ಸಾರಾಂಶ
ಭಾಲ್ಕಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಪುರಸಭೆ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಸನ್ಮಾನಿಸಿ ಗೌರವಿಸಿದರು
ಭಾಲ್ಕಿ: ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರೊಂದಿಗೆ ಪುರಸಭೆಯ ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಲಹೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸನ್ಮಾನಿಸಿ ಮಾತನಾಡಿ, ಕೋರ್ಟ್ ಮೆಟ್ಟಲೇರಿ, ಸುಮಾರು 15 ತಿಂಗಳಿನಿಂದ ನೆನೆಗುದಿಗೆ ಬಿದ್ದಿರುವ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯು, ಇಂದು ನೆರವೇರಿದ್ದು, ಭಾಲ್ಕಿ ಪಟ್ಟಣದ ಪುರಸಭೆಗೆ ಅಧ್ಯಕ್ಷರಾಗಿ ಶಶಿಕಲಾ ಅಶೋಕ ಸಿಂಧನಕೇರೆ ಮತ್ತು ಉಪಾಧ್ಯಕ್ಷರಾಗಿ ವಿಜಯಕುಮಾರ ಶರಣಪ್ಪ ರಾಜಭವನ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸದ ಸಂಗತಿಯಾಗಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಸಾರಥ್ಯದಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ. ಪುರಸಭೆಯ ಎಲ್ಲಾ ಸದಸ್ಯರು ಸುಂದರ, ಸ್ವಚ್ಛ ಭಾಲ್ಕಿಗಾಗಿ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಸರ್ಕಾರ ಐದು ಗ್ಯಾರಂಟಿ ಸೇರಿದಂತೆ ಕೊಟ್ಟ ಮಾತಿನಂತೆ ಎಲ್ಲಾ ಭರವಸೆ ಈಡೇರಿಸಿದೆ. ಮುಂದೆಯೂ ಪಟ್ಟಣದ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗುವುದು. ನೂತನ ಅಧ್ಯಕ್ಷ, ಉಪಾಧ್ಯಕ್ಷರು ಶ್ರಮವಹಿಸಿ ಕಾರ್ಯನಿರ್ವಹಿಸಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಸಿಪಿಐ ಬಿ.ಅಮರೇಶ ಸೇರಿಂದತೆ ಪುರಸಭೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.