ಅಕ್ರಮ ಅಕ್ಕಿ ಸಾಗಿಸಿದ್ರೆ ಮೇಲೆ ಕಠಿಣ ಕ್ರಮ: ಸಚಿವ ಆರ್‌.ಬಿ.ತಿಮ್ಮಾಪೂರ

| Published : Feb 04 2025, 12:32 AM IST

ಅಕ್ರಮ ಅಕ್ಕಿ ಸಾಗಿಸಿದ್ರೆ ಮೇಲೆ ಕಠಿಣ ಕ್ರಮ: ಸಚಿವ ಆರ್‌.ಬಿ.ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ರಮ ಕಾಳಸಂತೆ ಮಾಡುವವರ ವಿರುದ್ಧ 17 ಪ್ರಕರಣ ದಾಖಲಿಸಿಕೊಂಡು 1020 ಕ್ವಿಂಟಲ್ ಅಕ್ಕಿ ಹಾಗೂ 12 ವಾಹನ ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಟ ಪ್ರಕರಣಗಳಲ್ಲಿ ಹೆಚ್ಚಾಗಿ ಕಂಡುಬಂದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ನೂತನ ಸಭಾಭವನದಲ್ಲಿ ಸೋಮವಾರ ನಡೆದ ಜಿಪಂ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಕ್ರಮವಾಗಿ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಹಾಗೂ ಸಾಗಾಟನೆ ಸಂಪೂರ್ಣವಾಗಿ ತಡೆಯುವ ನಿಟ್ಟಿನಲ್ಲಿ ಎಷ್ಟೇ ಪ್ರಯತ್ನ ಪಟ್ಟರು, ಅಕ್ರಮವಾಗಿ ಸಾಗಾಟ ಮಾಡುವವರು ರಂಗೋಲಿ ಕೆಳಗೆ ನುಗ್ಗುವ ಪ್ರಯತ್ನ ಮಾಡುತ್ತಿದ್ದು, ಅಂತವರ ವಿರುದ್ಧ ಕಠಿಣ ಶಿಕ್ಷೆಗೆ ಗುರುಪಡಿಸಲು ಮುಂದಾಗಿರುವುದಾಗಿ ಸಚಿವರು ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಅನಧಿಕೃತವಾಗಿ ಅಕ್ಕಿ ಸಾಗಾಟ ತಡೆಗೆ ಚೆಕ್ ಪೋಸ್ಟ್‌ ಮಾಡಲು ತಿಳಿಸಿದರು. ಈಗಾಗಲೇ ಅಕ್ರಮ ಕಾಳಸಂತೆ ಮಾಡುವವರ ವಿರುದ್ಧ 17 ಪ್ರಕರಣ ದಾಖಲಿಸಿಕೊಂಡು 1020 ಕ್ವಿಂಟಲ್ ಅಕ್ಕಿ ಹಾಗೂ 12 ವಾಹನ ಜಪ್ತಿ ಮಾಡಲಾಗಿದೆ. 29 ಆರೋಪಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗಿದೆ. ಹೋಟೆಲ್‌ನಲ್ಲಿ ಅಕ್ರಮವಾಗಿ ಗೃಹಬಳಕೆ ಸಿಲೆಂಡರ್‌ ಬಳಕೆ ಮಾಡುತ್ತಿದ್ದವರ ಮೇಲೆ 22 ಪ್ರಕರಣ ದಾಖಲಿಸಿ ಉಪವಿಭಾಗಾಧಿಕಾರಿಗಳ ಹಂತದಲ್ಲಿ ವಿಚಾರಣೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ 1140 ಅನರ್ಹ ಬಿಪಿಎಲ್ ಪಡಿತರ ಚೀಟಿ ಹೊಂದಿದವರನ್ನು ಪತ್ತೆ ಹಚ್ಚಿ ₹12 ಲಕ್ಷ ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯಡಿ ತುಳಸಿಗೆರೆ ಕೆರಯಲ್ಲಿ ನೀರು ತುಂಬಿಸುವುದರ ಜೊತೆಗೆ ಇತರೆ ಕೆರೆಗಳನ್ನು ತುಂಬಿಸುವ ಕಾರ್ಯವಾಗಬೇಕು. ನಬಾರ್ಡ್‌ ಯೋಜನೆಯಡಿ ಕೆರೆಗಳ ಆಧುನೀಕರಣ, ಆಣೆಕಟ್ಟುಗಳ ನಿರ್ಮಾಣ, ಏತ ನೀರಾವರಿ ಯೋಜನೆ, ಚೆಕ್‌ಡ್ಯಾಂ, ಪ್ರವಾಹ ಸಂರಕ್ಷಣಾ ಕಾಮಗಾರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಭೆಗೆ ನೀಡದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ ಸಭೆಗೆ ಸಂಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ಕೈಗೊಂಡ ಪ್ರತಿಯೊಂದು ಕಾಮಗಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಾಹಿತಿ ಪುಸ್ತಕದಲ್ಲಿ ಕೇವಲ ಹೆಸ್ಕಾಂ ಬಗ್ಗೆ ಮಾತ್ರ ಮಾಹಿತಿ ಇದೆ. ಆದರೆ ಕೆಪಿಟಿಸಿಎಲ್ ಮಾಹಿತಿ ಏಕೆ ಇಲ್ಲ. ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಕೆಲಸ ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತೋಟದ ಮನೆಗಳಿಗೆ ರಾತ್ರಿವೇಳೆ ಸಿಂಗಲ್ ಫೇಸ್‌ ವಿದ್ಯುತ್ ನೀಡಲು ಕ್ರಮವಹಿಸುವಂತೆ ಬೀಳಗಿ ಶಾಸಕರು ಆಗಿರುವ ಹಟ್ಟಿ ಚಿನ್ನದ ಗಣಿ ನಿಯಮಿತ ಅಧ್ಯಕ್ಷ ಜೆ.ಟಿ.ಪಾಟೀಲ ತಿಳಿಸಿದರು. ಹೆಸ್ಕಾಂ, ಕೆಪಿಟಿಸಿಎಲ್ ಹಾಗೂ ಏತ ನೀರಾವರಿ ಯೋಜನೆಗಳ ಬಗ್ಗೆ ಫೆ.10 ರೊಳಗಾಗಿ ಪ್ರತ್ಯೇಕ ಸಭೆ ಕರೆಯಲಾಗುವುದೆಂದು ಸಚಿವರು ತಿಳಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸರಕಾರದ ವಿವಿಧ ಯೋಜನೆಗಳಿಗೆ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಸಾಲ ವಿತರಿಸದೇ ಸತಾಯಿಸುತ್ತಿರುವುದು ಕಂಡುಬರುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮವಹಿಸಲು ಸೂಚಿಸಿದರು. ಗದ್ದನಕೇರಿ ಕ್ರಾಸ್‌ನಲ್ಲಿ 4 ಮಾರ್ಗಗಳಿಂದ ಸಾಕಷ್ಟು ಪ್ರಮಾಣದಲ್ಲಿ ಬಸ್‌ಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ಕೂಡಲು ವ್ಯವಸ್ಥೆ ಇಲ್ಲ. ನಾಲ್ಕು ಕಡೆಗಳಲ್ಲಿ ಬಸ್ ಶೇಲ್ಟರ್ ನಿರ್ಮಿಸಲು ಕ್ರಮವಹಿಸಲು ತಿಳಿಸಿದರು. ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮಕ್ಕಾಗಿ ಸೂಚನೆ ನೀಡಿದರು. ನಗರಾಭಿವೃದ್ಧಿ ಕೋಶದ ಇಲಾಖೆಯಲ್ಲಿ ಕಡಿಮೆ ಪ್ರಗತಿ ಸಾಧಿಸಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿ ಸಚಿವರು ಅಂತಹ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ, ಶಾಸಕರು ಜೆ.ಟಿ.ಪಾಟೀಲ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಮುಖ್ಯ ಯೋಜನಾಧಿಕಾರಿ ಪುನಿತ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.