ಕೊಡವ ಸಂಸ್ಕೃತಿ-ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿ: ಡಾ.ಮಂತರ್ ಗೌಡ

| Published : Nov 16 2024, 12:33 AM IST

ಕೊಡವ ಸಂಸ್ಕೃತಿ-ಸಾಹಿತ್ಯ ಬೆಳವಣಿಗೆಗೆ ಶ್ರಮಿಸಿ: ಡಾ.ಮಂತರ್ ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಅರೆಕಾಡು ರಿಯಾವರ್ ರೆಸಾರ್ಟ್ಸ್‌ನಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವಿನೂತನ ಕಾರ್ಯಕ್ರಮ ‘ನಾಡೊರ್ಮೆ’ ಕಾರ್ಯಕ್ರಮ ನಡೆಯಿತು. ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಪಾಲ್ಗೊಂಡು ಮಾತನಾಡಿ, ವಿಭಿನ್ನ, ವಿಶಿಷ್ಟ ಸಂಸ್ಕೃತಿಯುಳ್ಳ ಜನಾಂಗ ಕೊಡವರದ್ದಾಗಿದ್ದು, ಈ ಸಂಸ್ಕೃತಿ ಹಾಗೂ ಭಾಷೆ ಉಳಿಸಿಕೊಂಡು ಹೋಗುವ ಹಾಗೂ ಮುಂದಿನ ಪೀಳಿಗೆಯಲ್ಲಿ ಅಭಿಮಾನ ಹುಟ್ಟಿಸುವ ಕೆಲಸ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಆಗಬೇಕಿದೆ ಎಂದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ವಿಭಿನ್ನ, ವಿಶಿಷ್ಟ ಸಂಸ್ಕೃತಿಯುಳ್ಳ ಜನಾಂಗ ಕೊಡವರದ್ದಾಗಿದ್ದು, ಈ ಸಂಸ್ಕೃತಿ ಹಾಗೂ ಭಾಷೆ ಉಳಿಸಿಕೊಂಡು ಹೋಗುವ ಹಾಗೂ ಮುಂದಿನ ಪೀಳಿಗೆಯಲ್ಲಿ ಅಭಿಮಾನ ಹುಟ್ಟಿಸುವ ಕೆಲಸ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಆಗಬೇಕಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದ್ದಾರೆ.

ಅರೆಕಾಡು ರಿಯಾವರ್ ರೆಸಾರ್ಟ್ಸ್‌ನಲ್ಲಿ ನಡೆದ ಅಕಾಡೆಮಿಯ ವಿನೂತನ ಕಾರ್ಯಕ್ರಮವಾದ ‘ನಾಡೊರ್ಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡವ ಸಾಂಸ್ಕೃತಿಕ ಹಬ್ಬವನ್ನು ಆಚರಿಸುವುದರೊಟ್ಟಿಗೆ ಆಯಾಯ ಊರು-ನಾಡಿನ ಯುವ ಜನಾಂಗದ ಪಾಲ್ಗೊಳ್ಳುವಿಕೆಗೆ ಪೂರಕ ವಾತಾವರಣ ನಿರ್ಮಾಣ ಆಗಬೇಕಿದೆ. ಹೊರಗೆ ನೆಲೆಸಿರುವ ಯುವಕರನ್ನು ಕೊಡಗಿನಲ್ಲಿಯೇ ನೆಲೆಸುವಂತೆ ಮಾಡಬೇಕು. ಕೊಡವ ಅಕಾಡೆಮಿಯ ಕೆಲಸ-ಕಾರ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ ನಾನು ವೈಯಕ್ತಿಕವಾಗಿ ಹಾಗೂ ಸರ್ಕಾರದ ಮಟ್ಟದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ ಕೊಡವ ಆಚಾರ-ವಿಚಾರ, ಸಂಸ್ಕೃತಿ ದೇಶದಲ್ಲೇ ಅಗ್ರಸ್ಥಾನದಲ್ಲಿ ನಿಲ್ಲುವಂತದ್ದು. ಇಂತಹ ಹಿರಿಮೆಯುಳ್ಳ ಸಂಸ್ಕೃತಿಯನ್ನು ಕೊಡವ ಜನಾಂಗ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ. ಕೊಡಗಿನಲ್ಲಿ ಆಸ್ತಿ ಉಳಿಸಿಕೊಂಡು ಹೋದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.

ಇರುವ ಭೂಮಿ-ತೋಟಗಳನ್ನು ಪರಿವರ್ತಿಸಿ ನಿವೇಶನ ಮಾಡುವಂತದ್ದು ತಪ್ಪಬೇಕು. ನಮ್ಮ ಭೂಮಿ-ಆಸ್ತಿ ಎಂದಿಗೂ ನಮ್ಮ ಒಡೆತನದಲ್ಲಿಯೇ ಇರುವಂತಾಗಬೇಕು. ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಇವೆಲ್ಲ ಪೂರಕವಾಗಿದ್ದು ಗದ್ದೆಯನ್ನು ನೆಡುವ ಕೆಲಸ ಮುಂದಿನ ದಿನಗಳಲ್ಲಿ ಸರ್ಕಾರದ ಸಬ್ಸಿಡಿಯೊಂದಿಗೆ ಆಗಬೇಕಿದೆ. ಇದರಿಂದ ಪಾಳುಬಿದ್ದಿರುವ ಗದ್ದೆಗಳ ಉಳುಮೆಯೊಂದಿಗೆ ಅಂತರ್ಜಲದ ಮಟ್ಟ ಮೇಲೇರಿ ಕೊಡಗಿನ ಪರಿಸರ, ಪ್ರಕೃತಿ ತನ್ನತನ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಸಂಸ್ಕೃತಿ ಈ ನೆಲದ ಅಸ್ಮಿತೆಯಾಗಿದ್ದು, ಪ್ರಪಂಚದೆಲ್ಲೆಡೆ ಕೊಡವ ಸಂಸ್ಕೃತಿ-ಸಾಹಿತ್ಯದ ಕಂಪು ಪಸರಿಸುವ ಕೆಲಸವಾಗಬೇಕಿದೆ. ನಮ್ಮ ಭಾಷೆ, ಸಂಸ್ಕೃತಿ ಹಾಗೂ ನೆಲದ ಮೇಲಿನ ಅಭಿಮಾನ-ಹಕ್ಕನ್ನು ಪುನರ್‌ಸ್ಥಾಪಿಸುವುದರ ಮೂಲಕ ಸಂಸ್ಕೃತಿಯ ವೈಭವ ಮರುಕಳುಹಿಸುವಂತಾಗಬೇಕು ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮಗಳು ಜನಾಂಗದ ಸಂಸ್ಕೃತಿ ಹಾಗೂ ಭಾಷೆಗೆ ಹೊಂದಿಕೊಂಡಂತೆ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಪ್ರತಿಯೊಬ್ಬರೂ ಅವರವರ ಸಂಸ್ಕೃತಿ, ಭಾಷೆಯನ್ನು ಪ್ರೀತಿಸುವುದರ ಮೂಲಕ ತಮ್ಮತನ ಉಳಿಸಿಕೊಳ್ಳಬೇಕು ಎಂದರು.

ಅರೆಕಾಡು-ಹೊಸ್ಕೇರಿ ಗ್ರಾಮದ ತೊಂಡಿಯಂಡ ವಾಸು ನಾಣಯ್ಯ, ಬಲ್ಲಚಂಡ ಶಂಭು ಸೋಮಯ್ಯ, ಅಣ್ಣಾರ್‌ಕಂಡ ಪ್ರೇಮ್ ಅಯ್ಯಪ್ಪ, ಕಾಡುಮಂಡ ವಿನೋದ್ ತಿಮ್ಮಯ್ಯ, ಬಲ್ಲಾರಂಡ ಅಭಿನ್ ಮುತ್ತಣ್ಣ ಹಾಗೂ ರಿಯಾವರ್ ರೆಸಾರ್ಟ್ ಮಾಲೀಕ ಮುಕ್ಕಾಟಿರ ವಿನಯ್-ಶಿಲ್ಪ ದಂಪತಿಯನ್ನು ಅಕಾಡೆಮಿ ಹಾಗೂ ಕೊಡವ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ‘ಅರೆಕಾಡು-ಹೊಸ್ಕೇರಿ ನಾಡೊರ್ಮೆ’ಯ ಯಶಸ್ಸಿಗೆ ಕಾರಣಕರ್ತರಾದ ಕೊಡವ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯರನ್ನು ಕೊಡವ ಅಸೋಸಿಯೇಶನ್ ವತಿಯಿಂದ ಸನ್ಮಾನಿಸಲಾಯಿತು.

ವಿಚಾರ ಮಂಡನೆ: ಕಾರ್ಯಕ್ರಮದಲ್ಲಿ ವಿಚಾರ ಮಂಡನೆ ಆಯೋಜಿಸಲಾಗಿತ್ತು. ಡಾ. ಮುಲ್ಲೇಂಗಡ ರೇವತಿ ಪೂವಯ್ಯ ‘ಕೊಡವಡ ಮಾಲ್-ಮಟ ಚಿಂಗಾರ’ ಕುರಿತು ವಿಷಯ ಮಂಡಿಸಿದರು. ರೇವತಿ ಪೂವಯ್ಯ ಅವರಿಗೆ ಅಕಾಡೆಮಿ ವತಿಯಿಂದ, ತಮಿಳಿನ ‘ತಿರುಕ್ಕುರಳ್’ನ್ನು ಕೊಡವಕ್ಕೆ ಭಾಷಾಂತರಿಸಿರುವ ಗೌರವವಾಗಿ ಒಟ್ಟು ಒಂದುವರೆ ಲಕ್ಷ ರು.ಗಳ ಅಂತಿಮ ಕಂತು ರು. 25 ಸಾವಿರ ನೀಡಿ ಸನ್ಮಾನಿಸಲಾಯಿತು.

ಅಕಾಡೆಮಿ ಸದಸ್ಯ-ಸಂಚಾಲಕ ಪುತ್ತರಿರ ಪಪ್ಪು ತಿಮ್ಮಯ್ಯ ಹಾಗೂ ಸದಸ್ಯರಾದ ಕಂಬೆಯಂಡ ಡೀನ ಬೋಜಣ್ಣ, ಚೊಟ್ಟೆಯಂಡ ಸಂಜು ಕಾವೇರಪ್ಪ, ಪಾನಿಕುಟ್ಟಿರ ಕುಟ್ಟಪ್ಪ, ನಾಪಂಡ ಕುಟ್ಟಪ್ಪ, ಮೊಳ್ಳೆಕುಟ್ಟಡ ದಿನು ಬೋಜಪ್ಪ, ನಾಯಂದಿರ ಶಿವಾಜಿ, ನಾಯಕಂಡ ಬೇಬಿ ಚಿಣ್ಣಪ್ಪ, ಚೆಪ್ಪುಡಿರ ಎ. ಉತ್ತಪ್ಪ, ಪೊನ್ನಿರ ಯು. ಗಗನ್, ಕೊಡವ ಅಸೋಸಿಯೇಷನ್ ಉಪಾಧ್ಯಕ್ಷ ಬಲ್ಲಚಂಡ ವಿಠಲ್ ಕಾವೇರಪ್ಪ, ಖಜಾಂಚಿ ಕಮಾಂಡರ್ ಕುಕ್ಕೆರ ಕೇಶು ಉತ್ತಪ್ಪ, ಸಹ ಖಜಾಂಚಿ ಬಿದ್ದಂಡ ಭೀಮಯ್ಯ, ಕಾರ್ಯದರ್ಶಿ ನೆಲ್ಲಮಕ್ಕಡ ಪಾವನ್, ಸಹ ಖಜಾಂಚಿ ಕುಕ್ಕೆರ ಸಿ. ಅಯ್ಯಪ್ಪ, ಸದಸ್ಯರಾದ ತೊಂಡಿಯಂಡ ವಾಸು ನಾಣಯ್ಯ, ಅಣ್ಣರ್‌ಕಂಡ ಅಮ್ಮಣ ಸೋಮಯ್ಯ, ಕಾಡುಮಂಡ ಮುತ್ತಣ್ಣ, ಚೇರಂಡ ಸುಭಾಶ್, ಕುಕ್ಕೆರ ದಿನೇಶ್, ಮುಕ್ಕಾಟಿರ ವಿನಯ್, ಚೇರಂಡ ವಿಜಯ್ ಮುತ್ತಪ್ಪ, ಬಲ್ಲಾರಂಡ ಅಭಿನ್, ಕುಕ್ಕೆರ ಗಣೇಶ್, ಕುಕ್ಕೆರ ಕುಶ, ನೆಲ್ಲಮಕ್ಕಡ ಪ್ರಕಾಶ್, ಅಪ್ಪಚೆಟ್ಟೋಳಂಡ ಗಿರೀಶ್, ಅಣ್ಣಾರ್‌ಕಂಡ ವಿಜು, ಚೀಯಂಡಿರ ಉತ್ತಪ್ಪ, ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ. ಗಿರೀಶ್, ಅರ್ಥ ಸದಸ್ಯರಾದ ಕುಮಾರ, ಸಾಹಿತಿ ಕರವಟ್ಟಿರ ಶಶಿ ಸುಬ್ರಮಣಿ, ಹಿರಿಯರಾದ ನಿವೃತ್ತ ಪ್ರಾಂಶುಪಾಲೆ ಡಾ.ಮಂಡೇಪಂಡ ಪುಷ್ಟ ಕುಟ್ಟಣ್ಣ ಇನ್ನಿತರರು ನಾಡೊರ್ಮೆಯ ವೈಭವದಲ್ಲಿ ಪಾಲ್ಗೊಂಡಿದ್ದರು.