ಮಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.