ಸಾಲಕ್ಕೆ ಪರಿಹಾರ, ಪಿಂಚಣಿ ಜಮೆ ಮಾಡಿದರೆ ಕಠಿಣ ಕ್ರಮ

| Published : May 22 2024, 12:53 AM IST

ಸಾಲಕ್ಕೆ ಪರಿಹಾರ, ಪಿಂಚಣಿ ಜಮೆ ಮಾಡಿದರೆ ಕಠಿಣ ಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಬರ ಪರಿಹಾರ, ವಿವಿಧ ಯೋಜನೆಗಳ ಸಹಾಯಧನ, ಸಾಮಾಜಿಕ ನೆರವು ಯೋಜನೆಯ ಸಹಾಯಧನವನ್ನು ರೈತರ ಒಪ್ಪಿಗೆ ಇಲ್ಲದೆ ಸಾಲದ ಖಾತೆಗೆ ಜಮಾ ಮಾಡಿಕೊಂಡರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ. ಸುಶೀಲಾ ಜಿಪಂ ಸಿಇಒ ಗರೀಮಾ ಪನ್ವಾರ್‌ ನೇತೃತ್ವದಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕ್‌ ವ್ಯವಸ್ಥಾಪಕರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಜಿಲ್ಲಾಮಟ್ಟದ ಸಭೆ (ಡಿಎಲ್‌ಆರ್‌ಸಿ) ಯಲ್ಲಿ ಮಾತನಾಡಿದರು.

ರೈತರು, ಸಾರ್ವಜನಿಕರೊಂದಿಗೆ ಬ್ಯಾಂಕ್‌ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಬೇಕು. ಒಂದು ವೇಳೆ ತಾಂತ್ರಿಕ ದೋಷಗಳಿದ್ದರೆ, ತಿಳಿವಳಿಕೆ ಮೂಡಿಸಿ ಇತ್ಯರ್ಥಪಡಿಸಿಬೇಕು. ಬ್ಯಾಂಕುಗಳ ವಿರುದ್ಧ ಸಾರ್ವಜನಿಕರಿಂದ ದೂರು ಬರದಂತೆ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.

ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದ್ದು, ಅದರಂತೆ ಸರ್ಕಾರದಿಂದ ಬರ ಪರಿಹಾರದ ಮೊತ್ತವನ್ನು ರೈತರಿಗೆ ಪರಿಹಾರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಆದರೆ, ಕೆಲ ರೈತರು ಬ್ಯಾಂಕ್ ಅಧಿಕಾರಿಗಳು ಸದರಿ ಪರಿಹಾರದ ಮೊತ್ತವನ್ನು ಸಾಲದ ರೂಪದಲ್ಲಿ ಕಡಿತಗೊಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಇಂತಹ ಸಮಸ್ಯೆಗಳಿಗೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಪ್ರಕೃತಿ ವಿಕೋಪದಡಿ ಸಂದಾಯವಾಗುವ ಹಣವನ್ನು ರೈತರ ಸಾಲದ ಖಾತೆಗೆ ಜಮಾ ಮಾಡುವಂತಿಲ್ಲವೆಂದು ಸ್ಪಷ್ಟವಾದ ಸರ್ಕಾರದ ನಿರ್ದೇಶನವಿದ್ದು, ಒಂದು ವೇಳೆ ಈ ರೀತಿ ಮಾಡಿದಲ್ಲಿ ತಾವುಗಳು ಸರ್ಕಾರದ ನಿದರ್ಶನ ಉಲ್ಲಂಘಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ತಪ್ಪು ಮಾಡುವ ಬ್ಯಾಂಕ್‌ಗಳ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಸೂಚಿಸಿದರು.

ಡೇ-ನಲ್ಮ್‌ ಯೋಜನೆಯಡಿ ಮಹಿಳಾ ಸ್ವ-ಸಹಾಯ ಸಂಘಗಳು ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು ನೋಂದಣಿ ಪ್ರಮಾಣ ಪತ್ರ ಅವಶ್ಯಕತೆ ಇರುವುದಿಲ್ಲ ಹೀಗಾಗಿ ಸ್ವ-ಸಹಾಯ ಸಂಘಗಳ ಖಾತೆ ತೆರೆಯಲು ಅವಕಾಶ ಕಲ್ಪಿಸಿ ಕೊಡುವಂತೆ ನಿರ್ದೇಶಿಸಿದರು.

ಪಿಎಂ ಸ್ವನಿಧಿ ಯೋಜನೆಯಡಿಯಲ್ಲಿ ಸಾಲ ನೀಡುವಾಗ ಫಲಾನುಭವಿಗಳಿಗೆ ಯಾವುದೇ ಸ್ಟ್ಯಾಂಪ್ ಶುಲ್ಕ ವಿಧಿಸತಕ್ಕದ್ದಲ್ಲ ಎಂದು ಸೂಚಿಸಿದರು.ಸಭೆಯಲ್ಲಿ ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಲೋಕೇಶ್, ಎಸ್‌ಬಿಐ ಪ್ರಾದೇಶಿಕ ಕಚೇರಿಯ ಮುಖ್ಯ ವ್ಯವಸ್ಥಾಪಕ ಲೋಯಿಸ್ ಸಿಎಂ, ಕೆಜಿಬಿ ಕರ್ನಾಟಕ ಗ್ರಾಮೀಣ ಪ್ರಾದೇಶಿಕ ವ್ಯವಸ್ಥಾಪಕ ಗುರುಪ್ರಸಾದ್ ಸ್ವಾಮಿ, ಕೆಜಿಬಿ ಕರ್ನಾಟಕ ರಿಜಿನಲ್ ಆಫೀಸರ್ (ಸಿಎಂ ಕ್ರೆಡಿಟ್) ಸುಬೇದಾರ್, ಲೀಡ್ ಬ್ಯಾಂಕ್ ನ ಸಿಬ್ಬಂದಿಗಳಾದ ಕುಮಾರಸ್ವಾಮಿ, ಅಮೀರ್ ಪಟೇಲ್ ಸೇರಿದಂತೆ ಇತರರಿದ್ದರು.