ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರ ಸೇರಿದಂತೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ಶಾಲಾ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ದಿನೇಶ್ ಕುಮಾರ್ ಹೇಳಿದ್ದಾರೆ.ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ಡಿಸಿಪಿ ಸಿದ್ಧಾರ್ಥ ಗೋಯಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡ ಎಸ್.ಪಿ.ಆನಂದ ಪ್ರಸ್ತಾಪಿಸಿ, ನಗರದ ಬೆಂದೂರುವೆಲ್ ಸೇರಿದಂತೆ ಅನೇಕ ಕಡೆಗಳಲ್ಲಿ ಶಾಲಾ ಆವರಣದ ಹೊರಗೆ ಬೆಳಗ್ಗೆ ಹಾಗೂ ಸಂಜೆ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವಾಹನ ನಿಲ್ಲಿಸಲಾಗುತ್ತಿದೆ. ಶಾಲಾ ಮಕ್ಕಳನ್ನು ಇಳಿಸುವುದು ಹಾಗೂ ಹತ್ತಿಸಿಕೊಳ್ಳುವುದಕ್ಕೆ ಪೋಷಕರು ಹಾಗೂ ಶಾಲಾ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲ್ಲಿಸುತ್ತಾರೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅಹವಾಲು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಈ ಬಗ್ಗೆ ಶಾಲೆಗಳ ಮುಖ್ಯಸ್ಥರಿಗೆ ಈಗಾಗಲೇ ತಿಳಿಸಲಾಗಿದೆ. ಶಾಲೆಗಳಲ್ಲಿ ವಿಶಾಲ ಅಂಗಳ ಇದ್ದರೂ ಅಲ್ಲಿ ಮಕ್ಕಳನ್ನು ಇಳಿಸುತ್ತಿಲ್ಲ. ರಸ್ತೆಯಲ್ಲೇ ಮಕ್ಕಳನ್ನು ಪಿಕ್‌ಅಪ್ ಮಾಡುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ವಾಹನಗಳ ಮೇಲೆ ನಿರ್ದಾಕ್ಷಿಣ್ಯ ಕೇಸು ದಾಖಲಿಸಲಾಗುವುದು ಅಲ್ಲದೆ ಶಾಲೆಗಳಿಗೆ ನೋಟಿಸ್ ನೀಡಲಾಗುವುದು ಎಂದರು.ಪೊಲೀಸರ ವಿರುದ್ಧ ಕೈಮಾಡಿದರೆ ಕೇಸ್: ಪೊಲೀಸರ ವಿರುದ್ಧ ನಾಗರಿಕರೇ ಕೈಮಾಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ನಡೆಯುತ್ತಿವೆ. ಮೂಲ್ಕಿಯಲ್ಲಿ ಕೂಡ ಸಂಚಾರಿ ನಿಯಮ ಉಲ್ಲಂಘಿಸಿದ್ದಲ್ಲದೆ, ಪ್ರಶ್ನಿಸಿದ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಗಳು ನಡೆಯುತ್ತಿವೆ. ಇಂಥದಕ್ಕೆ ಅವಕಾಶ ನೀಡದೆ, ಪೊಲೀಸರ ಮೇಲೆ ಯಾರೇ ಕೈಮಾಡಿದರೂ ಅವರ ವಿರುದ್ಧ ಕೇಸು ದಾಖಲಿಸಬೇಕು ಎಂದು ದಲಿತ ಮುಖಂಡ ವಿಶ್ವನಾಥ್ ಹೇಳಿದರು. ಕಾನೂನು ಪಾಲಕರ ವಿರುದ್ಧ ಕೈಮಾಡಿದರೆ, ಕೇಸು ದಾಖಲಿಸಲಾಗುವುದು ಎಂದು ಕಾನೂನು, ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಸ್ಪಷ್ಟಪಡಿಸಿದರು. ಕೇಸು ದಾಖಲಿಸಲು ಸೂಚನೆ: ಗಂಭೀರ ಅಪರಾಧ ಪ್ರಕರಣಗಳು ಕಂಡುಬಂದರೆ ಕೂಡಲೇ ಕೇಸು ದಾಖಲಿಸಲು ಕ್ರಮ ಕೈಗೊಳ್ಳಬೇಕು. ಅಂತಹ ಪ್ರಕರಣಗಳಲ್ಲಿ ರಾಜಿ ಸಂಧಾನಕ್ಕೆ ಅವಕಾಶ ಇಲ್ಲ. ಆಸ್ಪತ್ರೆಯಿಂದ ಗಾಯಾಳು ಬಗ್ಗೆ ಲಿಖಿತ ಮಾಹಿತಿ ಬಂದಾಗ ಸ್ವಯಂ ಆಗಿಯೂ ಕೇಸು ದಾಖಲಿಸಲು ಅವಕಾಶ ಇದೆ. ಕಾನೂನು ಪಾಲನೆ ಪೊಲೀಸರ ಕರ್ತವ್ಯವಾಗಿರಬೇಕು ಎಂದು ಡಿಸಿಪಿ ದಿನೇಶ್ ಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಎಸಿಪಿ ಧನ್ಯಾ ನಾಯಕ್ ನಿರೂಪಿಸಿದರು.