ಕೆ.ಆರ್.ನಗರ ಪಟ್ಟಣ ಸೇರಿದಂತೆ ಠಾಣೆಯ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಕಳ್ಳತನ ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಸುದ್ದಿದ್ಧಿಗಾರರು ಅವರ ಗಮನಕ್ಕೆ ತಂದಾಗ ಇದಕ್ಕೆ ಉತ್ತರಿಸಿದ ಡಿಐಜಿ, ಇಂತಹ ನಿಯಮಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಪಟ್ಟಣದ ಠಾಣೆಗೆ ಕಾಯಕಲ್ಪ ನೀಡಿ ನಾಗರಿಕರಿಗೆ ಅಗತ್ಯ ರಕ್ಷಣೆ ನೀಡುವುದರ ಜತೆಗೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ವಲಯದ ಡಿಐಜಿ ಡಾ.ಎಂ.ಬಿ. ಬೋರಲಿಂಗಯ್ಯ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿ ಪೊಲೀಸರ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಇಲ್ಲಿ ಗಾಂಜಾ ಮಾರಾಟ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ವ್ಯಾಪಕವಾಗಿ ದೂರು ಕೇಳಿ ಬರುತ್ತಿದ್ದು, ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಪಟ್ಟಣ ಸೇರಿದಂತೆ ಠಾಣೆಯ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಕಳ್ಳತನ ಮತ್ತಿತರ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಸುದ್ದಿದ್ಧಿಗಾರರು ಅವರ ಗಮನಕ್ಕೆ ತಂದಾಗ ಇದಕ್ಕೆ ಉತ್ತರಿಸಿದ ಡಿಐಜಿ, ಇಂತಹ ನಿಯಮಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ ಎಂದು ತಿಳಿಸಿದರು.

ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಇದರೊಂದಿಗೆ ಕಾನೂನು ಬಾಹಿರ ಚಟುವಟಿಕೆಗಳ ಸಂಖ್ಯೆಯೂ ಹೆಚ್ಚುತ್ತಿರುವುದರಿಂದ ಕೆ.ಆರ್. ನಗರ ಪಟ್ಟಣಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ ಆರಂಭಿಸಿ ಜನರಿಗೆ ಅಗತ್ಯ ರಕ್ಷಣೆ ನೀಡಲು ಕ್ರಮ ಕೈಗೊಂಡು, ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಇದರೊಟ್ಟಿಗೆ ಇಸ್ಪೀಟು ದಂಧೆಯ ಬಗ್ಗೆ ನಮಗೆ ಖಚಿತ ಮಾಹಿತಿ ಮೂಲಕ ದೂರುಗಳು ಬಂದಿದ್ದು, ಇವುಗಳನ್ನು ನಿಗ್ರಹಿಸುವಂತೆ ಎಸ್ಪಿ, ಎಎಸ್ಪಿ, ಡಿವೈಎಸ್ಪಿ ಮತ್ತು ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಗೆ ಸೂಚನೆ ನೀಡಿದ್ದೇನೆ ಎಂದರು.

ಮನೆ ಮನೆಗೆ ಪೊಲೀಸ್ ಭೇಟಿ ನೀಡಿ ನಾಗರೀಕರಲ್ಲಿ ಭದ್ರತೆಯ ಬಗ್ಗೆ ಅಭಯ ಮೂಡಿಸುವ ಕೆಲಸ ಆಗುತ್ತಿಲ್ಲವೆಂಬ ದೂರುಗಳಿದ್ದು, ಈ ಬಗ್ಗೆಯೂ ಕ್ರಮ ವಹಿಸಲಾಗುತ್ತದೆ ಎಂದ ಅವರು, ಅಕ್ರಮ ಚಟುವಟಿಕೆಗಳ ಬಗ್ಗೆ ನಾಗರೀಕರು ನಿರ್ಭಯದಿಂದ ದೂರು ಮತ್ತು ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಸಿ. ಮಲ್ಲಿಕ್, ಡಿವೈಎಸ್ಪಿ ಟಿ.ಬಿ. ರಾಜಣ್ಣ, ಇನ್ಸ್ ಪೆಕ್ಟರ್ ಎಸ್. ಶಿವಪ್ರಕಾಶ್, ಎಸ್ಐ ಆರ್. ಸ್ವಾಮಿಗೌಡ, ಎಎಸ್ಐ ಶ್ರೀನಿವಾಸ್, ಮುಖ್ಯ ಪೇದೆಗಳಾದ ಪರಶುರಾಮೇಗೌಡ, ಮಧುಕುಮಾರ್ ಇದ್ದರು.