ಸಾರಾಂಶ
ಹುಬ್ಬಳ್ಳಿ: ಇಲ್ಲಿನ ಪಾಲಿಕೆ ಮೇಯರ್ ಕಚೇರಿಯಲ್ಲಿ ಬುಧವಾರ ನಡೆದ ಮೇಯರ್ ಜತೆ ಮಾತುಕತೆ ಕಾರ್ಯಕ್ರಮದಲ್ಲಿ ಕಸ ವಿಲೇವಾರಿ ಕುರಿತಂತೆ ಹೆಚ್ಚಿನ ದೂರುಗಳು ಕೇಳಿಬಂದವು. ಇದಲ್ಲದೆ ರಸ್ತೆ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ರಸ್ತೆ ಹಾಳಾಗಿರುವ ಕುರಿತಂತೆ ದೂರುಗಳು ಕೇಳಿ ಬಂದವು.
ಮೇಯರ್ ಜ್ಯೋತಿ ಪಾಟೀಲ ಅವರ ಮೊದಲ ಫೋನ್ ಇನ್ (ಮೇಯರ್ ಜೊತೆ ಮಾತುಕತೆ) ಕಾರ್ಯಕ್ರಮ ಇದಾಗಿದ್ದರಿಂದ ಕರೆ ಮಾಡಿದ ಬಹುತೇಕರು ಅಭಿನಂದನೆ ತಿಳಿಸುವ ಮೂಲಕ ಮುಂಬರುವ ದಿನಗಳಲ್ಲಿ ತಮ್ಮ ನೇತೃತ್ವದಲ್ಲಿ ಮಹಾನಗರ ಅಭಿವೃದ್ಧಿ ಶಕೆ ಕಾಣಲಿ ಎಂದು ಆಶಯ ವ್ಯಕ್ತಪಡಿಸುತ್ತಾ, ದೂರುಗಳು ಸುರಿಮಳೆ ಸುರಿಸಿದರು.ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 21 ಕರೆಗಳಲ್ಲಿ 33 ದೂರುಗಳು ಕೇಳಿ ಬಂದವು. ಎ ಕೆಟಗೆರಿ (24 ಗಂಟೆಗಳಲ್ಲಿ ಪರಿಹರಿಸಬಹುದಾದ) ಗೆ ಸೇರಿದ 18, ಬಿ ಕೆಟಗೆರಿ (ಕೆಲ ದಿನಗಳಲ್ಲಿ ಪರಿಹರಿಸಬಹುದಾದ)ಗೆ ಸೇರಿದ 1 ಸಿ ಕೆಟಗೆರಿ (ದೀರ್ಘಾವಧಿ ತೆಗೆದುಕೊಳ್ಳುವ)ಗೆ ಸೇರಿದ 14 ದೂರುಗಳನ್ನು ಸ್ಪೀಕರಿಸಲಾಗಿದೆ. ಪ್ರಮುಖವಾಗಿ ಕಸದ ವಿಲೇವಾರಿ ಕುರಿತಂತೆ ಹೆಚ್ಚು ದೂರುಗಳು ಕೇಳಿಬಂದವು. ಕಸ ಕಂಡಲ್ಲಿ ಫೋಟೋ ಕಳಿಸಿ ಅಭಿಯಾನವನ್ನು ಜನ ಅಭಿನಂದಿಸಿದರು. ಆದರೆ, ಪಾಲಿಕೆ ಸಿಬ್ಬಂದಿ ಕಸ ಸ್ವಚ್ಛಗೊಳಿಸಿದ ಜಾಗದಲ್ಲೇ ಮತ್ತೆ ಜನ ಕಸ ಎಸೆಯುತ್ತಿರುವುದು ಪೋನ್ ನಲ್ಲಿ ಪ್ರಮುಖವಾಗಿ ಕೇಳಿ ಬಂತು. ಬ್ಲ್ಯಾಕ್ ಸ್ಪಾಟ್ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿ ಜಾಗ 2-3 ದಿನದಲ್ಲಿ ಹಳೆಯ ಸ್ಥಿತಿಗೆ ಮರಳುತ್ತಿದೆ. ಕಸ ಎಸೆಯುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕರೆ ಮಾಡಿದವರೊಬ್ಬರು ಪಾಲಿಕೆ ವ್ಯಾಪ್ತಿಯ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಅಳವಡಿಸಿದ ಸ್ಮಾರ್ಟ್ ಹೆಲ್ತ್ ಕೇರ್ ಘಟಕದಲ್ಲಾದ ಹಗರಣ ಕುರಿತಂತೆ ಪ್ರಶ್ನಿಸಿದರು. 9 ತಿಂಗಳ ಹಿಂದೆ ಈ ಕುರಿತಂತೆ ಸದನ ಸಮಿತಿ ರಚಿಸಲಾಗಿದೆ. ಈ ಕುರಿತು ತನಿಖೆ ಏನಾಗಿದೆ ಎಂಬುವುದರ ಕುರಿತಂತೆ ಮಾಹಿತಿ ಕೇಳಿ, ಶೀಘ್ರ ಈ ಕುರಿತು ತನಿಖೆ ಪೂರ್ಣಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.ಬಳಿಕ ಪತ್ರಕರ್ತರೊಂದಿಗೆ ಕಾರ್ಯಕ್ರಮದ ಕುರಿತಂತೆ ಮಾಹಿತಿ ಹಂಚಿಕೊಂಡ ಮೇಯರ್ ಜ್ಯೋತಿ ಪಾಟೀಲ, ಎಸ್‌ಡಬ್ಲೂಎಂ (ಸಾಲಿಡ್ ವೇಸ್ಟ್ ಮ್ಯಾನೇಜ್ಮೆಂಟ್) ಕುರಿತ ದೂರುಗಳು ಹೆಚ್ಚಾಗಿವೆ. ಈ ಕುರಿತಂತೆ ಸರಿಯಾದ ಯೋಜನೆ ರೂಪಿಸಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಒಂದು ತಿಂಗಳ ಒಳಗೆ ಬ್ಲ್ಯಾಕ್ ಸ್ಪಾಟ್‌ಗಳ ಬಳಿ ಅಳವಡಿಸಿರುವ 116 ಕ್ಯಾಮೆರಾಗಳ ಕಾರ್ಯ ನಿರ್ವಹಣೆ ಕುರಿತಂತೆ ಪರಿಶೀಲನೆ ನಡೆಸಿ, ಅಲ್ಲಿ ಮತ್ತೆ ಕಸ ಚೆಲ್ಲುವವರನ್ನು ಗುರುತಿಸಿ ಅವರಿಂದ ದಂಡ ವಸೂಲಿ ಮಾಡಲಾಗುವುದು. ಈಗಾಗಲೇ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ಕಸ ಚೆಲ್ಲಿದವರಿಂದ ₹1.20 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದರು.ಇನ್ನು ತುಳಜಾ ಭವಾನಿ ದೇವಸ್ಥಾನದ ಬಳಿ ಮಳೆ ನೀರು ನಿಂತು ಸಮಸ್ಯೆಯುಂಟಾಗುತ್ತಿರುವ ಕುರಿತಂತೆ ಅಲ್ಲಿರುವ ಎಲ್ಲ ವ್ಯಾಪಾರಿ ಮಳಿಗೆಗಳ ಮಾಲಿಕರಿಗೆ ಕಸವನ್ನು ಕಡ್ಡಾಯವಾಗಿ ಕಸದ ವಾಹನಕ್ಕೆ ನೀಡುವಂತೆ ನೋಟಿಸ್ ನೀಡಿ, ಯಾರೂ ಚರಂಡಿಗೆ ಚೆಲ್ಲದಂತೆ ಎಚ್ಚರಿಕೆ ನೀಡಿ. ನೋಟಿಸ್ ಕೊಟ್ಟ ಬಳಿಕವೂ ಚರಂಡಿಗೆ ತ್ಯಾಜ್ಯ ಎಸೆದರೆ ಅಂತವರ ಪರವಾನಗಿ ರದ್ದು ಮಾಡಿ ಬಿಸಿ ಮುಟ್ಟಿಸುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ್ ಆರ್, ಮಾತನಾಡಿ, ಕಸ ವಿಲೇವಾರಿ ವಾಹನಗಳ ದುರಸ್ತಿ ಕಾರ್ಯ ನಡೆಯುತ್ತಿದೆ ಎಂದರು.
ಹೊರಕಳುಹಿಸಿ: ಇತ್ತ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಾಲಿಕೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರೆ, ಅತ್ತ ಮೇಯರ್ ಜ್ಯೋತಿ ಪಾಟೀಲ ಅವರ ಮೊದಲ ಫೋನ್ ಇನ್ ಕಾರ್ಯಕ್ರಮದಲ್ಲಿ ಕೆಲ ಅಧಿಕಾರಿಗಳು ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ನೌಕರರು ಆಗಮಿಸಿ, "ಅಧಿಕಾರಿಗಳನ್ನು ಕರೆದುಕೊಂಡು ಕುಳಿತರೆ ನಮ್ಮ ಪ್ರತಿಭಟನೆ ಸೆಕ್ಸಸ್ ಆಗುವುದು ಹೇಗೆ? ಹೀಗಾಗಿ ಅವರನ್ನು ಹೊರಗೆ ಕಳುಹಿಸಿ " ಎಂದು ಮನವಿ ಮಾಡಿದರು. ಬಳಿಕ ಕೆಲ ಸಮಯದಲ್ಲೇ ಪೋನ್ ಇನ್ ಕಾರ್ಯಕ್ರಮ ಮುಗಿಯಿತು. ತದನಂತರ ಅಧಿಕಾರಿ ವರ್ಗವೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿತು.ಈ ಸಂದರ್ಭದಲ್ಲಿ ಉಪಮೇಯರ್ ಸಂತೋಷ ಚವ್ಹಾಣ್ ಸೇರಿದಂತೆ ವಲಯವಾರು ಅಧಿಕಾರಿಗಳು ಉಪಸ್ಥಿತರಿದ್ದರು.