ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿಸಲು ಶ್ರಮಿಸಿ: ಚಕ್ರವರ್ತಿ ಸೂಲಿಬೆಲೆ ಕರೆ

| Published : Apr 29 2024, 01:46 AM IST / Updated: Apr 29 2024, 08:14 AM IST

ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿಸಲು ಶ್ರಮಿಸಿ: ಚಕ್ರವರ್ತಿ ಸೂಲಿಬೆಲೆ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ದೇಶವು ಸಾಕಷ್ಟು ಅಭಿವೃದ್ಧಿಯಾಗಿದೆ. ಅವರ ಆಲೋಚನೆಗಳು ಸದೃಢ ಭಾರತ ನಿರ್ಮಾಣ ಸಂಕಲ್ಪ ಹೊಂದಿರುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಸೂಲಿಬೆಲೆ ಹೇಳಿದರು.

 ಹುಬ್ಬಳ್ಳಿ :  ಭಾರತಾಂಬೆಯ ಮೊಗದಲ್ಲಿ ಮಂದಹಾಸ ಮೂಡಬೇಕು ಎಂದರೆ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿಸಿ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ಇಲ್ಲಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸಿಟಿಜನ್ಸ್ ಫೋರ್ಂ ಫಾರ್ ಡೆವಲಪ್ ಮೆಂಟ್ ವತಿಯಿಂದ ಭಾನುವಾರ ಸಂಜೆ ಪ್ರಬುದ್ಧರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿಂದ ದೇಶವು ಸಾಕಷ್ಟು ಅಭಿವೃದ್ಧಿಯಾಗಿದೆ. ಅವರ ಆಲೋಚನೆಗಳು ಸದೃಢ ಭಾರತ ನಿರ್ಮಾಣ ಸಂಕಲ್ಪ ಹೊಂದಿರುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಮೋದಿ ಅವರ 10 ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 31ಸಾವಿರ ಕಿಮೀ ದಷ್ಟು ರೈಲು ಹಳಿ ಹಾಕಲಾಗಿದೆ. ಬಹುತೇಕ ಏಕಪಥ ಮಾರ್ಗಗಳು ದ್ವಿಪಥವಾಗಿವೆ. ಶೇ. 90ರಷ್ಟು ರೈಲು ಮಾರ್ಗಗಳು ವಿದ್ಯುದೀಕರಣಗೊಂಡಿವೆ. ಇದರಿಂದ ಇಂದು ಭಾರತ ಜಗತ್ತಿನಲ್ಲೇ ಅತಿ ಹೆಚ್ಚು ವಿದ್ಯುದೀಕರಣಗೊಂಡ ರೈಲು ಮಾರ್ಗ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದರು.

ನರೇಂದ್ರ ಮೋದಿ ಪ್ರಧಾನಿಯಾಗುವ ಪೂರ್ವ ದೇಶದಲ್ಲಿ ಕೇವಲ 214 ಕಿಮೀದಷ್ಟು ಮೆಟ್ರೋ ರೈಲು ಮಾರ್ಗವಿತ್ತು. ಇಂದು 714 ಕಿಮೀ ನಷ್ಟು ಮೆಟ್ರೋ ರೈಲು ಮಾರ್ಗ ನಿರ್ಮಾಣಗೊಂಡಿವೆ. ಈ ಹಿಂದೆ ದೇಶದಲ್ಲಿ ರೈಲಿನ ವೇಗ ಗಂಟೆಗೆ ಕೇವಲ 60-80 ಕಿಮೀ ಇತ್ತು. ಮೋದಿ ಅವರು ರೈಲಿನ ವೇಗ ಹೆಚ್ಚಿಸಲು ವಿವಿಧ ದೇಶಗಳ ತಜ್ಞರನ್ನು ಕರೆಯಿಸಿ ಸಮಾಲೋಚನೆ ನಡೆಸಿದ್ದರು. ಕೊನೆಯಲ್ಲಿ ಗಂಟೆಗೆ 130ರಿಂದ 160 ಕಿಮೀ ವೇಗದಲ್ಲಿ ಸಂಚರಿಸುವ ಸ್ವದೇಶಿ ನಿರ್ಮಿತ ವಂದೇ ಭಾರತ ರೈಲು ಪರಿಚಯಿಸಿತು. ಯಾರೆಲ್ಲ ವಂದೇ ಮಾತರಂ ಹೇಳಲು ಹಿಂಜರಿಯುತ್ತಿದ್ದರೂ ಅವರೆಲ್ಲ ಇಂದು ವೇಗದ ರೈಲು ಬೇಕಾದರೆ ವಂದೇ ಭಾರತ ಎಂದು ಹೇಳಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಭಾರತದ ಆಟಿಕೆ ಮಾರುಕಟ್ಟೆಯ ಅಭಿವೃದ್ಧಿ ಮಾಡಲಾಗಿದೆ. ಮೊಬೈಲ್ ತಯಾರಿಕೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಮೈಲುಗಲ್ಲು ನಿರ್ಮಿಸಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಕೆಲವೇ ವರ್ಷಗಳಲ್ಲಿ ಭಾರತ ನಂ. 1 ಆಗಲಿದ್ದು, ಪ್ರಬುದ್ಧ ಮತದಾರರು ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಣಾಳಿಕೆಗಳನ್ನು ತುಲನೆ ಮಾಡಿ ನೋಡಿ ಮತ ಚಲಾಯಿಸಬೇಕು ಎಂದರು.

ಉದ್ಯಮಿ ಡಾ. ವಿಜಯ ಸಂಕೇಶ್ವರ ಮಾತನಾಡಿ, ಮೋದಿ ಅವರ ಕಾಲಘಟ್ಟದಲ್ಲಿ ಜೋಶಿ ಅವರು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಹೊಸ ಯೋಜನೆಗಳನ್ನು ಈ ಭಾಗಕ್ಕೆ ತಂದಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಹಲವರು ಅಪಸ್ವರ ಎತ್ತುವುದು ಸಹಜ. ಜಾತಿ ಆಧಾರಿತ ವೋಟ್ ಬ್ಯಾಂಕ್ ಇರುವುದು ಕಾಂಗ್ರೆಸ್ ನಲ್ಲಿ ಮಾತ್ರ. ಬಿಜೆಪಿಯಲ್ಲಿಲ್ಲ ಎಂದರು.

ಮೋದಿ ಅವರು ಅಭಿವೃದ್ಧಿಯೊಂದಿಗೆ ಮಾನವೀಯತೆಗೂ ಹೆಚ್ಚು ಒತ್ತು ಕೊಟ್ಟಿದ್ದಾರೆ. ಮೋದಿ ಅವರಿಂದ ಕಾಂಗ್ರೆಸ್ ಭ್ರಮನಿರಸರಾಗಿದ್ದಾರೆ. ಅದಕ್ಕೆ ಅವರ ಪ್ರಣಾಳಿಕೆಯೇ ಸಾಕ್ಷಿ. ಕಾಂಗ್ರೆಸ್ ನವರು ಚೊಂಬಿನ ಬಗ್ಗೆ ಮಾತನಾಡುತ್ತಾರೆ. ಆ ಚೊಂಬು ಎಲ್ಲಿಂದ ಬಂತು ಎಂಬುದನ್ನು ಅರಿತುಕೊಳ್ಳಬೇಕು. ಆರ್ಥಿಕವಾಗಿ ದೇಶವನ್ನು ದಿವಾಳಿ ಮಾಡಿ ಚೊಂಬು ಕೊಟ್ಟವರು ಕಾಂಗ್ರೆಸ್ ನವರು. ಬಿಜೆಪಿಗೆ ಪೂರ್ಣ ಬಹುಮತ ಸಿಕ್ಕಲ್ಲಿ ಅನೇಕ ಕಾನೂನುಗಳನ್ನು ಬದಲಾವಣೆ ಮಾಡಲು ಸಾಧ್ಯವಾಗುತ್ತದೆ. ಹಗರಣ ಮುಕ್ತ ಸರ್ಕಾರ ನೀಡಿದ್ದರಿಂದ ಇಷ್ಟೊಂದು ಅಭಿವೃದ್ಧಿ ಸಾಧ್ಯವಾಗಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಎಲ್ಲರಿಗೂ ಮತದಾನ ಮಾಡುವಂತೆ ಪ್ರೇರೆಪಿಸಬೇಕು. ಮೊಬೈಲ್ ಬಳಕೆ ಮಾಡಿ ಮತ ಚಲಾಯಿಸಿ ಎಂದು ಪ್ರಚಾರ ಮಾಡಿ ಮೋದಿ ಕೈ ಬಲಪಡಿಸಬೇಕು. ಹೆಚ್ಚಿನ ಮತದಾನವಾದಲ್ಲಿ ಬಿಜೆಪಿಗೆ ಸಹಕಾರಿ ಎಂಬುದನ್ನು ಅರಿತು ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ಶಂಕರಣ್ಣ ಮುನವಳ್ಳಿ, ಮಹಾದೇವ ಕರಮರಿ, ವಿನಯ ಜವಳಿ, ಡಾ. ವಿ.ಎಸ್.ವಿ. ಪ್ರಸಾದ, ಜಿತೇಂದ್ರ ಮಜೇಥಿಯಾ, ಅಶೋಕ ಶೆಟ್ಟರ್ ಸೇರಿದಂತೆ ಹಲವರಿದ್ದರು.