ಸರ್ಕಾರಿ ಕಚೇರಿ, ವಸತಿ ನಿಲಯ, ಆಸ್ಪತ್ರೆ ಸೇರಿದಂತೆ ಎಲ್ಲ ಶೌಚಾಲಯ ಗುಂಡಿಗಳನ್ನು ಸ್ವಚ್ಛಗೊಳಿಸಲು ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರ ಬಳಸಬೇಕು.
ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಕಟ್ಟುನಿಟ್ಟಿನ ಸೂಚನೆ
ಕನ್ನಡಪ್ರಭ ವಾರ್ತೆ ಹಾವೇರಿಸರ್ಕಾರಿ ಕಚೇರಿ, ವಸತಿ ನಿಲಯ, ಆಸ್ಪತ್ರೆ ಸೇರಿದಂತೆ ಎಲ್ಲ ಶೌಚಾಲಯ ಗುಂಡಿಗಳನ್ನು ಸ್ವಚ್ಛಗೊಳಿಸಲು ಸಕ್ಕಿಂಗ್ ಹಾಗೂ ಜಟ್ಟಿಂಗ್ ಯಂತ್ರ ಬಳಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಹಾಗೂ ಇನ್ ಸ್ಯಾನಿಟರಿ ಲ್ಯಾಟ್ರಿನ್ ಮತ್ತು ಸಫಾಯಿ ಕರ್ಮಚಾರಿಗಳ ಕುರಿತಾದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸವಣೂರನಲ್ಲಿ ಶೌಚಾಲಯ ಗುಂಡಿ ಸ್ವಚ್ಛತೆಗೆ ವ್ಯಕ್ತಿಗಳನ್ನು ಬಳಸಲಾಗಿದ್ದು, ಈ ಪ್ರಕರಣದಲ್ಲಿ ತಪ್ಪಿಸ್ಥರನ್ನು ಅಮಾನತು ಮಾಡುವ ಮೂಲಕ ತಪ್ಪಿಸ್ಥರ ವಿರುದ್ಧ ಕ್ರಮವಾಗಿದೆ. ಕುಸನೂರಿನಲ್ಲಿ ಇಂತಹ ಪ್ರಕರಣ ನಡೆದಿದ್ದು, ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.ಮೊದಲೇ ಖಾಲಿ ಮಾಡಿಸಿ:
ಶೌಚಾಲಯ ಗುಂಡಿಗಳು ತುಂಬುವರೆಗೆ ಕಾಯದೆ ಮೊದಲೇ ಸ್ವಚ್ಛತೆಗೆ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಪತ್ರ ರವಾನಿಸಬೇಕು ಹಾಗೂ ದೂರವಾಣಿ ಕರೆ ಮಾಡಬೇಕು. ಯಾವುದೇ ಕಾರಣಕ್ಕೂ ವ್ಯಕ್ತಿಗಳನ್ನು ಬಳಸುವಂತಿಲ್ಲ. ಸ್ಥಳೀಯ ಅಧಿಕಾರಿಗಳು ಇದನ್ನು ಗಂಭಿರವಾಗಿ ಪರಿಗಣಿಸಬೇಕು. ಸ್ಥಳೀಯ ನಗರಸಂಸ್ಥೆಗಳ ಮುಖ್ಯಾಧಿಕಾರಿಗಳು ಶೌಚಾಲಯ ಗುಂಡಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.ಜಾಗೃತಿ ಮೂಡಿಸಿ:
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನಿಷೇಧ ಕಾಯ್ದೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಅಧಿಕಾರಿಗಳು ಸಮನ್ವಯದಿಂದ ಮಾಡಬೇಕು ಎಂದು ಸೂಚನೆ ನೀಡಿದರು.ಸಮಿತಿ ನಾಮನಿರ್ದೇಶಿತ ಸದಸ್ಯ ಸುಭಾಸ ಬೆಂಗಳೂರ ಮಾತನಾಡಿ, ಶೌಚಾಲಯ ಗುಂಡಿ ಸ್ವಚ್ಛಗೊಳಿಸಲು ಜಟ್ಟಿಂಗ್, ಸಕ್ಕಿಂಗ್ ಮಿಷನ್ ಕಳುಹಿಸಿವುದು ವಿಳಂಬವಾಗುತ್ತಿದೆ. ಕೂಡಲೇ ಕಳಿಸುವ ವ್ಯವಸ್ಥೆ ಆಗಬೇಕು ಎಂದು ಸಭೆಯ ಗಮನಕ್ಕೆ ತಂದರೆ, ಇನ್ನೋರ್ವ ಸದಸ್ಯ ಭೀಮಪ್ಪ ಅವರು ಕೇಂದ್ರ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆಗೂ ಸಹ ₹ 5 ಶುಲ್ಕ ವಿಧಿಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರಿಕರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಮೂತ್ರವಿಸರ್ಜನೆ ಉಚಿತ ಪ್ರವೇಶ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಸೂಚನಾ ಫಲಕ ಅಳವಡಿಸಿ:ಬಸ್ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಉಚಿತ ಎಂದು ಸೂಚನಾ ಫಲಕ ಅಳವಡಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಫಲಕ ಅಳವಡಿಸಿದ ಜಿಪಿಎಸ್ ಫೋಟೋ ವರದಿ ಕಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ದಲ್ಜಿಜ್‌ಕುಮಾರ, ಎಸ್ಪಿ ಯಶೋದಾ ವಂಟಗೋಡಿ, ಸವಣೂರು ಉಪ ವಿಭಾಗಾಧಿಕಾರಿ ಪ್ರಕಾಶ ಖೋಡೆ, ಜಿಪಂ ಉಪಕಾರ್ಯದರ್ಶಿ ಡಾ. ಪುನಿತ್, ಜಿಲ್ಲಾ ಸರ್ಕಾರಿ ಅಭಿಯೋಜಕರಾದ ಸರೋಜಾ ಕೂಡಲಮಠ, ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ಸ್ಥಳೀಯ ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಇತರರಿದ್ದರು.