ಸಾರಾಂಶ
ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ತಡೆಗಾಗಿಯೇ ವಿಶೇಷ ಕಾನೂನುಗಳಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಬಗ್ಗೆ ದೂರು ಬಂದಲ್ಲಿ ಕಾನೂನು ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ ಎಂದು ದಿವಾಣಿ ನ್ಯಾಯಾಧೀಶರಾದ ಸತೀಶ ಎಂ. ಹೇಳಿದರು.
ಲಕ್ಷ್ಮೇಶ್ವರ :ಸಮಾಜದಲ್ಲಿ ಮಹಿಳೆಯರಿಗೆ ಗೌರವಯುತವಾದ ಸ್ಥಾನವಿದ್ದು, ಸಮಾಜದಲ್ಲಿ ನಡೆಯುವ ಮಹಿಳೆಯ ಮೇಲಿನ ದೌರ್ಜನ್ಯ ತಡೆ ಎಲ್ಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ವಿಶೇಷ ಕಾನೂನು ಸಹ ಇದೆ ಎಂದು ದಿವಾಣಿ ನ್ಯಾಯಾಧೀಶರಾದ ಸತೀಶ ಎಂ. ಹೇಳಿದರು.
ಸೋಮವಾರ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಶಿರಹಟ್ಟಿ ಮತ್ತು ಲಕ್ಷೇಶ್ವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಹಿರೇಬಣದ ಅಂಗನವಾಡಿ ಕೇಂದ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಉದ್ಯೋಗ ಮಾಡುವ ಸ್ಥಳದಲ್ಲಿ ಹಾಗೂ ಸಮಾಜದಲ್ಲಿ ದೌರ್ಜನ್ಯಗಳು ನಡೆಯುತ್ತವೆ. ಇದರಿಂದ ಮಹಿಳೆಯರು ಮಾನಸಿಕವಾಗಿ ಕುಗ್ಗುವುದುಂಟು. ಆದರೆ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳ ತಡೆಗಾಗಿಯೇ ವಿಶೇಷ ಕಾನೂನುಗಳಿದ್ದು, ಮಹಿಳೆಯರ ಮೇಲೆ ದೌರ್ಜನ್ಯ ನಡೆದ ಬಗ್ಗೆ ದೂರು ಬಂದಲ್ಲಿ ಕಾನೂನು ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ. ಸಮಾಜದಲ್ಲಿ ಮಹಿಳೆಯರನ್ನು ಸಮಾನತೆಯಿಂದ ನೋಡುವುದು ಅವಶ್ಯವಾಗಿದ್ದು, ಇಂತಹ ಸಮಸ್ಯೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಮಹಿಳೆಯರನ್ನು ಗೌರವಿಸುವ ಮೂಲಕ ಅವರಿಗೆ ಸೂಕ್ತ ಅವಕಾಶ, ಸ್ವಾತಂತ್ರ‍್ಯ ಗೌರವ ನೀಡುವ ಕಾರ್ಯವಾದರೆ ಮಾತ್ರ ದೌರ್ಜನ್ಯದ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.ಸಹಾಯಕ ಸರ್ಕಾರಿ ಅಭಿಯೋಜಕಿ ಹೀನಾಕೌಸರ ಗಂಜಿಹಾಳ ಉಪನ್ಯಾಸ ನೀಡಿದರು. ಸಿಡಿಪಿಒ ಮೃತ್ಯುಂಜಯ ಗುಡ್ಡದಾನ್ವೇರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಬಿ.ಎಸ್. ಬಾಳೇಶ್ವರಮಠ, ಪ್ಯಾನಲ್ ವಕೀಲ ಪಿ.ಎಂ. ವಾಲಿ, ವಿ.ಎಸ್. ಪಶುಪತಿಹಾಳ, ಆರ್.ಎಂ. ಕುರಿ ಪಾಲ್ಗೊಂಡಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಅಂಗನವಾಡಿ ಮೇಲ್ವಿಚಾರಕಿ ನಂದಾ ನವಲೆ ಕಾರ್ಯಕ್ರಮ ನಿರ್ವಹಿಸಿದರು.