ರಂಗ ಹೃದಯ ಕಲಾತಂಡದಿಂದ ತಂತಿ ನಾಟಕ ಪ್ರದರ್ಶನ

| Published : Jul 20 2025, 01:15 AM IST

ಸಾರಾಂಶ

ಪ್ರಸಿದ್ಧ ರಂಗತಂಡ ರಂಗ ಹೃದಯ ಕಲಾತಂಡವು, ರಾಜೇಂದ್ರ ಕಾರಂತರ ನಾಟಕ ’ತಂತಿ’ಯನ್ನು ಜುಲೈ ೨೫ರ ಶುಕ್ರವಾರ ನಗರದ ಕಲಾಭವನದಲ್ಲಿ ಪ್ರದರ್ಶಿಸಲು ಸಜ್ಜಾಗಿದೆ. ಇತ್ತೀಚೆಗೆ ನಾಟಕದ ಪೋಸ್ಟರ್ ಅನ್ನು ತಂಡವು ಅನಾವರಣಗೊಳಿಸಿತು. ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ರಂಗಭೂಮಿ ಹಾಗೂ ಚಲನಚಿತ್ರ ನಟಿ ಪೂಜಾ ರಘುನಂದನ್, ಖ್ಯಾತ ನಿರೂಪಕ ಯದೀಶ್ ಕಾಣಿಸಿಕೊಳ್ಳಲಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಪ್ರಸಿದ್ಧ ರಂಗತಂಡ ರಂಗ ಹೃದಯ ಕಲಾತಂಡವು, ರಾಜೇಂದ್ರ ಕಾರಂತರ ನಾಟಕ ’ತಂತಿ’ಯನ್ನು ಜುಲೈ ೨೫ರ ಶುಕ್ರವಾರ ನಗರದ ಕಲಾಭವನದಲ್ಲಿ ಪ್ರದರ್ಶಿಸಲು ಸಜ್ಜಾಗಿದೆ. ಇತ್ತೀಚೆಗೆ ನಾಟಕದ ಪೋಸ್ಟರ್ ಅನ್ನು ತಂಡವು ಅನಾವರಣಗೊಳಿಸಿತು. ಪೋಸ್ಟರ್ ಅನಾವರಣ ಕಾರ್ಯಕ್ರಮದಲ್ಲಿ ನಾಟಕದ ನಿರ್ದೇಶಕ ಕೆ.ವಿ. ಅಜೇಯ ಸಿಂಹ, ಪ್ರಮುಖ ಪಾತ್ರಧಾರಿಗಳಾದ ಪೂಜಾ ರಘುನಂದನ್, ಗುರುರಾಜ್ ಹುಲಿಕಲ್, ಪ್ರದೀಪ್, ಯದೀಶ್, ಜಗದೀಶ್, ಚಂದನ್ ಚರ್ಚಿಲ್, ಮಮತಾ ಮಂಜುನಾಥ್, ಸಂಗೀತ ನಿರ್ದೇಶಕಿ ವಾಣಿ ನಾಗೇಂದ್ರ ಸೇರಿದಂತೆ ರಂಗತಂಡದ ಎಲ್ಲಾ ಕಲಾವಿದರು ಇದ್ದರು.’ತಂತಿ’ ನಾಟಕವನ್ನು ರಾಜ್ಯದ ಪ್ರಖ್ಯಾತ ರಂಗಶಾಲೆಯಾದ ನೀನಾಸಂನಲ್ಲಿ ತರಬೇತಿ ಪಡೆದಿರುವ ಅನುಭವಿ ನಿರ್ದೇಶಕ ಕೆ.ವಿ. ಅಜೇಯ ಸಿಂಹ ನಿರ್ದೇಶಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ, ರಂಗಾಯಣದಲ್ಲಿ ತರಬೇತಿ ಪಡೆದಿರುವ ಪ್ರದೀಪ್ ಮತ್ತು ರಂಗಭೂಮಿ ಸಾಧನೆಗಾಗಿ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ರಂಗಭೂಮಿ ಹಾಗೂ ಚಲನಚಿತ್ರ ನಟಿ ಪೂಜಾ ರಘುನಂದನ್, ಖ್ಯಾತ ನಿರೂಪಕ ಯದೀಶ್ ಕಾಣಿಸಿಕೊಳ್ಳಲಿದ್ದಾರೆ. ನಾಟಕದ ಪ್ರಚಾರ ಕಾರ್ಯವನ್ನು ಸಾಹಿತಿ ಹಾಗೂ ರಂಗ ಸಂಘಟಕ ಚಲಂ ಹಾಡ್ಲಹಳ್ಳಿ ನಿರ್ವಹಿಸಲಿದ್ದಾರೆ.ರಂಗ ಹೃದಯದ ಎಂಟು ವರ್ಷಗಳ ರಂಗ ಪಯಣವು ಕಳೆದ ಎಂಟು ವರ್ಷಗಳಿಂದ ಹಾಸನದ ಜನತೆಗೆ ನಿರಂತರವಾಗಿ ಉತ್ತಮ ರಂಗಪ್ರಯೋಗಗಳನ್ನು ನೀಡುತ್ತಿರುವ ರಂಗ ಹೃದಯ ತಂಡವು, ’ಒಂದು ಶಹರದ ಸುತ್ತ’, ’ನಿಲುವಂಗಿ ಕನಸು’, ’ಆಷಾಢದ ಒಂದು ದಿನ’ ಸೇರಿದಂತೆ ಹಲವು ಯಶಸ್ವಿ ನಾಟಕಗಳನ್ನು ಪ್ರದರ್ಶಿಸಿದೆ. ವಿಶೇಷವಾಗಿ, ಪೂಜಾ ರಘುನಂದನ್ ಅಭಿನಯದ ಏಕವ್ಯಕ್ತಿ ರಂಗಪ್ರಯೋಗ ’ತಾಯಿಯಾಗುವುದೆಂದರೆ’ ೩೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಇತಿಹಾಸ ಸೃಷ್ಟಿಸಿರುವುದು ಇಲ್ಲಿ ಸ್ಮರಣೀಯ. ಜುಲೈ ೨೫ರ ಶುಕ್ರವಾರ ಹಾಸನಾಂಬ ಕಲಾಕ್ಷೇತ್ರದಲ್ಲಿ ’ತಂತಿ’ ನಾಟಕದ ಮೊದಲ ಪ್ರಯೋಗ ನಡೆಯಲಿದೆ. ಸರ್ವರಿಗೂ ಉಚಿತ ಪ್ರದರ್ಶನವಿರಲಿದೆ. ಹಾಸನದ ರಂಗಾಸಕ್ತರು ಈ ಅದ್ಭುತ ರಂಗಪ್ರಯೋಗಕ್ಕೆ ಸಾಕ್ಷಿಯಾಗಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವವಂತೆ ತಂಡದ ಅಧ್ಯಕ್ಷ ಗುರುರಾಜ್ ಹುಲಿಕಲ್ ಕೋರಿದ್ದಾರೆ.