ಹೆದ್ದಾರಿ ಅಗಲೀಕರಣಕ್ಕೆ ಕಟ್ಟಡ ತೆರವುಗೊಳಿಸದ ಮಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಎಸಿ ಸೂಚನೆ

| Published : May 18 2024, 12:36 AM IST

ಹೆದ್ದಾರಿ ಅಗಲೀಕರಣಕ್ಕೆ ಕಟ್ಟಡ ತೆರವುಗೊಳಿಸದ ಮಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಎಸಿ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಉಪ್ಪಿನಂಗಡಿ ಪೇಟೆಯೊಳಗೆ ಯಾವುದೇ ಅವ್ಯವಸ್ಥೆ ಕಾಣಿಸಿಕೊಳ್ಳಬಾರದೆಂದು ಸಂಬಂಧಪಟ್ಟ ವಿವಿಧ ಇಲಾಖಾ ಅಧಿಕಾರಿಗಳಿಗೆ ಎಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅಗತ್ಯವಾದ ಕಟ್ಟಡ ತೆರವುಗೊಳಿಸ ಖಾಸಗಿ ಸ್ವಾಮ್ಯದ ಕಟ್ಟಡ ಮಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ವೆಚ್ಚದಲ್ಲಿಯೇ ಕಟ್ಟಡವನ್ನು ತೆರವುಗೊಳಿಸಲು ಪಂಚಾಯತ್ ಆಡಳಿತ ಪೊಲೀಸ್ ರಕ್ಷಣೆಯಲ್ಲಿ ಮುಂದಾಗಬೇಕೆಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಕಟ್ಟುನಿಟ್ಟಿನ ಆದೇಶ ನೀಡಿದರು.

ಅವರು ಶುಕ್ರವಾರ ಉಪ್ಪಿನಂಗಡಿಯ ಹೆದ್ದಾರಿ ಅಗಲೀಕರಣದ ಕಾಮಗಾರಿಯ ಅಗತ್ಯ ಕಾರ್ಯಗಳಿಗೆ ಮೇ ೨ರಂದು ನೀಡಿದ್ದ ಕಾಲಮಿತಿಯಲ್ಲಿ ನಡೆದಿರುವ ಪ್ರಗತಿಯನ್ನು ಪರಿಶೀಲಿಸಲು ಆಗಮಿಸಿದ್ದರು. ಈ ವೇಳೆ ಹೆದ್ದಾರಿ ಪಾರ್ಶ್ವದ ವಾಣಿಜ್ಯ ಮಳಿಗೆಯೊಂದು ಹೆಚ್ಚುವರಿಯಾಗಿ ಅನಧಿಕೃತವಾಗಿ ಕಟ್ಟಿದ ಕಟ್ಟಡವನ್ನು ತೆರವುಗೊಳಿಸದ ಕಾರಣ ನಿರ್ದೇಶಿತ ಕಾಮಗಾರಿಯನ್ನು ನಡೆಸಲು ಅಸಾಧ್ಯವಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ಈ ವೇಳೆ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿ ಎಷ್ಟು ಭೂಮಿಯ ಅಗತ್ಯತೆ ಇದೆಯೋ ಅಷ್ಟು ಭೂಮಿಯನ್ನು ಸರ್ಕಾರ ಪರಿಹಾರ ಧನವನ್ನು ವಿತರಿಸಿ ಸ್ವಾಧೀನಪಡಿಸಲಾಗಿದೆ. ಪರಿಹಾರ ಧನವನ್ನು ಸ್ವೀಕರಿಸಿದ ಬಳಿಕವೂ ಕಟ್ಟಡ ತೆರವುಗೊಳಿಸದೆ ಕಾಮಗಾರಿಗೆ ತಡೆಯೊಡ್ಡುವ ಕಟ್ಟಡದ ಮಾಲಕರನ್ನು ಕ್ರಿಮಿನಲ್ ಮೊಕದ್ದಮೆಯಡಿ ಕಾನೂನು ಕ್ರಮಕ್ಕೆ ಒಳಪಡಿಸಿ, ಹಾಗೂ ಕಟ್ಟಡವನ್ನು ತೆರವುಗೊಳಿಸಿ ಅದರ ಸಂಪೂರ್ಣ ವೆಚ್ಚವನ್ನು ಆ ಕಟ್ಟಡದ ಮಾಲಕರಿಂದ ವಸೂಲು ಮಾಡಬೇಕು. ಹಾಗೂ ಸದರಿ ಕಟ್ಟಡದ ಶೌಚಾಲಯದ ತ್ಯಾಜ್ಯವನ್ನು ಸಾರ್ವಜನಿಕ ಚರಂಡಿಗೆ ಬಿಡುತ್ತಿರುವ ಬಗ್ಗೆಯೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.

ಉಪ್ಪಿನಂಗಡಿ ಪೇಟೆಯ ಪ್ರಧಾನ ಚರಂಡಿಯ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದ ಸಹಾಯಕ ಕಮಿಷನರ್‌, ಮುಂದಿನ ೫ ದಿನಗಳ ಒಳಗಾಗಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹೆದ್ದಾರಿ ಬದಿಯ ತಡೆಗೋಡೆಯ ನಿರ್ಮಾಣದ ಕಾರ್ಯವನ್ನು ಮುಂದಿನ ಹತ್ತು ದಿನಗಳ ಒಳಗಾಗಿ ಪೂರ್ಣಗೊಳಿಸಿ ಸರ್ವೀಸ್ ರಸ್ತೆಯ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ನಡೆಸಬೇಕು. ಹೆದ್ದಾರಿ ಬದಿಯ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖಾಧಿಕಾರಿಗಳು ತಕ್ಷಣವೇ ಅನುಮತಿಯನ್ನು ನೀಡಬೇಕೆಂದು ಸ್ಥಳದಲ್ಲೇ ಆದೇಶಿಸಿದರು.

ನಟ್ಟಿಬೈಲು ಕೃಷಿ ಭೂಮಿಗೆ ಚರಂಡಿ ನೀರು ಹರಿಯದಂತೆ ಆ ಭಾಗದ ತಡೆಗೋಡೆ ಮತ್ತು ಚರಂಡಿ ನಿರ್ಮಾಣವನ್ನು ಆದ್ಯತೆಯಲ್ಲಿ ತ್ವರಿತಗೊಳಿಸಬೇಕು. ಉಪ್ಪಿನಂಗಡಿ ಪೇಟೆಯೊಳಗೆ ಯಾವುದೇ ಅವ್ಯವಸ್ಥೆ ಕಾಣಿಸಿಕೊಳ್ಳಬಾರದೆಂದು ಸಂಬಂಧಪಟ್ಟ ವಿವಿಧ ಇಲಾಖಾ ಅಧಿಕಾರಿಗಳಿಗೆ ಎಸಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಉಪ ತಹಸೀಲ್ದಾರ್‌ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಚಂದು ನಾಯ್ಕ್, ಪಿಡಿಒ ವಿಲ್ಫ್ರೆಡ್‌ ಲಾರೆನ್ಸ್ ರೋಡ್ರಿಗಸ್, ಪಂಚಾಯಿತಿ ಸದಸ್ಯರಾದ ಯು.ಟಿ. ತೌಷಿಫ್‌, ಧನಂಜಯ್ ನಟ್ಟಿಬೈಲ್, ಗ್ರಾಮಕರಣಿಕ ನರಿಯಪ್ಪ, ಗ್ರಾಮ ಸಹಾಯಕ ಯತೀಶ್ ಮಡಿವಾಳ, ಹೆದ್ದಾರಿ ಇಲಾಖೆಯ ಅಧಿಕಾರಿಗಳಾದ ಶಿವಪ್ರಸಾದ್, ವಿವೇಕಾನಂದ, ರವಿ, ರಘುನಾಥ ರೆಡ್ಡಿ, ಮಹೇಂದ್ರ ಸಿಂಗ್, ವರ್ತಕ ಸಂಘದ ಪ್ರಶಾಂತ್ ಡಿಕೋಸ್ಟಾ, ಅಬ್ದುಲ್ ರಹಿಮಾನ್ ಯೂನಿಕ್, ಪ್ರಮುಖರಾದ ನಾಗೇಶ್ ಪ್ರಭು, ರೂಪೇಶ್ ರೈ ಅಲಿಮಾರ ಮತ್ತಿತರರು ಉಪಸ್ಥಿತರಿದ್ದರು.