ಶೈಕ್ಷಣಿಕ ಬದಲಾವಣೆಗೆ ಪ್ರಾಮಾಣಿಕವಾಗಿ ಶ್ರಮಿಸಿ: ಸಚಿವ ಸಂತೋಷ ಲಾಡ್

| Published : Sep 07 2024, 01:36 AM IST

ಶೈಕ್ಷಣಿಕ ಬದಲಾವಣೆಗೆ ಪ್ರಾಮಾಣಿಕವಾಗಿ ಶ್ರಮಿಸಿ: ಸಚಿವ ಸಂತೋಷ ಲಾಡ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಶಿಕ್ಷಕ ಸಮೂಹಕ್ಕೆ ಡಾ. ರಾಧಾಕೃಷ್ಣನ್ ಅವರದ್ದು ಮಾದರಿ ವ್ಯಕ್ತಿತ್ವ. ಅವರು ಶಿಕ್ಷಣ, ಸಮಾಜ, ಧರ್ಮ, ರಾಜಕೀಯ ಮತ್ತು ಸರಕಾರಿ ಸೇವೆಯಲ್ಲಿ ಮಾರ್ಗದರ್ಶಕರಾಗಿದ್ದಾರೆ ಎಂದು ಸಚಿವ ಲಾಡ್ ಹೇಳಿದರು.

ಧಾರವಾಡ: ಇಂದಿನ ಶೈಕ್ಷಣಿಕ ಪ್ರಗತಿ, ಗುಣಮಟ್ಟ ಪರಿಶೀಲಿಸಿದಾಗ, ಶಿಕ್ಷಕ ಸಮೂಹ ತಮ್ಮ ಆದರ್ಶ ಮತ್ತು ಕಾಯಕ ವೃತ್ತಿ ಮೌಲ್ಯಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವ ಕಾಲ ಘಟ್ಟದಲ್ಲಿದೆ. ಶಿಕ್ಷಕರು ರಾಜಕಾರಣಿಗಳ ಹಿಂಬಾಲಕರಾಗದೇ, ಅನಗತ್ಯ ತುಷ್ಟೀಕರಣ, ಓಲೈಕೆಗಳನ್ನು ಮಾಡದೇ, ಮಹನೀಯರ ನೀತಿ ಮಾರ್ಗದಲ್ಲಿ ನಡೆದು ಶೈಕ್ಷಣಿಕ ಬದಲಾವಣೆ, ಆತ್ಮ ಸಂಸ್ಕಾರ ನೀಡುವ ಶಿಕ್ಷಣ ನೀಡುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಜಿಲ್ಲಾ ಉಪ ನಿರ್ದೇಶಕರ ಕಾರ್ಯಾಲಯದಿಂದ ಆಯೋಜಿಸಿದ್ದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಜೃಷ್ಣನ್‌ ಅವರ ಜನ್ಮದಿನದ ಅಂಗವಾಗಿ ಜಿಲ್ಲಾಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ನಮ್ಮ ಶಿಕ್ಷಕ ಸಮೂಹಕ್ಕೆ ಡಾ. ರಾಧಾಕೃಷ್ಣನ್ ಅವರದ್ದು ಮಾದರಿ ವ್ಯಕ್ತಿತ್ವ. ಅವರು ಶಿಕ್ಷಣ, ಸಮಾಜ, ಧರ್ಮ, ರಾಜಕೀಯ ಮತ್ತು ಸರಕಾರಿ ಸೇವೆಯಲ್ಲಿ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಣ ಮತ್ತು ಸಂವಿಧಾನಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಈಗಾಗಲೇ ಶಿಕ್ಷರ ಬೇಡಿಕೆಗಳ ಬಗ್ಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ೭ನೇ ವೇತನ ಆಯೋಗ ಜಾರಿಗೊಳಿಸಿದೆ. ಉಳಿದಂತೆ ಸರಕಾರಿ ನೌಕರರ ಎಲ್ಲ ಬೇಡಿಕೆಗಳು ಪರಿಶೀಲನಾ ಹಂತದಲ್ಲಿವೆ ಎಂದು ಸಚಿವರು ತಿಳಿಸಿದರು.

ಸಂವಿಧಾನ ಉಳಿಯುವುದು ಶಿಕ್ಷಕರಿಂದ ಮತ್ತು ಶಿಕ್ಷಕರು ಮಕ್ಕಳಿಗೆ ನೀಡುವ ಶಿಕ್ಷಣದಿಂದ ಮಾತ್ರ ಸಾಧ್ಯ. ಜಗತ್ತಿನ ಬದಲಾವಣೆ, ಸಮಾಜದ ಬದಲಾವಣೆ ಶಿಕ್ಷಕರಿಂದ ಮಾತ್ರ ಆಗುತ್ತದೆ. ರಾಜಕೀಯ ರಗಳೆಗೆ ಹೋಗದೆ ಶಿಕ್ಷಕರು ಉತ್ತಮ ಸಮಾಜ ಕಟ್ಟುವ ಕಾಯಕದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳಬೇಕು ಎಂದು ಲಾಡ್ ಹೇಳಿದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ನೇತೃತ್ವದಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಬದಲಾವಣೆಗೆ ಮಿಷನ್ ವಿದ್ಯಾ ಕಾಶಿ ಯೋಜನೆ ಮೂಲಕ ಕ್ರಮವಹಿಸಿರುವುದು ಅಭಿನಂದನಾರ್ಹವಾಗಿದ್ದು, ಈ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿ, ಶಿಕ್ಷಕ ಸಮೂಹ ಮತ್ತು ಎಲ್ಲ ಪಾಲಕರು ಪ್ರಾಮಾಣಿಕವಾಗಿ ಕೈಜೋಡಿಸಿ, ಸಕ್ರಿಯವಾಗಿ ಪಾಲ್ಗೋಳ್ಳಬೇಕು ಎಂದು ತಿಳಿಸಿದರು.

ಸಂವಿಧಾನ ಒಂದೇ ನಮ್ಮನ್ನು ಸದಾಕಾಲ ರಕ್ಷಿಸುವ ರಕ್ಷಕ. ಸಂವಿಧಾನದ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಬೇಕು. ಉತ್ತಮವಾಗಿ ಮಕ್ಕಳನ್ನು ಬೆಳೆಸಬೇಕು. ಪ್ರತಿ ದಿನ ಸಕಾರಾತ್ಮವಾಗಿ ಚಿಂತಿಸುವ ಮೂಲಕ ಮಕ್ಕಳಲ್ಲಿ ಜಾತ್ಯತೀತತೇ, ಸಾಮರಸ್ಯ, ಸಹೋದರತ್ವ, ಭ್ರಾತೃತ್ವದ ಗುಣಗಳನ್ನು ಬೆಳೆಸಬೇಕು ಎಂದು ವಿನಂತಿಸಿದರು.

ಧಾರವಾಡ ಮುರಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ, ಆಶಿರ್ವಚನ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಶಿಕ್ಷಕರು ಶ್ರಮಪಟ್ಟರೆ ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ನಾವು ಉತ್ತಮ ಜೀವನ ಪಡೆಯಬೇಕಾದರೆ, ಉತ್ತಮ ಶಿಕ್ಷಕರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ಲಕ್ಷ್ಯ ಅಕಾಡೆಮಿ ಮುಖ್ಯಸ್ಥೆ ಲಕ್ಷ್ಮೀ ಹಿರೇಮಠ, ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ ಸನದಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ. ಸಿಇಒ ಸ್ವರೂಪಾ ಟಿ.ಕೆ., ಲೋಕಸಭಾ ಮಾಜಿ ಸದಸ್ಯ ಐ.ಜಿ. ಸನದಿ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಸೇರಿದಂತೆ ವಿವಿಧ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳು ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ೭, ಹಿರಿಯ ಪ್ರಾಥಮಿಕ ಶಾಲೆಯ ೭, ಶಿಕ್ಷಕರಿಗೆ ಮತ್ತು ಪ್ರೌಢಶಾಲೆ ವಿಭಾಗದ ೭ ಜನ ಸಹ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಭೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಶಿಕ್ಷಕ ಸಮೂಹದವರು ಭಾಗವಹಿಸಿದ್ದರು. ಪ್ರಕಾಶ ಭೂತಾಳಿ, ರೇಖಾ ಭಜಂತ್ರಿ ನಿರೂಪಿಸಿದರು.

ಜಾನಪದ ನೃತ್ಯಕ್ಕೆ ಲಾಡ್ ಹೆಜ್ಜೆ:

ಸಚಿವ ಸಂತೋಷ ಲಾಡ್ ಉತ್ತರ ಕರ್ನಾಟಕದ ಪ್ರಮುಖ ಮತ್ತು ವಿಶಿಷ್ಟವಾದ ಜೋಗುತಿ ಜಾನಪದ ನೃತ್ಯಕ್ಕೆ ಕಲಾವಿದ ಶಿಕ್ಷಕ, ಶಿಕ್ಷಕಿಯರ ಜೊತೆಗೆ ಬೆಂಕಿ ಕುಂಡದ ಗಡಿಗೆಯನ್ನು ತಲೆ ಮೇಲೆ ಹೊತ್ತು ಹೆಜ್ಜೆ ಹಾಕಿ ಸಂಭ್ರಮಿಸಿದರು. ಶಿಕ್ಷಕ ಕಲಾವಿದರ ಸಿರಿಗಂಧ ಜಾನಪದ ಕಲಾಬಳಗದ ಪ್ರಕಾಶ ಕಂಬಳಿ ಮತ್ತು ಜಯಲಕ್ಷ್ಮೀ ಎಚ್. ಅವರು ತಮ್ಮ ಸಹ ಕಲಾ ಶಿಕ್ಷಕರೊಂದಿಗೆ ಜಾನಪದ ನೃತ್ಯ ಪ್ರದರ್ಶಿಸಿ, ಪ್ರೇಕ್ಷಕರ ಮನ ಸೆಳೆದರು.