ಬೀದರ್‌ ಜ್ಞಾನಶಿವಯೋಗಾಶ್ರಮದಲ್ಲಿ ನೂತನ ಸಂಸದ ಸಾಗರ ಖಂಡ್ರೆರನ್ನು ಶ್ರೀಶೈಲ ಕರುಣಾದೇವಿ ಮಾತಾ ಸನ್ಮಾನಿಸಿ ಆಶೀರ್ವದಿಸಿದರು ಡಾ. ರಾಜಶೇಖರ ಶಿವಾಚಾರ್ಯರು, ಶಿವಯ್ಯ ಸ್ವಾಮಿ, ಕಂಟೆಪ್ಪಾ ಭಂಗೊರೆ, ಮಹಾಂತೇಶ ಡೊಂಗರಗಿ, ಬಸವರಾಜ ಹಾಲಹಳ್ಳಿ ಇದ್ದರು

ಕನ್ನಡಪ್ರಭ ವಾರ್ತೆ ಬೀದರ್‌

ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹೆಮ್ಮೆ ಕೇಂದ್ರವಾದ ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾನಿಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಪೀಠ ಸ್ಥಾಪಿಸಲು ಆದ್ಯತೆ ನೀಡಬೇಕೆಂದು ಬೇಮಳಖೇಡ, ಗೋರ್ಟಾ ಬೀದರ್‌ ಮಠದ ಡಾ.ರಾಜಶೇಖರ ಶಿವಾಚಾರ್ಯರು ಕರೆ ನೀಡಿದರು.

ಅವರು ಬೀದರ್‌ ಜ್ಞಾನ ಶಿವಯೋಗಾಶ್ರಮದ ದರ್ಶನಾರ್ಥವಾಗಿ ಭೇಟಿ ನೀಡಿದ ಸಂಸದ ಸಾಗರ ಈಶ್ವರ ಖಂಡ್ರೆರನ್ನು ಸತ್ಕರಿಸಿ ಆಶೀರ್ವದಿಸಿ ಈ ವಿಷಯ ಕುರಿತು ಚರ್ಚಿಸಿ ಕಡ್ಡಾಯವಾಗಿ ಅಧ್ಯಯನ ಪೀಠ ಸ್ಥಾಪನೆಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ವೀರಶೈವ ಲಿಂಗಾಯತ ಅಧ್ಯಯನ ಪೀಠವು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸ್ಥಾಪನೆಯಾದಲ್ಲಿ ಈ ಭಾಗದ ಅಸಂಖ್ಯಾತ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಮತ್ತು ವಿದ್ವಾಂಸರಿಗೆ ಅತ್ಯಮೂಲ್ಯವಾದ ಅನುಕೂಲ ಒದಗಿಸಿಕೊಟ್ಟಂತಾಗುತ್ತದೆ ಎಂದು ಶ್ರೀಗಳು ಸಂಸದ ಸಾಗರಗೆ ಮನವರಿಕೆ ಮಾಡಿಕೊಟ್ಟರು.

ಸಂಸದ ಸಾಗರ ಖಂಡ್ರೆ ಖಂಡಿತವಾಗಿ ಈ ಕಾರ್ಯಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.

ಇದೇ ವೇಳೆ ಶ್ರೀಶೈಲದ ಅಕ್ಕಮಹಾದೇವಿ ಚೈತನ್ಯ ಪೀಠದ ಕರುಣಾದೇವಿ ಮಾತಾ ಹಾಗೂ ಶ್ರೀಗಳಿಗೆ ಸಾಗರ ಖಂಡ್ರೆ ಶಾಲು ಹೊದಿಸಿ ಆರ್ಶಿವಾದ ಪಡೆದುಕೊಂಡರು. ರಾಜ್ಯ ದಿಶಾ ಕಮಿಟಿ ಶಿವಯ್ಯ ಸ್ವಾಮಿ, ಕಂಟೆಪ್ಪಾ ಭಂಗೊರೆ, ಮಹಾಂತೇಶ ಡೊಂಗರಗಿ, ಬಸವರಾಜ ಹಾಲಹಳ್ಳಿ ಇದ್ದರು.