ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದು ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪವಿಭಾಗ ವ್ಯಾಪ್ತಿಯ ಮುಧೋಳ, ರಬಕವಿ-ಬನಹಟ್ಟಿ ಹಾಗೂ ಜಮಖಂಡಿಯಲ್ಲಿ ಪಡಿತರ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಜಾಲ ಕಾರ್ಯಪ್ರವೃತ್ತವಾಗಿದ್ದು ಕಂಡು ಬಂದಿದೆ. ಮಂತ್ರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ವಿಷಯ ಗಂಭೀರವಾಗಿ ಪರಿಗಣಿಸಿದ್ದು, ಕಠಿಣ ಕ್ರಮ ಜರುಗಿಸಲು ಆದೇಶ ನೀಡಿದ್ದಾರೆ. ಆ ಹಿನ್ನೆ ಪಡಿತರ ಅಕ್ಕಿ ಮಾರಾಟ ಮಾಡುವ ಸಾರ್ವಜನಿಕರ ಪಡಿತರ ಚೀಟಿ ರದ್ದುಗೊಳಿಸಲಾಗುವುದು, ಅಕ್ರಮ ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪಡಿತರ ಅಂಗಡಿ ನಡೆಸುವರು ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದರೆ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಗೊಳಿಸಲಾಗುವುದೆಂದು ಎಚ್ಚರಿಸಿದರು. ಬಿಪಿಎಲ್ ಕಾರ್ಡ್ ಹೊಂದಿದವ ಪ್ರತಿ ಕುಟುಂಭಕ್ಕೆ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ, ಪ್ರತಿ ತಿಂಗಳು 10ನೇ ಡ್ರೀರಿಖಿನಂದು ಪಡಿತರ ವಿತರಣೆ ಪ್ರಾರಂಭಿಸಲಾಗುತ್ತದೆ. ಬಡವರಿಗೆ ಅನುಕೂಲ ಕಲ್ಪಿಸಲು ಸರ್ಕಾರದ ಯೋಜನೆ ಜಾರಿಗೆ ತಂದಿದ್ದು, ದುರುಪಯೋಗ ಪಡಿಸಿಕೊಳ್ಳಬಾರದು ಎಂದು ತಿಳಿಸಿದರು.ತಂಡಗಳ ರಚನೆ: ಪಡಿತರ ಅಕ್ಕಿ ಅಕ್ರಮ ಮಾರಾಟ ತಡೆಗೆ ಅಧಿಕಾರಿಗಳ ತಂಡ ರಚಿಸಲಾಗಿದೆ. ಅಕ್ರಮ ಸಾಗಣೆ ಹಾಗೂ ಮಾರಾಟ ನಿಯಂತ್ರಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ ಅವರು, ಅಕ್ರಮವಾಗಿ ಪಡಿತರ ಅಕ್ಕಿಯ ಮಾರಾಟ ಕಂಡು ಬಂದಲ್ಲಿ ಆಹಾರ ನಿರೀಕ್ಷಕರು, ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.