ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು.
ಕನ್ನಡಪ್ರಭ ವಾರ್ತೆ ಕೋಲಾರಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಯುದ್ಧದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಮಾರುಕಟ್ಟೆಯಲ್ಲಿ ಆಹಾರ ಪದಾರ್ಥಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಅಥವಾ ಅಕ್ರಮ ದಾಸ್ತಾನು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಅವರು, ಸಾರ್ವಜನಿಕರಿಗೆ ಅನಗತ್ಯ ತೊಂದರೆ ನೀಡುವ ವರ್ತಕರ ವಿರುದ್ಧ ಈ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.ಅಗತ್ಯ ವಸ್ತುಗಳ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ:ಯುದ್ಧದ ನೆಪವೊಡ್ಡಿ ಅಡುಗೆ ಅನಿಲ, ಖಾದ್ಯ ತೈಲ, ಧಾನ್ಯಗಳು ಸೇರಿದಂತೆ ಯಾವುದೇ ಅಗತ್ಯ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಮಾಡುವುದು ಅಥವಾ ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗುವುದು. ಜಿಲ್ಲಾದ್ಯಂತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಗೋದಾಮುಗಳ ಮೇಲೆ ಸರಬರಾಜು ಮತ್ತು ವಿತರಣೆ ಕುರಿತು ನಿಗಾ ವಹಿಸಲಾಗುವುದು ಎಂದು ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ರೈತರಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ರೈತರಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಕೃಷಿ ಪರಿಕರ ಮಾರಾಟ ಮಾಡುವ ವರ್ತಕರ ಮಾರಾಟ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗುವುದು. ಇಂತಹ ಪ್ರಕರಣಗಳಲ್ಲಿ ತೊಡಗುವವರ ವಿರುದ್ಧ ರಸಗೊಬ್ಬರ ನಿಯಂತ್ರಣ ಆದೇಶ ಹಾಗೂ ಸಂಬಂಧಿತ ಕೃಷಿ ಕಾಯ್ದೆಗಳಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಯಾ ತಾಲ್ಲೂಕು ತಹಸೀಲ್ದಾರ್ ಕಚೇರಿ ಅಥವಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.ಯಾವುದೇ ವರ್ತಕರು ಅಥವಾ ವಿತರಕರು ನಿಗದಿಗಿಂತ ಹೆಚ್ಚಿನ ದರ ವಸೂಲಿ ಮಾಡಿದಲ್ಲಿ ಅಥವಾ ಸರಕು ನೀಡಲು ನಿರಾಕರಿಸಿದಲ್ಲಿ ಸಾರ್ವಜನಿಕರು ಮತ್ತು ರೈತರು ತಕ್ಷಣವೇ ಹತ್ತಿರದ ತಹಸೀಲ್ದಾರ್ ಕಚೇರಿ ಅಥವಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಗಮನಕ್ಕೆ ತರಬೇಕು. ಜಿಲ್ಲೆಯಲ್ಲಿ ಯಾವುದೇ ವಸ್ತುವಿನ ಕೊರತೆಯಾಗದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.