ಚುನಾವಣಾ ಆಯೋಗದ ಸೂಚನೆ ಮೀರಿದಲ್ಲಿ ಕಟ್ಟುನಿಟ್ಟಿನ ಕ್ರಮ: ಜುಬಿನ್ ಮೊಹಾಪಾತ್ರ ಎಚ್ಚರಿಕೆ

| Published : Apr 25 2024, 01:03 AM IST

ಚುನಾವಣಾ ಆಯೋಗದ ಸೂಚನೆ ಮೀರಿದಲ್ಲಿ ಕಟ್ಟುನಿಟ್ಟಿನ ಕ್ರಮ: ಜುಬಿನ್ ಮೊಹಾಪಾತ್ರ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ೩ ಫ್ಲೈಯಿಂಗ್ ಸ್ಕಾಡ್‌ಗಳು, ೩ ವೀಡಿಯೋ ಸರ್ವೇಲೆನ್ಸ್ ಟೀಮ್‌ಗಳು ಕೆಲಸ ಮಾಡಲಿವೆ. ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗುಗೊಳಿಸಲಾಗುವುದು ಎಂದು ಜುಬಿನ್ ಮಹಾಪಾತ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆಯ ಸುತ್ತ ಮುತ್ತಲಿನ ೨೦೦ ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್‌ ೧೪೪ರ ಅನ್ವಯ ಪ್ರತಿಬಂಧಕಾಜ್ಞೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ ಪ್ರತಿಭಂಧಕಾಜ್ಞೆ ಇರುವ ವ್ಯಾಪ್ತಿಯ ಒಳಗಡೆ ಯಾವುದೇ ರಾಜಕೀಯ ಪಕ್ಷಗಳ ಸಂಕೇತ, ಧ್ವಜ ಬಳಕೆ ಹಾಗೂ ಚಟುವಟಿಕೆಗಳನ್ನು ನಡೆಸಲು ಅವಕಾಶವಿರುವುದಿಲ್ಲ. ಮತಗಟ್ಟಯ ಹೊರಗೆ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ತಮ್ಮದೇ ಆದ ಬೂತ್ ತೆರೆಯಲು ಅವಕಾಶವಿದ್ದರೂ ಇದಕ್ಕೆ ಕಟ್ಟುನಿಟ್ಟಿನ ನಿಯಮಗಳು ಅನ್ವಯವಾಗುತ್ತವೆ. ನಿಯಮ ಉಲ್ಲಂಘಿಸಿದಲ್ಲಿ ಚುನಾವಣಾ ಆಯೋಗದ ನಿಯಮ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ಸಹಾಯಕ ಆಯುಕ್ತ, ಸಹಾಯಕ ಚುನಾವಣಾ ಅಧಿಕಾರಿ ಜುಬಿನ್ ಮೊಹಾಪಾತ್ರ ತಿಳಿಸಿದ್ದಾರೆ.

ಅವರು ಬುಧವಾರ ಪುತ್ತೂರು ತಾಲೂಕು ಆಡಳಿತ ಸೌಧದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಜಿಲ್ಲಾ ಚುನಾವಣಾ ಅಧಿಕಾರಿಯವರ ಆದೇಶದ ಪ್ರಕಾರ ಪ್ರತಿ ಮತಗಟ್ಟೆಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯನ್ನು ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಆ ಪರಿಧಿಯಲ್ಲಿ ಕೆಂಪು ಧ್ವಜ ನೆಡಲಾಗುವುದು. ಅದರೊಳಗಿನ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿರುವುದಿಲ್ಲ. ಅದರ ಹೊರ ಭಾಗದಲ್ಲಿ ೧೦ ಅಡಿ ಅಗಲ ಮತ್ತು ೧೦ ಅಡಿ ಉದ್ದದ ಒಂದು ಪೆಂಡಾಲ್ ಹಾಕಿ ಬೂತ್ ರಚಿಸಿಕೊಳ್ಳಬಹುದು. ಅದರ ಮೇಲೆ ಪಕ್ಷದ ಒಂದು ಧ್ವಜ, ಒಂದು ಬ್ಯಾನರ್ ಅಳವಡಿಸಬಹುದು. ಒಂದು ಟೇಬಲ್ ಹಾಕಿಕೊಂಡು ಇಬ್ಬರು ಮಾತ್ರ ಕೂರಬಹುದು. ಒಂದೇ ಕೇಂದ್ರದಲ್ಲಿ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳು (ಸೆಕ್ಟರ್ ಬೂತ್) ಇದ್ದ ಸಂದರ್ಭದಲ್ಲೂ ಪಕ್ಷಗಳ ಬೂತ್ ಒಂದಕ್ಕಿಂತ ಹೆಚ್ಚು ಇರಬಾರದು. ಅಲ್ಲಿ ಜನ ಗುಂಪುಗೂಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಎಲ್ಲ ಮತದಾನ ಕೇಂದ್ರಗಳಲ್ಲಿ ಏ.೨೬ರಂದು ಮುಂಜಾನೆ ೫.೩೦ರಿಂದ ಅಣಕು ಮತದಾನ ನಡೆಯುತ್ತದೆ. ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಮ್ಮುಖ ಅಣಕು ಮತದಾನದ ಮೂಲಕ ಮತಯಂತ್ರಗಳ ಪರಿಶೀಲನೆ ನಡೆಯಲಿದೆ. ಇದಾದ ಬಳಿಕ ಇವಿಎಂನ್ನು ಮತದಾನಕ್ಕೆ ಸಜ್ಜುಗೊಳಿಸಲಾಗುವುದು. ೭ ಗಂಟೆಗೆ ಮತದಾನ ಆರಂಭಗೊಂಡು ಸಂಜೆ ೬.೩೦ರ ವರೆಗೆ ನಡೆಯಲಿದೆ. ಅವಧಿ ಮುಗಿಯುವ ಹಂತದಲ್ಲಿ ಮತದಾನ ಕೇಂದ್ರದಲ್ಲಿ ಇದ್ದ ಎಲ್ಲರಿಗೂ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದರು.ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಸೆಕ್ಟರ್‌ಗಳನ್ನು ಸ್ಥಾಪಿಸಲಾಗಿದೆ. ಪುತ್ತೂರು ಕ್ಷೇತ್ರದಲ್ಲಿ ೨೦ ಸೆಕ್ಟರ್‌ಗಳಿವೆ. ಪ್ರತಿ ಸೆಕ್ಟರ್‌ಗೆ ಒಬ್ಬರು ಸೆಕ್ಟರ್ ಆಫೀಸರ್ ಇದ್ದು, ಅವರಿಗೆ ೨ ದಿನಗಳ ಕಾಲ ದಂಡಾಧಿಕಾರಿ ಅಧಿಕಾರ ನೀಡಲಾಗಿದೆ. ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ ೩ ಫ್ಲೈಯಿಂಗ್ ಸ್ಕಾಡ್‌ಗಳು, ೩ ವೀಡಿಯೋ ಸರ್ವೇಲೆನ್ಸ್ ಟೀಮ್‌ಗಳು ಕೆಲಸ ಮಾಡಲಿವೆ. ಜಿಲ್ಲೆಯ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗುಗೊಳಿಸಲಾಗುವುದು ಎಂದು ಜುಬಿನ್ ಮಹಾಪಾತ್ರ ಹೇಳಿದರು.ಗುರುವಾರ ಮಸ್ಟರಿಂಗ್ ಕಾರ್ಯವು ಪುತ್ತೂರಿನ ತೆಂಕಿಲ ವಿವೇಕಾನಂದ ಪ್ರೌಢಶಾಲೆಯಲ್ಲಿ ನಡೆಯಲಿದೆ. ಆಯಾ ಸೆಕ್ಟರ್ ವ್ಯಾಪ್ತಿಗೆ ಒಂದರಂತೆ ಅಂಕಣ ತೆರೆದು ಅದರ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ ಎಪಿಆರ್‌ಒ ಮತ್ತು ಮೂವರು ಪಿಒ ಗಳನ್ನು ವಿಂಗಡಿಸಿ ನೀಡಲಾಗುತ್ತದೆ. ಪ್ರತಿ ಮತಗಟ್ಟೆಗೆ ಬೇಕಾಗುವ ಇವಿಎಂ, ವಿವಿಪ್ಯಾಟ್, ಮತದಾನ ಮಾಡುಲು ರಚಿಸುವ ಪರಿಕರ, ಅಳಿಸಲಾಗದ ಶಾಯಿ, ಪುಸ್ತಕ ಸಹಿತ ಸ್ಟೇಷನರಿ ವಸ್ತುಗಳು ಇತ್ಯಾದಿಗಳನ್ನು ನೀಡಿ ವಾಹನದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಮತಗಟ್ಟೆಗೆ ಕಳಿಸಿಕೊಡಲಾಗುತ್ತದೆ. ಗುರುವಾರ ಸಂಜೆಯೇ ಮತಯಂತ್ರಗಳ ಜೋಡಣೆ ಕಾರ್ಯ ಪೂರ್ಣಗೊಳ್ಳುತ್ತದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ಹನಮ ರೆಡ್ಡಿ, ತಹಸೀಲ್ದಾರ್ ಕುಂಞ ಅಹ್ಮದ್ ಉಪಸ್ಥಿತರಿದ್ದರು.