ಕೊಡಗು ಜಿಲ್ಲೆಯಲ್ಲಿ ಅನೇಕ ಸಣ್ಣ ಭಾಷಿಕ ಸಮಾಜಗಳಿದ್ದು, ಅದರಲ್ಲಿ ಅರೆಭಾಷೆಯು ಸಹ ಪ್ರಮುಖವಾಗಿದೆ. ಆ ದಿಸೆಯಲ್ಲಿ ಸಣ್ಣ ಸಣ್ಣ ಭಾಷೆ ಉಳಿಸಿ ಬೆಳೆಸುವಂತಾಗಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದ್ದಾರೆ.

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಅನೇಕ ಸಣ್ಣ ಭಾಷಿಕ ಸಮಾಜಗಳಿದ್ದು, ಅದರಲ್ಲಿ ಅರೆಭಾಷೆಯು ಸಹ ಪ್ರಮುಖವಾಗಿದೆ. ಆ ದಿಸೆಯಲ್ಲಿ ಸಣ್ಣ ಸಣ್ಣ ಭಾಷೆ ಉಳಿಸಿ ಬೆಳೆಸುವಂತಾಗಬೇಕು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಕರೆ ನೀಡಿದ್ದಾರೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಚೆಂಬು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡಡ್ಕದಲ್ಲಿ ಭಾನುವಾರ ನಡೆದ 3 ನೇ ಅರೆಭಾಷೆ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕನ್ನಡ ಉಪ ಭಾಷೆಯ ಸಂಸ್ಕೃತಿ ಮತ್ತು ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗುವುದು ಹಿಂದಿಗಿಂತಲೂ ಇಂದು ಅತ್ಯಗತ್ಯ ಎಂದರು.ಅರೆಭಾಷೆ ಉಳಿದಲ್ಲಿ ಸಮಾಜ ಉಳಿಯಲು ಸಾಧ್ಯ, ಇದರಿಂದ ಸಾಹಿತ್ಯ ಮತ್ತು ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯ, ಅರೆಭಾಷೆಯಲ್ಲಿ ಬರೆಯುವ ಬರಹಗಾರರಿಗೆ ಹೆಚ್ಚಿನ ಉತ್ತೇಜನ ನೀಡುವಂತಾಗಬೇಕು. ಅರೆಭಾಷೆಯಲ್ಲಿ ಮತ್ತಷ್ಟು ಅಧ್ಯಯನಗಳು ನಡೆಯಬೇಕು ಎಂದು ಹೇಳಿದರು.ಯುನೆಸ್ಕೋ ವರದಿ ಪ್ರಕಾರ ಸಣ್ಣ ಸಣ್ಣ ಭಾಷೆಗಳಿಗೆ ದೊಡ್ಡ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂಬುದು ಕೇಳಿ ಬರುತ್ತಿದೆ ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ದಯಾನಂದ ಕೂಡಕಂಡಿ, ಮಿಲನ ಭರತ್ ಅವರು ಬರೆದಿರುವ ಸಂಶೋಧನಾ ಪುಸ್ತಕ ಹಾಗೂ ಉಮೇಶ್ ಬಿಳಿನೆಲೆ ಅವರು ಬರೆದಿರುವ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿ, ರಾಜ್ಯದಲ್ಲಿ 290 ಭಾಷೆಗಳಿದ್ದು, ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಜನರು 27 ಭಾಷೆಗಳನ್ನು ಮಾತನಾಡುತ್ತಿದ್ದಾರೆ. ಆ ದಿಸೆಯಲ್ಲಿ ಅರೆಭಾಷೆಯನ್ನು ಸಹ ಮೂರನೇ ಭಾಷೆಯಾಗಿ ಅಧ್ಯಯನಕ್ಕೆ ಅವಕಾಶ ಮಾಡಲು ಸರಕಾರ ಚಿಂತಿಸಿದೆ ಎಂದರು.ಇಂಗ್ಲಿಷ್ ಶಿಕ್ಷಣ ಬೇಕೇ ಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಚೀನಾ, ಜರ್ಮನಿ ದೇಶಗಳಲ್ಲೂ ಸಹ ಇಂಗ್ಲಿಷ್ ಭಾಷೆ ಆಕ್ರಮಿಸಿಕೊಂಡಿದೆ. ಮುಂದಿನ ಎಪ್ಪತ್ತು ವರ್ಷಗಳ ನಂತರ ಶೇ. 92 ರಷ್ಟು ಸಣ್ಣ ಭಾಷೆಗಳು ಅಧಃಪತನದತ್ತ ಸಾಗಲಿವೆ ಎಂದರು.ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಮಾತನಾಡಿ, ಅಕಾಡೆಮಿ ವತಿಯಿಂದ ಹಲವು ಸಂಶೋಧನಾ ಪುಸ್ತಕಗಳನ್ನು ಹೊರತರಲಾಗಿದೆ ಎಂದು ಹೇಳಿದರು. ಗಡಿನಾಡ ಉತ್ಸವ, ಗ್ರಾಮ ಉತ್ಸವ, ಗೌರವ ಪ್ರಶಸ್ತಿ, ಹದಿನೈದು ಸಂಶೋಧನಾ ಪ್ರಬಂಧ ಸೇರಿದಂತೆ ನೂರಕ್ಕೂ ಹೆಚ್ಚಿನ ಸಾಹಿತ್ಯ ಪುಸ್ತಕಗಳನ್ನು ಪ್ರಕಟಿಸಲಾಗಿದೆ ಎಂದು ಸದಾನಂದ ಮಾವಜಿ ಅವರು ಮಾಹಿತಿ ನೀಡಿದರು.ಅಕಾಡೆಮಿ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಮಾತನಾಡಿ ಅರೆಭಾಷೆ ಅಕಾಡೆಮಿ ವತಿಯಿಂದ ನಾಟಕ, ಸಣ್ಣಕಥೆ, ಸಾಂಸ್ಕೃತಿಕ ಸಮಾವೇಶ. ಸುದ್ದಿಜೊಂಪೆ ಪ್ರಾಯೋಜಕತ್ವ, ಹಿಂಗಾರ ತ್ರೈಮಾಸಿಕ ಪುಸ್ತಕ ಪ್ರಕಟ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು ಎಂದು ಸ್ಮರಿಸಿದರು.ಹಿಂದಿನ ಸಮ್ಮೇಳನ ಅಧ್ಯಕ್ಷರಾಗಿದ್ದ ಭವಾನಿ ಶಂಕರ ಹೊದ್ದೆಟ್ಟಿ ಅವರು ಮಾತನಾಡಿ, ಅರೆಭಾಷೆಯಲ್ಲಿ ಬರಹಗಾರರು ಮತ್ತಷ್ಟು ಹೆಚ್ಚಾಗಬೇಕು ಎಂದರು.

ಕಾವೇರಿ ಜಲಾನಯನ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ನಿರ್ದೇಶಕರಾದ ಸೂರಜ್ ಹೊಸೂರು ಅವರು ಮಾತನಾಡಿ, ಕನ್ನಡ ಭಾಷೆ ಜೊತೆಗೆ ಸ್ಥಳೀಯ ಅರೆಭಾಷೆಯನ್ನು ಉಳಿಸಿ, ಬೆಳೆಸಬೇಕು ಎಂದರು.ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅನಂತ್ ಎನ್.ಸಿ.ಊರುಬೈಲು ಅವರು ಮಾತನಾಡಿದರು.

ಸಮ್ಮೇಳನಾಧ್ಯಕ್ಷರಾದ ಲೀಲಾ ದಾಮೋದರ ಕುಂದಲ್ಪಾ ಮಾತನಾಡಿ, ತುಳು, ಕೊಂಕಣಿ ಭಾಷೆಗಳಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಲಭಿಸಿದ್ದು, 5 ಲಕ್ಷಕ್ಕೂ ಅಧಿಕ ಜನರು ಮಾತನಾಡುವ ಅರೆಭಾಷೆಗೂ ಆ ಸ್ಥಾನ ದೊರಕಬೇಕು. ಈ ನಿಟ್ಟಿನಲ್ಲಿ ಅರೆಭಾಷಿಕ ಸಮುದಾಯ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನಕ್ಕೆ ಬೇಡಿಕೆ ಇಡಬೇಕು ‘ಅರೆಭಾಷೆ ಸಂಸ್ಕೃತಿ ಗ್ರಾಮ’ ಅರೆಭಾಷಿಕರ ಕನಸಾಗಿದ್ದು, ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಮದೆನಾಡು ಗ್ರಾಮದಲ್ಲಿ ಇದಕ್ಕೆ ಬೇಕಾದ ಜಾಗವೂ ಮಂಜೂರಾಗಿದ್ದು, ನಿರ್ಮಾಣ ಕಾಮಗಾರಿ ಮತ್ತಷ್ಟು ವೇಗ ಪಡೆಯಲಿ. ಇದರಿಂದ ಭಾಷೆಯ ಬೆಳವಣಿಗೆಗೆ ತುಂಬಾ ಸಹಾಯವಾಗಲಿದೆ ಎಂದರು.ಮಡಿಕೇರಿ ಆಕಾಶವಾಣಿಯಲ್ಲಿ ಅರೆಭಾಷೆ ಕಾರ್ಯಕ್ರಮ ಪ್ರಸಾರವಾಗುವ ಮಾದರಿಯಲ್ಲಿ ಮಂಗಳೂರು ಆಕಾಶವಾಣಿಯಲ್ಲಿ ಅರೆಭಾಷೆಯಲ್ಲಿ ಸುದ್ದಿ ಜೊಂಪೆ ಕಾರ್ಯಕ್ರಮ ಪ್ರಸಾರವಾಗುವ ಪ್ರಯತ್ನ ನಡೆಯಬೇಕು ಎಂದರು.