ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ಸರ್ಕಾರ ನೀಡಿದ ಭೂಮಿಯನ್ನು ವರ್ಗಾವಣೆ ಮಾಡಲು ಹಾಲಿ ಇರುವ ಕಾಯ್ದೆಯಲ್ಲಿನ ನಿಯಮಗಳಿಗೆ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

 ಬೆಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ಸರ್ಕಾರ ನೀಡಿದ ಭೂಮಿಯನ್ನು ವರ್ಗಾವಣೆ ಮಾಡಲು ಹಾಲಿ ಇರುವ ಕಾಯ್ದೆಯಲ್ಲಿನ ನಿಯಮಗಳಿಗೆ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

‘ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ನಿಯಮಗಳು 1979’ರಲ್ಲಿನ ನಿಯಮಗಳನ್ನು ತಿದ್ದುಪಡಿ ಮಾಡಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮಂಜೂರು ಮಾಡಿದ ಭೂಮಿಗಳನ್ನು ಮಾರಾಟ ಇಲ್ಲವೇ ವರ್ಗಾವಣೆ ಮಾಡಲು ಕೋರಿ ಬಂದ ಅರ್ಜಿಗಳನ್ನು ಹಲವು ಹಂತದಲ್ಲಿ ಪರಿಶೀಲನೆ ನಂತರವೇ ಅನುಮತಿ ನೀಡಲು ಅವಕಾಶವಾಗುವಂತೆ ಬಿಗಿ ನಿಯಮಗಳನ್ನು ಕಾಯ್ದೆಯಲ್ಲಿ ಸೇರ್ಪಡೆ ಮಾಡಲಾಗಿದೆ.

ಹೊಸ ನಿಯಮಗಳು: ಮಂಜೂರಾದ ಭೂಮಿಯ ವರ್ಗಾವಣೆಗೆ ಅನುಮತಿ ಕೋರುವ ಮಂಜೂರಾತಿ ಪಡೆದವನು ಅಥವಾ ಆತನ ಕಾನೂನು ಸಮ್ಮತ ವಾರಸುದಾರನು ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ತಾಲ್ಲೂಕು ತಹಶೀಲ್ದಾರನಿಗೆ ಖುದ್ದಾಗಿ ಸಲ್ಲಿಸಬೇಕು. ತಹಶೀಲ್ದಾರನು ಸೂಕ್ತವಾದ ವಿಚಾರಣೆ ಮಾಡಿ, ಸಲ್ಲಿಸಿದ ದಾಖಲೆ ಪರಿಶೀಲನೆ ತನ್ನ ಅಭಿಪ್ರಾಯಗಳನ್ನು ದಾಖಲಿಸಿ ಉಪವಿಭಾಗಾಧಿಕಾರಿಗೆ ಸಲ್ಲಿಸಬೇಕು.

ನಂತರ ಉಪವಿಭಾಗಾಧಿಕಾರಿ ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಭೂಮಿಯ ವರ್ಗಾವಣೆಗೆ ಅನುಮತಿ ನೀಡಬಹುದು ಎಂಬ ಬಗ್ಗೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಬೇಕಾಗುತ್ತದೆ. ಪರಿಶೀಲನೆ ವೇಳೆ ದಬ್ಬಾಳಿಕೆ,ತಪ್ಪು ನಿರೂಪಣೆ, ಮೋಸ ಅಥವಾ ಭೂಮಿಯ ತಪ್ಪು ಮೌಲ್ಯ ನಿರ್ಧರಣೆ ಇರುವುದನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ. ಇಂತಹ ಯಾವುದೇ ತಪ್ಪು ಕಂಡು ಬಂದಲ್ಲಿ ಭೂಮಿಯ ವರ್ಗಾವಣೆಗಾಗಿ ಅನುಮತಿ ನಿರಾಕರಿಸುವಂತೆ ಶಿಫಾರಸು ಮಾಡತಕ್ಕದ್ದು ಎಂಬ ನಿಯಮ ಸೇರ್ಪಡೆ ಮಾಡಲಾಗಿದೆ.

ಉಪವಿಭಾಗಾಧಿಕಾರಿಯಿಂದ ಬಂದ ದಸ್ತಾವೇಜು ಮತ್ತು ವರದಿ ಪರಿಶೀಲಿಸಿದ ನಂತರ ಕಂದಾಯ ಆಯುಕ್ತರಿಗೆ ಭೂಮಿ ವರ್ಗಾವಣೆ ಕುರಿತ ಅನುಮತಿ ಅರ್ಜಿಯನ್ನು ತಮ್ಮ ಶಿಫಾರಸಿನೊಂದಿಗೆ ಕಂದಾಯ ಆಯುಕ್ತರಿಗೆ ಸಲ್ಲಿಸಬೇಕು. ಇದಾದ ನಂತರ ಕಂದಾಯ ಆಯುಕ್ತರು ಅರ್ಜಿಯನ್ನು ಪರಿಷ್ಕರಿಸಿ ಭೂಮಿಯ ವರ್ಗಾವಣೆಗೆ ಸರ್ಕಾರದ ಅನುಮತಿ ಅಥವಾ ನಿರ್ಧಾರಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ (ಕಂದಾಯ) ಅವರಿಗೆ ಭೂಮಿ ವರ್ಗಾವಣೆ ಕುರಿತ ಎಲ್ಲ ಅರ್ಜಿಗಳನ್ನು ತಮ್ಮ ಶಿಫಾರಸುಗಳೊಂದಿಗೆ ಸಲ್ಲಿಸಬೇಕು.

ಈ ಅಧಿಕಾರಿಗಳು ಕೆಳ ಹಂತದ ಅಧಿಕಾರಿಗಳು ಸಲ್ಲಿಸಿದ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರದ ಅನುಮತಿ/ ನಿರ್ಧಾರವನ್ನು ಕಂದಾಯ ಆಯುಕ್ತರಿಗೆ ತಿಳಿಸಬೇಕು. ಭೂಮಿ ವರ್ಗಾವಣೆಗೆ ಅನುಮೋದನೆ ಪಡೆದ ನಂತರ ಕಂದಾಯ ಆಯುಕ್ತರು ಅನುಮತಿ ನೀಡಿ ಆದೇಶ ಹೊರಡಿಸಬೇಕು. ಸರ್ಕಾರದಿಂದ ಅನುಮತಿ ದೊರೆತ ನಂತರ ಉಪವಿಭಾಗಾಧಿಕಾರಿ ವರ್ಗಾವಣೆಗೆ ಅನುವಾಗುವಂತೆ ಸದರಿ ಭೂಮಿಯಿಂದ ಪಿಟಿಸಿಎಲ್‌ ನಿಶಾನೆಯನ್ನು ತೆಗೆದು ಹಾಕಲಿದ್ದಾರೆ ಎಂದು ನಿಯಮದಲ್ಲಿ ವಿವರಿಸಲಾಗಿದೆ.

ಬಾಧಿತರಿಗೆ 30 ದಿನ ಅವಕಾಶ: ಭೂ ವರ್ಗಾವಣೆಗೆ ಅನುಮತಿ ನೀಡಿರುವ ಅಥವಾ ನಿರಾಕರಿಸಿರುವ ಕಂದಾಯ ಆಯುಕ್ತರ ಅದೇಶದಿಂದ ಬಾಧಿತನಾದ ವ್ಯಕ್ತಿ, ಆದೇಶ ಹೊರಡಿಸಿದ ದಿನದಿಂದ 30 ದಿನದೊಳಗೆ ಆದೇಶ ಪುನರಾವಲೋಕಿಸುವಂತೆ ಕೋರಿ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ನಿಯಮದಲ್ಲಿ ಅವಕಾಶ ನೀಡಲಾಗಿದೆ.