ಆರ್ಥಿಕ ಸಂಕಷ್ಟದಿಂದ ಹಾಲು ಒಕ್ಕೂಟ ಹೊರತರಲು ಶ್ರಮಿಸಿ: ಶಾಸಕ ಮಾನೆ

| Published : Apr 20 2025, 01:50 AM IST

ಸಾರಾಂಶ

ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ಭೂತೇಶ್ವರ ದೇವಸ್ಥಾನದಲ್ಲಿ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ನಡೆಯಿತು.

ಹಾನಗಲ್ಲ: ಮಾರುಕಟ್ಟೆಯಲ್ಲಿ ಸ್ಪರ್ಧೆ, ಸವಾಲು ಎದುರಿಸಿ, ಹೊಸತನ ಅಳವಡಿಸಿಕೊಂಡು ಆರ್ಥಿಕ ಸಂಕಷ್ಟದಿಂದ ಹಾಲು ಒಕ್ಕೂಟವನ್ನು ಹೊರತರಲು ನೂತನ ಆಡಳಿತ ಮಂಡಳಿ ಶ್ರಮ ವಹಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ಭೂತೇಶ್ವರ ದೇವಸ್ಥಾನದಲ್ಲಿ ನಡೆದ ಹಾವೇರಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಹುತೇಕ ಎಲ್ಲ ರಂಗಗಳೂ ಸಂಕಷ್ಟದಲ್ಲಿದ್ದು, ಸಹಕಾರಿ ರಂಗ ಇದಕ್ಕೆ ಹೊರತಾಗಿಲ್ಲ. ಜಿಲ್ಲೆಯ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ಉಳಿಯಬೇಕಿದೆ ಎಂದು ಹೇಳಿದರು.ಹಾಲು ಒಕ್ಕೂಟಕ್ಕೆ ಸರ್ಕಾರ ಸಹ ಶಕ್ತಿ ತುಂಬಬೇಕಿದ್ದು, ಈ ನಿಟ್ಟಿನಲ್ಲಿ ಶ್ರಮ ವಹಿಸಲಾಗುವುದು. ಬರೀ ಕೃಷಿ ಮೇಲೆ ಅವಲಂಬನೆ ಇದ್ದರೆ ಕೃಷಿಕರ ಬದುಕು ಕಷ್ಟಕರವಾಗಲಿದೆ. ಈ ನಿಟ್ಟಿನಲ್ಲಿ ಹೈನೋದ್ಯಮಕ್ಕೆ ಅಗತ್ಯ ಪ್ರೋತ್ಸಾಹ ಸಿಗಬೇಕಿದೆ. ಒಕ್ಕೂಟವನ್ನು ಬಲಪಡಿಸುವ ಅನಿವಾರ್ಯತೆ ಇದ್ದು, ಈ ನಿಟ್ಟಿನಲ್ಲಿ ಮುಕ್ತ ಚಿಂತನೆ ನಡೆಯಬೇಕಿದೆ. ಒಕ್ಕೂಟ ಬಲಪಡಿಸಲು ಹೊಸ ತಂಡ ಕಾಳಜಿ ವಹಿಸಲಿದ್ದು, ಅಗತ್ಯ ಸಹಕಾರದ ಭರವಸೆ ನೀಡಿದರು.

ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ ಮಾತನಾಡಿ, ಹಾವೇರಿ ಹಾಲು ಒಕ್ಕೂಟಕ್ಕೆ ಮಾರುಕಟ್ಟೆ ಇಲ್ಲದಂತಾಗಿದೆ. ಹಾಲಿನ ಗುಣಮಟ್ಟ ಕಡಿಮೆ ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ನಷ್ಟವನ್ನು ಸರಿದೂಗಿಸುವ ಸವಾಲು ಸಹ ನಮ್ಮ ಮುಂದಿದೆ. ಒಕ್ಕೂಟ ಉಳಿದರೆ ಮಾತ್ರ ಹಾಲು ಉತ್ಪಾದಕರ ಹಿತ ಕಾಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಹಾಲಿನ ಗುಣಮಟ್ಟದ ಕಡೆಗೆ ಉತ್ಪಾದಕರು ಗಮನ ನೀಡಬೇಕಿದೆ ಎಂದರು.

ನಿರ್ದೇಶಕ ಚಂದ್ರಪ್ಪ ಜಾಲಗಾರ ಮಾತನಾಡಿ, ಹಾನಗಲ್ ತಾಲೂಕಿನಲ್ಲಿ ಪಶು ಆಹಾರ ಸಂಸ್ಕರಣ ಘಟಕ ನಿರ್ಮಾಣಕ್ಕೆ 30 ಎಕರೆ ಜಮೀನು ಮಂಜೂರಿ ಮಾಡಿಸಲು ಶಾಸಕ ಶ್ರೀನಿವಾಸ ಮಾನೆ ಕಾಳಜಿ ವಹಿಸಿದ್ದಾರೆ. ಹೈನೋದ್ಯಮಕ್ಕೆ ಪ್ರೋತ್ಸಾಹ ದೊರೆತರೆ ಬಡತನ ನಿರ್ಮೂಲನೆಯಾಗಲಿದೆ ಎಂದರು.

ಒಕ್ಕೂಟದ ಉಪಾಧ್ಯಕ್ಷ ಉಜ್ಜನಗೌಡ ಮಾವಿನತೋಪ, ನಿರ್ದೇಶಕರಾದ ಅಶೋಕ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಬಸವೇಶಗೌಡ ಪಾಟೀಲ, ಶಂಕರಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಎಚ್.ಟಿ. ಅಶೋಕಗೌಡ, ಸಂಗೂರ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ನಾರಾಯಣಪ್ಪ ಕಠಾರಿ, ಜೆ.ಸಿ. ಕುಲಕರ್ಣಿ, ಮಹದೇವಪ್ಪ ಮಾದಪ್ಪನವರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಎಸ್.ಜೆ. ಸುಣಗಾರ, ವೀರೇಶ ಬೈಲವಾಳ, ಭರಮಣ್ಣ ಶಿವೂರ, ಮೆಹಬೂಬಅಲಿ ಬ್ಯಾಡಗಿ, ಯಾಸೀರ್‌ಅರಾಫತ್ ಮಕಾನದಾರ, ಗೀತಾ ಪೂಜಾರ ಉಪಸ್ಥಿತರಿದ್ದರು.

ಬರೀ ಲಾಭದ ಕಡೆಗೆ ಗಮನ ನೀಡದೇ ಹಾಲು ಒಕ್ಕೂಟದ ಬಲವರ್ಧನೆಗೂ ಹಾಲು ಉತ್ಪಾದಕರು ಮುಂದಾಗಬೇಕಿದೆ. ಗುಣಮಟ್ಟದ ಹಾಲು ಉತ್ಪಾದಿಸಬೇಕಿದೆ. ಒಕ್ಕೂಟ ಸಹ ಹಾಲು ಉತ್ಪಾದಕರ ಹಿತದೃಷ್ಟಿ ಗಮನದಲ್ಲಿದ್ದುಕೊಂಡು ಪರಸ್ಪರ ಸಹಕಾರದೊಂದಿಗೆ ಹೆಜ್ಜೆ ಹಾಕಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.