ರಾಜ್ಯದಲ್ಲಿ ಅರಣ್ಯ ಒತ್ತುವರಿ ಕಟ್ಟು ನಿಟ್ಟಾಗಿ ತೆರವು : ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ

| Published : Sep 04 2024, 01:51 AM IST / Updated: Sep 04 2024, 10:12 AM IST

ರಾಜ್ಯದಲ್ಲಿ ಅರಣ್ಯ ಒತ್ತುವರಿ ಕಟ್ಟು ನಿಟ್ಟಾಗಿ ತೆರವು : ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳವಾರ ವಿಧಾನಸೌಧದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ಸಮಾರಂಭದಲ್ಲಿ 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ 2022 ಮತ್ತು 23ನೇ ಸಾಲಿನ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಲಾಯಿತು.

 ಬೆಂಗಳೂರು :  ಅರಣ್ಯ ಒತ್ತುವರಿಯಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದ್ದು, ಒತ್ತುವರಿಯನ್ನು ಕಟ್ಟುನಿಟ್ಟಾಗಿ ತಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದ ಸಮಾರಂಭದಲ್ಲಿ 49 ಅರಣ್ಯ ಅಧಿಕಾರಿ ಮತ್ತು ಸಿಬ್ಬಂದಿಗೆ 2022 ಮತ್ತು 23ನೇ ಸಾಲಿನ ಮುಖ್ಯಮಂತ್ರಿಗಳ ವಿಶಿಷ್ಟ ಸೇವಾ ಪದಕ ಪ್ರದಾನ ಮಾಡಿದರು. ಅಲ್ಲದೇ, 267 ಅರಣ್ಯ ವೀಕ್ಷಕರಿಗೆ ನೇಮಕಾತಿ ಪತ್ರ ವಿತರಿಸಿದರು.

ಬಳಿಕ ಮಾತನಾಡಿದ ಅವರು, ಅರಣ್ಯ ಸಂಪತ್ತಿನ ಸಂರಕ್ಷಣೆಯ ಮಹತ್ವ ಅರಿತಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದರು. ಇದು ಅತ್ಯಂತ ನಿಷ್ಠುರವಾಗಿದ್ದು, ಅರಣ್ಯಾಧಿಕಾರಿಗಳೂ ಅಷ್ಟೇ ನಿಷ್ಠುರವಾಗಿ ಅರಣ್ಯ ಒತ್ತುವರಿ ತಡೆಯಬೇಕು ಎಂದು ತಿಳಿಸಿದರು.

ಕಾಡು ಪ್ರಾಣಿಗಳಿಗೆ ಆಹಾರ, ಮೇವು ಮತ್ತು ನೀರು ಕಾಡಿನ ಒಳಗೇ ಅಗತ್ಯವಿದ್ದಷ್ಟು ದೊರೆತರೆ ಕಾಡಿನಿಂದ ಹೊರಗೆ ಬರುವುದಿಲ್ಲ. ಆಗ ಮಾನವ-ಪ್ರಾಣಿ ಸಂಘರ್ಷಕ್ಕೆ ತಡೆ ಬೀಳುತ್ತದೆ. ಇನ್ನು, ಆಯಾ ವರ್ಷದ ವರ್ಷದ ಪದಕಗಳನ್ನು ಆಯಾ ವರ್ಷವೇ ವಿತರಿಸಬೇಕು. ಇದರಿಂದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಉತ್ಸುಕತೆಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ. ಪ್ರಶಸ್ತಿ ಸ್ವೀಕರಿಸಿದವರು ಉಳಿದವರಿಗೆ ಮತ್ತು ಸಮಾಜಕ್ಕೆ ಸ್ಪೂರ್ತಿಯಾಗಬೇಕು ಎಂದರು.

₹500 ಕೋಟಿಗೆ ಮನವಿ:

ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮಾತನಾಡಿ, ಆನೆ ಮತ್ತು ಮಾನವ ಸಂಘರ್ಷದಿಂದ ರಾಜ್ಯದಲ್ಲಿ ಪ್ರತಿವರ್ಷ 50 ಸಾವು ಸಂಭವಿಸುತ್ತಿದ್ದು, ಅಮೂಲ್ಯ ಜೀವ ಮತ್ತು ಬೆಳೆ ಉಳಿಸಲು ರೈಲ್ವೆ ಬ್ಯಾರಿಕೇಡ್ ಪರಿಹಾರವಾಗಿದೆ. ಹೀಗಾಗಿ 324 ಕಿ.ಮೀ. ತಡೆಗೋಡೆ ನಿರ್ಮಾಣಕ್ಕೆ ಎರಡು ವರ್ಷದಲ್ಲಿ ₹500 ಕೋಟಿಗಿಂತ ಹೆಚ್ಚಿನ ಅನುದಾನ ನೀಡಬೇಕು. ರಾಜ್ಯದಲ್ಲಿ ಈವರೆಗೆ ಸುಮಾರು 333 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, 101 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ ಎಂದು ವಿವರಿಸಿದರು.

2015ರ ನಂತರದ ಒತ್ತುವರಿ ತೆರವು ಮಾಡಲಾಗುತ್ತಿದೆ. ಮೂರು ಎಕರೆಗಿಂತ ಮೇಲ್ಪಟ್ಟು ಒತ್ತುವರಿ ತೆರವು ಮಾಡಲಾಗುತ್ತಿದ್ದು, ಕಳೆದ ವರ್ಷದಿಂದ ಸುಮಾರು 2,500 ಎಕರೆ ಒತ್ತುವರಿ ತೆರವು ಮಾಡಿಸಲಾಗಿದೆ. ಬಡ ರೈತರ ಒತ್ತುವರಿಯನ್ನು ತೆರವು ಮಾಡಿಸುವುದಿಲ್ಲ. ಸಚಿವನಾದ ಬಳಿಕ ಹೊಸದಾಗಿ 11,559 ಎಕರೆ ಭೂಮಿಯನ್ನು ಮೀಸಲು ಅರಣ್ಯ ಎಂಬುದಾಗಿ ಘೋಷಿಸಲಾಗಿದೆ. ಅಲ್ಲದೇ, ಅರಣ್ಯ ಇಲಾಖೆಯ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲಾಗಿದ್ದು, ಡಿಆರ್‌ಎಫ್‌ಓ ವರೆಗಿನ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಬಹು ದಿನಗಳಿಂದ ಬಡ್ತಿ ಸಿಗದಿದ್ದ ಸಿಬ್ಬಂದಿಗೆ ಬಡ್ತಿ ನೀಡಲಾಗಿದೆ. ರಾಜ್ಯದ ಹಸಿರು ಹೊದಿಕೆ ಹೆಚ್ಚಿಸಲು ಐದು ಕೋಟಿ ಸಸಿ ನೆಡುವ ಸಂಕಲ್ಪ ಮಾಡಿ, ಗುರಿ ಮೀರಿದ ಸಾಧನೆಯೊಂದಿಗೆ 5.48 ಕೋಟಿ ಸಸಿ ನೆಟ್ಟು ಜಿಯೋ ಟ್ಯಾಗ್ ಮಾಡಲಾಗಿದೆ. ಅದರ ವಿವರವನ್ನು ವೆಬ್ ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಅರಣ್ಯಪಡೆ ಮುಖ್ಯಸ್ಥರಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಉಪಸ್ಥಿತರಿದ್ದರು.

ಆಯಾ ವರ್ಷದ ವರ್ಷದ ಪದಕಗಳನ್ನು ಆಯಾ ವರ್ಷವೇ ವಿತರಿಸಬೇಕು. ಇದರಿಂದ ಅಧಿಕಾರಿಗಳಿಗೆ, ಸಿಬ್ಬಂದಿಗೆ ಉತ್ಸುಕತೆಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ