ಸಾರಾಂಶ
ಕಾರವಾರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಕಚೇರಿ ಕೆಲಸವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಸೋಮವಾರದಿಂದ ಆರಂಭಿಸಿದ್ದಾರೆ.ಈ ಹಿಂದೆ ನಡೆದ ಮುಷ್ಕರದ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಎಲ್ಲ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ನೌಕರರ ಬೇಡಿಕೆಗಳ ವಿಚಾರವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳದ ಹಾಗೂ ಬೇಡಿಕೆಗಳನ್ನು ಈಡೇರಿಸದ ಕಾರಣ ಪುನಃ ಎಲ್ಲ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.ರಾಜ್ಯಾದ್ಯಂತ ಆಧಾರ್ ಸೀಡಿಂಗ್ ಪ್ರಕ್ರಿಯೆಯಲ್ಲಿ ಪತ್ತೆಯಾಗಿರುವ ಸುಮಾರು ೫೧.೫ ಲಕ್ಷ ಮೃತ ಖಾತೆದಾರರ ಪಹಣಿ ದಾಖಲೆಗಳನ್ನು ಅಭಿಯಾನ ಮಾದರಿಯಲ್ಲಿ ವಾರಸುದಾರರ ಹೆಸರುಗಳಿಗೆ ವಾರಸುದಾರರ ಪ್ರಮಾಣಪತ್ರ, ಮರಣ ಪ್ರಮಾಣಪತ್ರ ಮತ್ತು ಇತರೆ ದಾಖಲೆಗಳಿಲ್ಲದೇ ಪೌತಿ ಖಾತೆ ದಾಖಲಿಸುವಂತೆ ಇ- ಪೌತಿ ಖಾತಾ ಆಂದೋಲನ ಚಾಲನೆ ನೀಡುತ್ತಿರುವುದನ್ನು ಕೈಬಿಡಬೇಕು. ಚಿಕ್ಕಮಗಳೂರು ಜಿಲ್ಲೆಯಲ್ಲಿ ೩೦ ಗ್ರಾಮ ಆಡಳಿತ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿಯನ್ನು ತಡೆದು ನಿಯಮಗಳನ್ನು ಉಲ್ಲಂಘಿಸಿ ಹೊರಡಿಸಿರುವ ದಂಡನಾ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ಕಂದಾಯ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಎಲ್ಲ ವೃಂದಗಳನ್ನು ಒಳಗೊಂಡಂತೆ ನೀಡುತ್ತಿರುವ ಅನುಕಂಪದ ನೇಮಕಾತಿ ಹುದ್ದೆಯ ವೃಂದ ಮತ್ತು ನೇಮಕಾತಿ ತಿದ್ದುಪಡಿಯಾಗಬೇಕು. ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಪದೋನ್ನತಿಯು ೨೫- ೩೦ ವರ್ಷಕ್ಕೆ ಒಂದು ಪದೋನ್ನತಿಯನ್ನು ಪಡೆದು ಅಥವಾ ಪದೋನ್ನತಿ ಇಲ್ಲದೆ ನಿವೃತ್ತಿಯಾಗುತ್ತಿದ್ದು, ಈ ಇಲಾಖೆಯಲ್ಲಿ ಅತಿ ಹೆಚ್ಚು ಪ್ರಥಮದರ್ಜೆ ಸಹಾಯಕರು ಹಾಗೂ ರಾಜಸ್ವ ನಿರೀಕ್ಷಕರು ಹುದ್ದೆಯನ್ನು ಅನುಕಂಪದ ನೇಮಕಾತಿ ಮೂಲಕ ಭರ್ತಿ ಮಾಡುತ್ತಿರುವುದರಿಂದ ಈ ವೃಂದದ ನೌಕರರು ಪದೋನ್ನತಿ ವಂಚಿರಾಗಿರುತ್ತಾರೆ. ಆದ್ದರಿಂದ ಅನುಕಂಪದ ನೇಮಕಾತಿಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಆಗಬೇಕು.
ಹಾಲಿ ಇರುವ ಅನುಕಂಪದ ಆಧಾರದ ಮೇಲೆ ನೀಡುವ ಪ್ರ.ದ.ಸ. ಹುದ್ದೆಯ ನೇಮಕಾತಿಯನ್ನು ಯಾವುದೇ ಪದವಿ ವಿದ್ಯಾರ್ಹತೆ ಆಧಾರದ ಮೇಲೆ ನೀಡುವ ಬದಲಾಗಿ ಪಿಯುಸಿ ಅಥವಾ ಯಾವುದೇ ಪದವಿ ವಿದ್ಯಾರ್ಹತೆ ಆಧಾರದ ಮೇಲೆ ದ್ವಿತೀಯ ದರ್ಜೆ ಸಹಾಯಕರು ಅಥವಾ ತತ್ಸಮಾನ ಹುದ್ದೆಯ ನೇಮಕಾತಿ ಮಾಡುವಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಬೇಕು. ಇದರಿಂದಾಗಿ ಸರ್ಕಾರಕ್ಕೆ ಆದಾಯದ ಉಳಿತಾಯವಾಗುತ್ತದೆ. ಆರ್ಥಿಕ ಹೊರೆ ಉಂಟಾಗುವುದಿಲ್ಲ. ಎಲ್ಲ ವೃಂದಗಳಲ್ಲಿ ಪದೋನ್ನತಿ ವಂಚಿತರಾಗುವುದು ತಪ್ಪುತ್ತದೆ ಎಂದು ತಿಳಿಸಿದರು.ತಾಲೂಕು ಅಧ್ಯಕ್ಷ ಎನ್.ಬಿ. ಕೊಟ್ರೇಶ, ಗೌರವ ಸಲಹೆಗಾರ ಸಂತೋಷ ಬಾಂದೇಕರ, ಪ್ರಧಾನ ಕಾರ್ಯದರ್ಶಿ ಸಂದೀಪ ಬಿ.ಎಂ., ವಿನೋದ ಆರ್., ಶ್ರುತಿ ನಂದ್ರಾಳ, ನವೀನ ಬಿ.ಕೆ. ಮೊದಲಾದವರು ಇದ್ದರು.ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಕುಮಟಾ: ಇಲ್ಲಿನ ತಾಲೂಕು ಆಡಳಿತ ಸೌಧದ ಬಳಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸಿದರು.ಪ್ರತಿಭಟನಾನಿರತರಿಂದ ತಹಸೀಲ್ದಾರ್ ಸತೀಶ ಗೌಡ ಬೇಡಿಕೆಗಳ ಮನವಿ ಸ್ವೀಕರಿಸಿದರು. ಈ ವೇಳೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದಡಿ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಪ್ರಧಾನ ಕಾರ್ಯದರ್ಶಿ ವಿನೋದರಾವ್ ಜಿ.ಪಿ., ಉಪಾಧ್ಯಕ್ಷೆ ಹೇಮಾ ನಾಯ್ಕ, ಸಂಘಟನಾ ಕಾರ್ಯದರ್ಶಿ ಮಂಜುನಾಥ ನಾಯ್ಕ ಇತರರು ಇದ್ದರು. ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆಯಿಂದಾಗಿ ತಾಲೂಕಿನಲ್ಲಿ ಸಾರ್ವಜನಿಕರು ಕಂದಾಯ ಇಲಾಖೆಯಲ್ಲಿ ತಮ್ಮ ಕೆಲಸ ಕಾರ್ಯಗಳಾಗದೇ ಪರದಾಡುವಂತಾಗಿದೆ.