ಕನ್ನಡಪ್ರಭ ವಾರ್ತೆ ವಿಧಾನಸಭೆ

ಕಾರ್ಖಾನೆಗಳು-ಉದ್ದಿಮೆಗಳ ತ್ಯಾಜ್ಯದ ನೀರನ್ನು ನದಿಗಳು-ಹಳ್ಳಕೊಳ್ಳಗಳಿಗೆ ವಿಸರ್ಜಿಸುವ ಕಾರ್ಖಾನೆಗಳ ವಿರುದ್ಧ ಜಲ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಗುರುವಾರ ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಬಿ.ಪಿ.ಹರೀಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕು ದುಗ್ಗಾವತಿ ಗ್ರಾಮದ ವ್ಯಾಪ್ತಿಯಲ್ಲಿ ಶಾಮನೂರು ಶುಗರ್ಸ್‌ ಲಿಮಿಟೆಡ್‌ ಮತ್ತು ಇಂಡಿಯನ್‌ ಕೇನ್‌ ಪವರ್‌ ಲಿಮಿಟೆಡ್‌ ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಈ ಕಾರ್ಖಾನೆಗಳಿಂದ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಕಳೆದ ಎರಡು ವರ್ಷಗಳಿಂದ ಯಾವುದೇ ಲಿಖಿತ ದೂರುಗಳು ಬಂದಿಲ್ಲ ಎಂದರು.

ವಿಜಯನಗರ ಪ್ರಾದೇಶಿಕ ಅಧಿಕಾರಿ ಜ.26ರಂದು ಈ ಎರಡೂ ಕಾರ್ಖಾನೆಗಳನ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ಶಾಮನೂರು ಶುಗರ್ಸ್‌ ಲಿಮಿಟೆಡ್‌ ಕಾರ್ಖಾನೆ ಕಾರ್ಯ ನಿರ್ವಹಿಸದಿರುವುದು ಕಂಡು ಬಂದಿದೆ. ಆದರೆ, ಇಂಡಿಯನ್‌ ಕೇನ್‌ ಪವರ್‌ ಲಿಮಿಟೆಡ್‌ ಕಾರ್ಖಾನೆಯಿಂದ ತ್ಯಾಜ್ಯದ ನೀರನ್ನು ಹದ್ದಿನಗಿಡಗ ಹಳ್ಳಕ್ಕೆ ವಿಸರ್ಜಿಸಿರುವುದು ಕಂಡು ಬಂದಿದೆ. ಈ ತ್ಯಾಜ್ಯದ ನೀರು ಚಿಕ್ಕಬಿಡದಿ ಸೇತುವೆ ಮೂಲಕ ಹರಿದು ತುಂಗಾಭದ್ರಾ ನದಿ ಬಳಿಯ ಕಲ್ಲೇಶ್ವರ ದೇವಾಲಯದ ಬಳಿ ಸಂಗ್ರಹವಾಗಿರುವುದು ಕಂಡು ಬಂದಿದೆ.

ಈ ಕಾರ್ಖಾನೆ ಅಧಿಕಾರಿಗಳು ಕ್ಯಾಂಟೀನ್‌ ತ್ಯಾಜ್ಯದ ನೀರು ಹಳ್ಳಕ್ಕೆ ವಿಸರ್ಜಿಸಿರುವುದಾಗಿ ಹೇಳಿದ್ದಾರೆ. ಈ ಸಂಬಂಧ ಕಾರ್ಖಾನೆಗೆ ನೋಟಿಸ್‌ ನೀಡಲಾಗಿದೆ. ಆ ತ್ಯಾಜ್ಯ ನೀರಿನ ಮೂಲ ಮತ್ತು ಗುಣಮಟ್ಟ ಪರೀಕ್ಷಿಸಲು ಹಳ್ಳದ ವಿವಿಧ ಭಾಗಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿಶ್ಲೇಷಣೆ ವರದಿಯಲ್ಲಿ ನೀರು ಕಲುಷಿತವಾಗಿರುವುದು ಸಾಬೀತಾದರೆ ಆ ಕಾರ್ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು.


ಸುಳ್ಳಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ-ಹರೀಶ್‌:

ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹರೀಶ್‌, ಸಚಿವರು ಸುಳ್ಳು ಉತ್ತರ ನೀಡುತ್ತಿದ್ದಾರೆ. ಈ ಕಾರ್ಖಾನೆಗಳ ವಿರುದ್ಧ ಕಳೆದೆರಡು ವರ್ಷಗಳಿಂದ ಪ್ರಶ್ನೆ ಕೇಳುತ್ತಿದ್ದೇನೆ. ಸದನಕ್ಕೆ ಸುಳ್ಳು ಉತ್ತರ ನೀಡಲಾಗುತ್ತಿದೆ. ನನ್ನ ಜೊತೆ ಸ್ಥಳಕ್ಕೆ ಅಧಿಕಾರಿಗಳು ಬಂದರೆ, ವಾಸ್ತವಾಂಶ ತೋರಿಸುವೆ. ಈ ಕಾರ್ಖಾನೆಗಳು ತ್ಯಾಜ್ಯದ ನೀರನ್ನು ತುಂಗಾಭದ್ರಾ ನದಿಗೆ ವಿಸರ್ಜಿಸುತ್ತಿವೆ ಎಂದು ಗೂಗಲ್‌ ಫೋಟೋಗಳನ್ನು ಪ್ರದರ್ಶಿಸಿದರು. ಇದು ಸುಳ್ಳಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.

ಇದಕ್ಕೆ ಸಚಿವ ಖಂಡ್ರೆ ಪ್ರತಿಕ್ರಿಯಿಸಿ, ಅಧಿಕಾರಿಗಳು ಸುಳ್ಳು ಉತ್ತರ ಕೊಟ್ಟಿದ್ದರೆ ಆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪ್ರಯೋಗಾಲಯದ ವರದಿ ಬಂದ ಬಳಿಕ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.