ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಲೋಕಸಭಾ ಚುನಾವಣೆ-2024 ಹಿನ್ನೆಲೆಯಲ್ಲಿ ಜಾರಿಯಾದ ಮಾದರಿ ನೀತಿ ಸಂಹಿತೆಯನ್ನು ಎಲ್ಲ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಸೂಚಿಸಿದರು.ಸೋಮವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಎರಡನೇ ಹಂತದಲ್ಲಿ ಬಾಗಲಕೋಟೆ ಲೋಕಸಭಾ ಚುನಾವಣೆಗೆ ಮತದಾನ ಜರುಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಜಾರಿ ಮಾಡಿರುವ ಮಾದರಿ ನೀತಿ ಸಂಹಿತೆ ತಪ್ಪದೇ ಪಾಲಿಸಬೇಕು ಎಂದು ಹೇಳಿದರು.
ಚುನಾವಣಾ ವೇಳಾ ಪಟ್ಟಿಯಂತೆ ಏ.12 ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಏ.19 ಕೊನೆಯ ದಿನವಾಗಿದೆ. ಏ.20ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.22 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ಮೇ 7 ರಂದು ನಡೆಯಲಿದೆ. ಮತ ಎಣಿಕೆ ಜೂನ್ 4 ರಂದು ನಡೆಸಲಾಗುತ್ತಿದೆ. ನೀತಿ ಸಂಹಿತೆಯು ಜೂನ್ 6ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ಸಭೆ, ರ್‍ಯಾಲಿ, ವಾಹನಗಳಿಗೆ, ತಾತ್ಕಾಲಿಕ ಪಕ್ಷದ ಕಚೇರಿಗೆ, ಧ್ವನಿವರ್ಧಕಗಳಿಗೆ, ಹೆಲಿಪ್ಯಾಡ ಹಾಗೂ ಹೆಲಿಕ್ಯಾಪ್ಟರ ಪರವಾನಿಗೆ ಕೋರಿ ಸುವಿಧಾ ಅಡಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು. ಮ್ಯಾನುವಲ್ ಅರ್ಜಿಗಳಿಗೆ ಅವಕಾಶವಿರುವುದಿಲ್ಲ ಎಂದರು.
ಭಾರತ ಚುನಾವಣಾ ಆಯೋಗವು ಸಿವಿಜಿಲ್ ಮೊಬೈಲ್ ಆ್ಯಪ್ ಪ್ರಾರಂಭಿಸಿದೆ. ಇದರಲ್ಲಿ ಯಾವುದೇ ವ್ಯಕ್ತಿಯು ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಅವಕಾಶವಿದೆ. ಈ ಆ್ಯಪ್ ಮೂಲಕ ಬಂದ ದೂರುಗಳ ಬಗ್ಗೆ ಮಾದರಿ ನೀತಿ ಸಂಹಿತೆ ತಂಡಕ್ಕೆ ಆನ್‌ಲೈನ್ ಮೂಲಕ ತಿಳಿಸಲಾಗುವುದು. ಜೊತೆಗೆ ನಿಗದಿತ ಸಮಯದೊಳಗೆ ಕ್ರಮ ಜರುಗಿಸಲಾಗುತ್ತದೆ. ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲರೂ ಸಹಕರಿಸಿ ಎಂದು ಕೋರಿದರು.ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಇದ್ದರು.
----------ಕೋಟ್...
ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷದವರು ಸಭೆ, ರ್‍ಯಾಲಿ, ವಾಹನಗಳಿಗೆ, ತಾತ್ಕಾಲಿಕ ಪಕ್ಷದ ಕಚೇರಿಗೆ, ಧ್ವನಿವರ್ಧಕಗಳಿಗೆ, ಹೆಲಿಪ್ಯಾಡ ಹಾಗೂ ಹೆಲಿಕ್ಯಾಪ್ಟರ ಪರವಾನಿಗೆ ಕೋರಿ ಸುವಿಧಾ ಅಡಿ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದು. ಮ್ಯಾನುವಲ್ ಅರ್ಜಿಗಳಿಗೆ ಅವಕಾಶವಿರುವುದಿಲ್ಲ. ಸಿವಿಜಿಲ್ ಮೊಬೈಲ್ ಆ್ಯಪ್ ಮೂಲಕ ಯಾವುದೇ ವ್ಯಕ್ತಿಯು ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಅವಕಾಶವಿದೆ.