ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಬಾಲಕಾರ್ಮಿಕತೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಅನುಷ್ಠಾನ ಮಾಡಲು ನೇಮಕಗೊಂಡಿರುವ ಇಲಾಖೆಗಳು ಬಾಲಕಾರ್ಮಿಕರನ್ನು ರಕ್ಷಣೆ ಮಾಡುವ ದಾಳಿಗಳಿಗೆ ತಮ್ಮ ಇಲಾಖೆಯ ವಾಹನಗಳನ್ನು ಬಳಸಿಕೊಳ್ಳಬಹುದು ಹಾಗೂ ಪೊಲೀಸ್ ರಕ್ಷಣೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಮತ್ತು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಾಲಕಾರ್ಮಿಕರ ಪತ್ತೆ ಕಾರ್ಯಜಿಲ್ಲೆಯಲ್ಲಿ ಬಾಲಕಾರ್ಮಿಕರು ಹಾಗೂ ಕಿಶೋರಕಾರ್ಮಿಕರ ಪತ್ತೆ ಹಾಗೂ ಪುನರ್ವಸತಿ ಕಾರ್ಯವು ನಿರಂತರವಾಗಿ ನಡೆಯುತ್ತಿದ್ದು, 2024ರ ಏಪ್ರಿಲ್ ಒಂದ ರಿಂದ 2025ರ ಮಾರ್ಚ್ 31 ರವರೆಗೆ ಜಿಲ್ಲೆಯಾದ್ಯಂತ ಹಲವು ತಪಾಸಣೆಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ 39 ಮಕ್ಕಳನ್ನು ಪತ್ತೆ ಹಚ್ಚಲಾಗಿರುತ್ತದೆ. ಸದರಿ ಮಕ್ಕಳಿಗೆ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸಲಾಗಿರುತ್ತದೆ ಹಾಗೂ ತಪ್ಪಿತಸ್ಥ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು. ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು ಹಾಗೂ ಅದನ್ನು ಪ್ರತಿ ಮಗುವಿಗೆ ದೊರಕಿಸುವುದು ಪ್ರತಿ ನಾಗರಿಕನ ಕರ್ತವ್ಯವಾಗಿರುತ್ತದೆ. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಕೆಲಸ ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ ಅಪರಾಧವಾಗಿರುತ್ತದೆ ಎಂದು ತಿಳಿಸಿದರು. ವಸತಿ ಶಾಲೆ ನಿರ್ಮಾಣ
ಬಾಗೇಪಲ್ಲಿ ತಾಲೂಕಿನಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳ ವಸತಿ ಶಾಲೆ ನಿರ್ಮಾಣಕ್ಕೆ 9 ಎಕರೆ 38 ಗುಂಟೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಈ ವೇಳೆ ಜಿಲ್ಲಾಧಿಕಾರಿಗಳು ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನಾ ಆಂದೋಲನ ಭಿತ್ತಿಪತ್ರಗಳನ್ನು ಹಾಗೂ ಕರಪತ್ರಗಳನ್ನು ಬಿಡುಗಡೆಮಾಡಿದರು.ಈ ಸಂಧರ್ಭದಲ್ಲಿ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಅರ್.ಕೆ ವೆಂಕಟೇಗೌಡ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಮುನಿಕೆಂಪೆಗೌಡ, ರೇಷ್ಮೆ ಇಲಾಖೆ ಉಪನಿರ್ದೇಶಕ ಎಸ್. ಬೋಜಣ್ಣ,ಬಚ್‌ಪನ್ ಬಚಾವೋ ಆಂದೋಲನದ ರಾಜ್ಯ ಸಂಯೋಜಕ ಹಾಗೂ ಇತರ ಅಧಿಕಾರಿಗಳು ಇದ್ದರು.