ಚುನಾವಣಾ ಆಯೋಗದ ನಿರ್ದೇಶನವ ಕಟ್ಟು ನಿಟ್ಟಾಗಿ ಪಾಲಿಸಿ

| Published : Mar 30 2024, 12:53 AM IST

ಚುನಾವಣಾ ಆಯೋಗದ ನಿರ್ದೇಶನವ ಕಟ್ಟು ನಿಟ್ಟಾಗಿ ಪಾಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾರದರ್ಶಕ ಹಾಗೂ ನಿಯಮಾನುಸಾರ ಲೋಕಸಭೆ ಚುನಾವಣೆಗಳ ನಡೆಸಬೇಕಾಗಿದ್ದು ಚುನಾವಣಾ ಆಯೋಗದ ನಿರ್ದೇಶನವ ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವೆಚ್ಚ ವೀಕ್ಷಕಿ ಪ್ರಾಜಕ್ತ ಪಿ.ಠಾಕೂರ್ ಸೂಚನೆ ನೀಡಿದರು.

ಚಿತ್ರದುರ್ಗ: ಪಾರದರ್ಶಕ ಹಾಗೂ ನಿಯಮಾನುಸಾರ ಲೋಕಸಭೆ ಚುನಾವಣೆಗಳ ನಡೆಸಬೇಕಾಗಿದ್ದು ಚುನಾವಣಾ ಆಯೋಗದ ನಿರ್ದೇಶನವ ಕಟ್ಟು ನಿಟ್ಟಾಗಿ ಪಾಲನೆ ಮಾಡುವಂತೆ ಚಿತ್ರದುರ್ಗ ಲೋಕಸಭೆ ಕ್ಷೇತ್ರದ ವೆಚ್ಚ ವೀಕ್ಷಕಿ ಪ್ರಾಜಕ್ತ ಪಿ.ಠಾಕೂರ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದಎಲ್ಲಾ ಸಮಿತಿಗಳ ನೋಡಲ್ ಅಧಿಕಾರಿಗಳು, ಲೆಕ್ಕಪತ್ರ ನಿರ್ವಾಹಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಕಾರ್ಯ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ನೇಮಕಗೊಂಡಿರುವ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ತಮ್ಮ ಜವಾಬ್ದಾರಿಯರಿತು ಕಾರ್ಯನಿರ್ವಹಿಸಬೇಕೆಂದರು.

ಖರ್ಚು ವೆಚ್ಚಗಳ ದೈನಂದಿನ ಮಾಹಿತಿ ಪಡೆದು ದಾಖಲು ಮಾಡಬೇಕು. ವೆಚ್ಚಗಳಿಗೆ ಈಗಾಗಲೇ ನಿಗದಿತ ಪಟ್ಟಿಯೊಂದನ್ನು ನೀಡಲಾಗಿದ್ದು, ಅದರ ಅನುಸಾರವೇ ನಮೂದು ಮಾಡಬೇಕು. ಸಭೆ, ಸಮಾರಂಭದ ಮೇಲೆ ತೀವ್ರ ನಿಗಾವಹಿಸಬೇಕು. ರಾಜಕೀಯ ಪಕ್ಷಗಳು ನೀಡುವ ಖರ್ಚನ್ನು ಯಥಾವತ್ತಾಗಿ ದಾಖಲು ಮಾಡುವ ಬದಲಾಗಿ ಪರೀಶೀಲಿಸುವ ಹಾಗೂ ತುಲನೆ ಮಾಡುವ ಕಾರ್ಯ ನಿರ್ವಹಿಸಬೇಕೆಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿ, ಈಗಾಗಲೇ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಶಾಂತಿಯುತ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವು ಸಮಿತಿಗಳನ್ನು ರಚಿಸಿ, ಮೇಲ್ವಿಚಾರಣೆಗಾಗಿ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಕ್ರಮ ತಡೆಗೆ ಜಿಲ್ಲೆಯಾದ್ಯಂತ ನಿರಂತರ ಕಣ್ಗಾವಲು ಇರಿಸಲಾಗಿದೆ. ಪೆಟ್ರೋಲ್ ಬಂಕ್, ಬ್ಯಾಂಕ್‌ಗಳಲ್ಲಿನ ಅಸಹಜವಾದ ವಹಿವಾಟು, ಜಿಲ್ಲೆಯ ಗಡಿ ಪ್ರದೇಶಗಳಲ್ಲಿನ ಸರಕು ಸಾಗಾಣಿಕೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದರು.

ಹೊರಗಿನಿಂದ ಜಿಲ್ಲೆಯ ಗಡಿಯೊಳಗೆ ಬರಬಹುದಾದ ಮಾದಕ ವಸ್ತು, ಮದ್ಯ, ಮೌಲ್ಯಯುತ ಸರಕುಗಳು, ನಗದು ಸೇರಿದಂತೆ ಅಕ್ರಮ ವಹಿವಾಟಿನ ಬಗ್ಗೆ ವಿಶೇಷ ಗಮನಹರಿಸಬೇಕು. ಬ್ಯಾಂಕ್‌ಗಳಲ್ಲಿನ ಅನಿಯಮಿತ ಹಾಗೂ ಅನುಮಾನಾಸ್ಪದ ವಹಿವಾಟುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುವಂತೆ ಸೂಚಿಸಿದ ಅಕ್ರಮಗಳ ನಿಯಂತ್ರಿಸುವಲ್ಲಿ ಹಗಲಿರುಳು ಕಣ್ಗಾವಲು ಇರಬೇಕು. ಅಲ್ಲದೇ ಅಧಿಕಾರಿಗಳು ಎಲ್ಲಾ ವಿಷಯಗಳಲ್ಲಿ ತಾವು ನಿರ್ವಹಿಸಿದ ಕಾರ್ಯ ಹಾಗೂ ಕೈಗೊಂಡ ಕ್ರಮಗಳ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ, ಸಕಾಲದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡುವಂತೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ವ್ಯವಸ್ಥಿತ ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮದ ಅಧ್ಯಕ್ಷ ಎಸ್.ಜೆ.ಸೋಮಶೇಖರ್ ಮಾತನಾಡಿ, ಶೇ.70ಕ್ಕಿಂತ ಕಡಿಮೆ ಮತದಾನ ನಡೆದಿರುವ ಮತಗಟ್ಟೆಗಳ ಪ್ರದೇಶದ ವ್ಯಾಪ್ತಿಯಲ್ಲಿ ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ದೈನಿಕಗಳು, ಸುದ್ದಿವಾಹಿನಿಗಳು ಹಾಗೂ ಸಿಟಿ ಕೇಬಲ್ ನೆಟ್‍ವರ್ಕ್‍ಗಳಲ್ಲಿ ಪ್ರಸಾರಗೊಳ್ಳುವ ಜಾಹಿರಾತು ಹಾಗೂ ಕಾಸಿಗಾಗಿ ಸುದ್ದಿಗಳ ಮೇಲೆ ವಿಶೇಷ ಗಮನಹರಿಸಬೇಕು. ಪ್ರಕಟಗೊಳ್ಳುವ ಪ್ರಚಾರ ಸಾಮಗ್ರಿಗಳು, ಪತ್ರಿಕಾ ಜಾಹಿರಾತುಗಳ ಖರ್ಚು-ವೆಚ್ಚಗಳ ಬಗ್ಗೆಯೂ ನಿಗಾ ಇರಲಿ. ಸಂಬಂಧಿತ ಸಮಿತಿಗಳ ಅಧಿಕಾರಿಗಳು ಕಾಲಕಾಲಕ್ಕೆ ಇವುಗಳ ಕುರಿತು ವೆಚ್ಚನಿರ್ವಾಹಕರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.

ಎಸ್ಪಿ ಧರ್ಮೇ್ಂದರ್ ಕುಮಾರ್ ಮೀನಾ ಮಾತನಾಡಿ, ಜಿಲ್ಲೆಯಲ್ಲಿ ಶಾಂತಿಯುತ ಚುನಾವಣೆಗೆ ಅಗತ್ಯವಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೇ ರಕ್ಷಣಾಕಾರ್ಯಕ್ಕೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದ ವರದಿಯಾಗಿಲ್ಲವೆಂದರು.

ಸಭೆಯಲ್ಲಿ ಚುನಾವಣೆಗೆ ನಿಯೋಜಿತ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.