ಅಕ್ರಮ ಮರಳು ಸಾಗಾಟ ತಡೆಗೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಡಾ.ಸುಶೀಲಾ

| Published : May 30 2024, 12:45 AM IST

ಸಾರಾಂಶ

ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮರಳು ಮಾನಿಟರಿಂಗ್ ನಿಯಂತ್ರಣ ಸಮಿತಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ದೂರುಗಳು ಬಂದರೆ ತಕ್ಷಣ ಎಫ್ಐಆರ್ ದಾಖಲಿಸಿ - ದುಪ್ಪಟ್ಟು ದಂಡ ವಿಧಿಸಿ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಬಿ. ಸುಶೀಲಾ ಖಡಕ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಮರಳು ಮೇಲ್ವಿಚಾರಣೆ ಮತ್ತು ನಿಯಂತ್ರಣ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.

ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಆರ್‌ಟಿಓ, ಪರಿಸರ ನಿಯಂತ್ರಣ ಮಂಡಳಿ ಹೀಗೆ ಎಲ್ಲಾ ಇಲಾಖೆ ಅಧಿಕಾರಿಗಳು ಸಂಘಟಿತವಾಗಿ ಗಸ್ತು ಮಾಡುವ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣ, ಸಾಗಟದ ನಿಯಂತ್ರಣಕ್ಕೆ ಮುಂದಾಗಬೇಕು. ದಂಡ ಹಾಕಿದರೆ ಅದರ ಪರಿಣಾಮ ಹೇಗಿರಬೇಕು ಎಂದರೆ ಇನ್ನೊಂದು ಸಾರಿ ಅಕ್ರಮ ಮರಳು ಸಾಗಾಣಿಕೆಗೆ ಮುಂದಾಗಿರಬಾರದು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಅಕ್ರಮವಾಗಿ ಮರಳು ಸಂಗ್ರಹಿಸಿಟ್ಟುಕೊಂಡರೆ ಆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ತಹಸೀಲ್ದಾರು ಮತ್ತು ಪೊಲೀಸ್ ಸಿಬ್ಬಂದಿ ಕ್ರಮಕ್ಕೆ ಮುಂದಾಗಬೇಕು. ಜಿಲ್ಲೆಯಲ್ಲಿ ಅಕ್ರಮ ಮರಳು ಕುರಿತಂತೆ ಸಾರ್ವಜನಿಕರಿಂದ ನಿತ್ಯ ದೂರು ಬರುತ್ತಿವೆ. ಅಧಿಕಾರಿಗಳು ಸಮಪರ್ಕವಾಗಿ ನಿರ್ವಹಣೆ ಮಾಡಿ ಕಾನೂನಿನ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ತಾಲೂಕು ಹಂತದಲ್ಲಿ ಸಮಿತಿ ರಚಸಿ; ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಪರವಾನಿಗೆ, ರಾಯಲ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ತಪಾಸಣೆ ಮಾಡಬೇಕು. ಅತಿಭಾರದೊಂದಿಗೆ ಸಾಗುವ ವಾಹನಗಳಿಗೆ ದಂಡ ಹಾಕುವುದಲ್ಲದೇ ಎಫ್‌ಐಆರ್ ದಾಖಲಿಸಬೇಕು. ಇನ್ನು ತಾಲೂಕು ಹಂತದಲ್ಲಿಯೂ ಮರಳು ಮಾನಿಟರಿಂಗ್ ನಿಯಂತ್ರಣ ಸಮಿತಿ ಸಭೆ ನಡೆಸಬೇಕು. ಸಹಾಯಕ ಆಯುಕ್ತರ ಸಮಿತಿ‌ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ನಿಗಾ ವಹಿಸಬೇಕು‌ ಎಂದರು.

ಜಿಲ್ಲೆಯಲ್ಲಿ ಅನಧಿಕೃತ ಮರಳು ಸಾಗಣೆ ನಡೆದಿರುವ ಜನವರಿ ತಿಂಗಳಿಂದ ಏಪ್ರಿಲ್ ವರೆಗೆ 29 ಎಫ್.ಐ.ಆರ್ ದಾಖಲಿಸಿ ಒಟ್ಟು 10,66,020 ಲಕ್ಷ ರೂಗಳ ದಂಡ ವಸೂಲಿ ಮಾಡಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್‌ ಪಾಟೀಲ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಪ್ರಕಾಶ ಕುದರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪೂರ್ಣಿಮಾ ಸಿ ಸೇರಿದಂತೆ ಆರ್.ಟಿ.ಓ ಅಧಿಕಾರಿಗಳು, ಎಲ್ಲಾ ತಾಲೂಕಿನ ತಹಶಿಲ್ದಾರರು ಹಾಗೂ ಸಂಬಂಧಿಸಿದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.