ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ: ಎಸ್‌ಪಿ ಉಮಾ

| Published : May 10 2025, 01:22 AM IST

ಸಾರಾಂಶ

ಪೆಹಲ್ಗಾಂನಲ್ಲಿ ಉಗ್ರರ ದುಷ್ಕೃತ್ಯದ ಹಿನ್ನೆಲೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂದೂರ್ ಮೂಲಕ ಪ್ರತ್ಯುತ್ತರ ನೀಡಲಾಗುತ್ತಿದೆ. ಭಾರತ-ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಹಿನ್ನೆಲೆ ಯುದ್ಧಭೀತಿ ಸೃಷ್ಠಿಯಾಗಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಎಚ್ಚರಿಸಿದ್ದಾರೆ.

- ಭಾರತ-ಪಾಕ್ ಯುದ್ಧ ಪರಿಸ್ಥಿತಿ ಹಿನ್ನೆಲೆ ಪೊಲೀಸ್ ಅಲರ್ಟ್‌ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಪೆಹಲ್ಗಾಂನಲ್ಲಿ ಉಗ್ರರ ದುಷ್ಕೃತ್ಯದ ಹಿನ್ನೆಲೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂದೂರ್ ಮೂಲಕ ಪ್ರತ್ಯುತ್ತರ ನೀಡಲಾಗುತ್ತಿದೆ. ಭಾರತ-ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಹಿನ್ನೆಲೆ ಯುದ್ಧಭೀತಿ ಸೃಷ್ಠಿಯಾಗಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಎಚ್ಚರಿಸಿದ್ದಾರೆ.

ಈಗಾಗಲೇ ಭಾರತ- ಪಾಕಿಸ್ತಾನ ಗಡಿಭಾಗಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಇತ್ತ ಕರ್ನಾಟಕರದಲ್ಲೂ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ದಾವಣಗೆರೆ ಜಿಲ್ಲೆಯಲ್ಲೂ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ, ಇತರೆ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಗಡಿಗಳಲ್ಲಿ ಉದ್ವಿಗ್ನತೆ ಬಗ್ಗೆ ಎಲ್ಲ ಪೊಲೀಸರಿಗೂ ತಿಳಿದಿದೆ. ಪೊಲೀಸರೂ ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಜನರು ಆತಂಕಕ್ಕೆ ಒಳಗಾಗದ ರೀತಿ ತಿಳಿವಳಿಕೆ ನೀಡಬೇಕು. ಸುಳ್ಳು ಸುದ್ದಿಗಳು ಹರಡದಂತೆ ತಮ್ಮ ತಮ್ಮ ವ್ಯಾಪ್ತಿಯಲ್ಲೂ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆಗಳನ್ನು ನೀಡಲಾಗಿದೆ. ಎಲ್ಲ ಕಡೆ ಜಾಗ್ರತೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

24x7 ನಿಗಾ ಕ್ರಮ:

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಮಾಹಿತಿಯನ್ನು ಪೋಸ್ಟ್ ಮಾಡುವುದಾಗಲೀ, ಶೇರ್ ಮಾಡುವುದಾಗಲೀ ಮಾಡುವ ಮುಂಚೆ ಅದರ ಸತ್ಯಾಸತ್ಯತೆ ಪರಿಶೀಲಿಸಬೇಕು. ಜಿಲ್ಲಾದ್ಯಂತ ಎಲ್ಲ ಅಗತ್ಯ ಭದ್ರತಾ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಜಿಲ್ಲಾ ಪೊಲೀಸ್‌ ಇಲಾಖೆಯಿಂದ 24x7 ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನಾಸ್ಪದ ಸುದ್ದಿಗಳು ಸುಳ್ಳು ಸುದ್ದಿಗಳು, ಪ್ರಚೋದನಾತ್ಮಕ ಪೋಸ್ಟ್‌ಗಳು, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ಹೇಳಿಕೆಗಳು ಕಂಡುಬಂದರೆ ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣ ನಿಗಾ ಘಟಕ ವಾಟ್ಸಪ್‌ ಮೊ: 94808-03208 ಇಲ್ಲಿಗೆ ಪೋಸ್ಟ್‌ಗಳನ್ನು ವಾಟ್ಸಪ್ ಮೂಲಕ ಹಂಚಿಕೊಳ್ಳಬೇಕು. ಮಾಹಿತಿ ನೀಡುವವರ ಬಗ್ಗೆ ಗೌಪ್ಯತೆ ಕಾಪಾಡಲಾಗುವುದು ಎಂದು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.

- - -

-9ಕೆಡಿವಿಜಿ9: ಉಮಾ ಪ್ರಶಾಂತ್