ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕ್ ನಡೆಸಲು ಮತ್ತು ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ನಗರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಾವೇರಿ: ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕ್ ನಡೆಸಲು ಮತ್ತು ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನೇತೃತ್ವದಲ್ಲಿ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ನಗರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಕೇಂದ್ರ ಬಸ್‌ನಿಲ್ದಾಣದವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿ, ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡ ಶಶಿಶೇಖರ ಕೆ. ಮಾತನಾಡಿ, ವಾರದಲ್ಲಿ ಐದು ದಿನ ಮಾತ್ರ ಬ್ಯಾಂಕಿಂಗ್ ಕೆಲಸದ ದಿನಗಳನ್ನಾಗಿ ರೂಪಿಸಿ ಶೀಘ್ರವೇ ಅವುಗಳನ್ನು ಅನುಷ್ಠಾನಕ್ಕೆ ತರಬೇಕು. ಈ ವ್ಯವಸ್ಥೆ ಜಾರಿಗೆ ತಂದಲ್ಲಿ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿಂಗ್ ಸಿಬ್ಬಂದಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯ ನಿರ್ವಹಣೆ ಸಾಧ್ಯವಾಗಲಿದೆ. ಈಗಾಗಲೇ ಈ ಕುರಿತು ಐಟಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಿದ್ದು ಇದನ್ನು ಶೀಘ್ರವೇ ಜಾರಿಗೆ ತರಬೇಕು. ಅಲ್ಲದೇ ದೇಶದ ಹಣಕಾಸು ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ಸಿಬ್ಬಂದಿಗಳ ಸೇವೆ ಅನನ್ಯವಾಗಿದೆ. ದೇಶದ ಹಲವು ಕ್ಷೇತ್ರಗಳ ಬೆಳವಣಿಗೆಗೆ ಬ್ಯಾಂಕಿಂಗ್ ಕ್ಷೇತ್ರ ಪೂರಕವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅವರ ಕೆಲಸಕ್ಕೆ ಅನುಗುಣವಾಗಿ ನ್ಯಾಯಸಮ್ಮತ ಹಾಗೂ ಅರ್ಥಪೂರ್ಣ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ನೀಡಬೇಕು ಎಂದು ಒತ್ತಾಯಿಸಿದರು.

ಮತ್ತೋರ್ವ ಮುಖಂಡ ಮಹೇಶ ಕಲಕೋಟಿ ಮಾತನಾಡಿ, ಮಾರ್ಚ್ 2024ರ ದ್ವಿಪಕ್ಷೀಯ ಒಪ್ಪಂದದಿಂದ ಬಾಕಿ ಉಳಿದಿರುವ ಇತರ ವಿಷಯಗಳನ್ನು ಯಾವುದೇ ವಿಳಂಬವಿಲ್ಲದೆ ಇತ್ಯರ್ಥ ಪಡಿಸಬೇಕು. ಬ್ಯಾಂಕ್ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ. ಸಿಬ್ಬಂದಿ ಕೊರತೆ ಹಾಗೂ ಹೆಚ್ಚುತ್ತಿರುವ ಜವಾಬ್ದಾರಿಗಳ ನಡುವೆಯೂ ನೌಕರರು ಮತ್ತು ಅಧಿಕಾರಿಗಳು ಬ್ಯಾಂಕಿಂಗ್ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಬ್ಯಾಂಕಿಂಗ್ ಕ್ಷೇತ್ರದ ವಿವಿಧ ಅಂಗಸಂಸ್ಥೆಗಳು, ಸಂಘಟನೆಗಳ ಪ್ರತಿನಿಧಿಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದವು. ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವುಗಳ ಶೀಘ್ರ ಪರಿಹಾರಕ್ಕಾಗಿ ಅರ್ಥಪೂರ್ಣ ಸಂವಾದವನ್ನು ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಬ್ಯಾಂಕ್ ಆಡಳಿತ ಮಂಡಳಿಗಳಿಗೆ ಪ್ರತಿನಿಧಿಗಳು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಕುಮಾರ ಗಚ್ಛಿನ, ಮಹೇಶ ಚಾವಟಗಿ, ಕಿರಣಕುಮಾರ ಗಾಯಕ್ವಾಡ, ನಾಗೇಂದ್ರ ಶೇರಖಾನಿ, ಹರ್ಷ ವಲ್ಲೂರ, ಮಂಜುನಾಥ, ಪ್ರವೀಣಕುಮಾರ ಹರಜುನ್ನಿ, ಬಸವರಾಜ ಹರಿಹರ, ಪವನಕುಮಾರ ಹೊಸಂಗಡಿ, ಚೈತನ್ಯ ಶಶಿಶೇಖರ, ಸ್ವಪ್ನಾ, ನಿಶಿ ಗುಪ್ತಾ, ಸೂಷ್ಮಾ ಗಾಯಕವಾಡ, ಸಚಿನ್ ಆರ್.ಟಿ. ಮತ್ತಿತರರು ಪಾಲ್ಗೊಂಡಿದ್ದರು.