ಸಾರಾಂಶ
ಲಕ್ಷ್ಮೇಶ್ವರ: ತಾಲೂಕಿನ ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಅಧಿಕಾರಿಗಳು ಅಕ್ರಮವಾಗಿ ಮರಳು ಗಣಿಗಾರಿಕೆ ಕುಮ್ಮಕ್ಕು ನೀಡುವ ಬದಲು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಆಗ್ರಹಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಘಟನೆ ನಡೆಯಿತು.ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅನಿಧಿಕೃತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಅಂಥವರ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಬಂದ್ ಮಾಡಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಲ್ಲದೆ ಅರಣ್ಯ ಇಲಾಖೆಯ ಭೂಮಿಯಲ್ಲಿ ಕೆಲವರು ಅರಣ್ಯ ಭೂಮಿಯನ್ನು ಲಾವಣಿಗೆ ಹಾಕಿದ್ದಾರೆ. ಅಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಇದರ ಬಗ್ಗೆ ದೂರು ಬಂದಿದ್ದು, ಇಂಥವರಿಗೆ ನಮ್ಮ ಕುಮ್ಮಕ್ಕು ಇರುವುದಿಲ್ಲ. ಅವರ ವಿರುದ್ಧ ಅಧಿಕಾರಿಗಳು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು, ಅಕ್ರಮ ಮರಳು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕಿನಲ್ಲಿ ನಡೆಯುತ್ತಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಆಯ್ಕೆಪಟ್ಟಿ ತಡೆಹಿಡಿಯಬೇಕು. ಅದರಲ್ಲಿ ಲೋಪ-ದೋಷಗಳಿವೆ. ರಾಷ್ಟ್ರಿಯ ಮಾಹಿತಿ ಕೇಂದ್ರದಲ್ಲಿ ಜಿಲ್ಲೆಯಲ್ಲಿ 5,000 ಅರ್ಜಿ ಸಲ್ಲಿಕೆಯಾಗಿದ್ದು, ಅದರಲ್ಲಿ 3500 ಅರ್ಜಿಗಳಷ್ಟೆ ಸ್ವೀಕಾರವಾಗಿದೆ ಎಂದು ಮಾಹಿತಿ ತೋರಿಸುತ್ತಿದೆ. ಇನ್ನುಳಿದ 1500 ಅರ್ಜಿಗಳು ಎಲ್ಲಿ? ಈ ಕುರಿತು ಕೆಲವು ಅಭ್ಯರ್ಥಿಗಳು ದೂರು ನೀಡುತ್ತಿದ್ದಾರೆ. ಇದರ ಬಗ್ಗೆ ಕೂಲಂಕಷ ಪರಿಶೀಲನೆ ಆಗಬೇಕು. ಆಯ್ಕೆಪಟ್ಟಿಯಲ್ಲಿ ಅನುಸರಿಸಬೇಕಾದ ಮಾನದಂಡ ಅನುಸರಿಸಿಲ್ಲ ಎಂಬ ದೂರುಗಳು ಬಂದಿವೆ. ಕೆಲವರು ಹೆಚ್ಚಿನ ಅಂಕ ಗಳಿಸಿ ಆಯ್ಕೆ ಆಗಿಲ್ಲ ಎಂದು ನಮಗೆ ಅನ್ಯಾಯವಾಗಿದೆ ಎಂದು ನಮ್ಮ ಎದುರು ಕಣ್ಣೀರು ಹಾಕುತ್ತಿದ್ದಾರೆ. ಅದೇ ರೀತಿ ಎಲ್ಲ ಇಲಾಖೆಯ ಅಧಿಕಾರಿಗಳು ಆಫೀಸ್ ಬಿಟ್ಟು ಹೊರಬಂದು ಕೆಲಸ ಮಾಡಬೇಕು. ಇಲಾಖೆಯ ಸಮಸ್ಯೆಗಳ ಬಗ್ಗೆ ಕ್ರಿಯಾ ಯೋಜನೆ ಕೊಟ್ಟರೆ ಅನುದಾನ ತರಬಹುದು ಎಂದರು.
ರಸ್ತೆಯ ತೆಗ್ಗು ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಡಬೇಕು. ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಸರಿಪಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಪಂ ಆಡಳಿತ ಅಧಿಕಾರಿ ಎಂ.ವಿ. ಚಳಗೇರಿ, ಸರಿಯಾದ ವೇಳೆಗೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು. ತಡವಾಗಿ ಬಂದ ಬಿಇಒ ಅವರನ್ನು ತರಾಟೆ ತೆಗದುಕೊಂಡರು.
ಅಂಗನವಾಡಿ ಹಾಗೂ ಶಾಲೆಯಲ್ಲಿ ಜೆಜೆಎಂ ಅಳವಡಿಸಬೇಕು. ಶುದ್ಧ ಕುಡಿಯುವ ನೀರನ್ನು ಒದಗಿಸಿ, ಎಲ್ಲಿ ಶುದ್ಧ ನೀರು ಇಲ್ಲವೋ ಆ ಬಗ್ಗೆ ವರದಿ ಕೊಡಿ. ಸಭೆಗೆ ಬರುವಾಗ ತಮ್ಮ ಇಲಾಖೆಯ ಸರಿಯಾದ ಮಾಹಿತಿ ತರಬೇಕು ಎಂದು ಹೇಳಿದರು.ತಹಸೀಲ್ದಾರ್ ವಾಸುದೇವ ವಿ. ಸ್ವಾಮಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, ವಿದ್ಯಾರ್ಥಿಗಳ ಬಸ್ ಸಮಸ್ಯೆ ಸರಿಪಡಿಸಿ, ಪದೇ ಪದೇ ತೊಂದರೆ ಬರದೇ ಹಾಗೆ ನೋಡಿಕೊಳ್ಳಿ ಎಂದು ಸಾರಿಗೆ ಇಲಾಖೆಯವರಿಗೆ ಹೇಳಿದರು.
ಕಾರ್ಮಿಕ ಇಲಾಖೆಯ ಕಟ್ಟಡ ಕಾರ್ಮಿಕರಿಗೆ ಸಲಕರಣೆಗಳನ್ನು ವಿತರಿಸಲಾಯಿತು. ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.