ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
2024-25ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29ರಿಂದ ಆರಂಭವಾಗುತ್ತಿದ್ದು, ಎಲ್ಲ ಮೇಲ್ವಿಚಾರಣಾಧಿಕಾರಿಗಳು ಶೈಕ್ಷಣಿಕ ಬಲವರ್ಧನೆಗೆ ಶ್ರಮಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಕೆ.ನಂದನೂರ ಸೂಚನೆ ನೀಡಿದರು.ಸೋಮವಾರ ನಗರದ ಬಾಲಕೀಯರ ಪ.ಪೂ.ಕಾಲೇಜು (ಪ್ರೌಢಶಾಲಾ ವಿಭಾಗ) ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜಿಲ್ಲೆ ಉತ್ತಮ ಸಾಧನೆ ಮಾಡಿದೆ. ಪರೀಕ್ಷೆ-2ಕ್ಕೆ 6758 ಮಕ್ಕಳು ನೋಂದಣಿ ಮಾಡಿದ್ದು, ಮೇ 29ರಿಂದ ಪರಿಹಾರ ಬೋಧನೆ ಕಾರ್ಯ ನಡೆಯಲಿದೆ. ಎಲ್ಲ ಶಾಲೆಗಳ ಬಲವರ್ಧನೆಗಾಗಿ ಕೆಲಸ ಮಾಡಬೇಕಾಗಿದೆ. ಈಗಾಗಲೇ ರಾಜ್ಯಹಂತದಿಂದ ಬಂದಿರುವ ಪಠ್ಯಪುಸ್ತಕ, ಸಮವಸ್ತ್ರಗಳನ್ನು ಮಕ್ಕಳಿಗೆ ಶಾಲಾ ಪ್ರಾರಂಭದ ದಿನದಂದು ತಲುಪಿಸಬೇಕಾಗಿದೆ ಎಂದರು.ಶಾಲಾ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ ಕೊಡಬೇಕಿದೆ. ಶೌಚಾಲಯ ಸ್ವಚ್ಛತೆ ಇರುವಂತೆ ನೋಡಿಕೊಂಡು ಬಳಕೆ ಮಾಡಬೇಕು. ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷಕ್ಕೆ ವೇಳಾಪಟ್ಟಿ, ಸೇತುಬಂಧ ಕಾರ್ಯಕ್ರಮ, ಶಾಲಾ ಶೈಕ್ಷಣಿಕ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆ ತಯಾರಿಸಿ ಶಾಲೆಯ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು. ಶಾಲಾ ಪ್ರಾರಂಭೋತ್ಸವ, ದಾಖಲಾತಿ ಆಂದೋಲನ ಮಾಡಿ ಅಂಗನವಾಡಿಯಲ್ಲಿನ ಎಲ್ಲ ಮಕ್ಕಳನ್ನು ಸಮೀಪದ ಸರ್ಕಾರಿ ಶಾಲೆಗೆ ದಾಖಲಾತಿ ಮಾಡಬೇಕು ಎಂದು ಸಲಹೆ ನೀಡಿದ ಅವರು ,ಕೋಚಿಂಗ್ ಸೇಂಟರ್, ಟ್ಯೂಶನ್, ಅನಧಿಕೃತ ಶಾಲೆಗಳು ಕಂಡುಬಂದರೆ ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಹೇಳಿದರು.
ವೇದಿಕೆಯ ಮೇಲೆ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಸಿ.ಆರ್. ಓಣಿ, ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಎಚ್.ಜಿ. ಮಿರ್ಜಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ವೈ. ಕುಂದರಗಿ, ಎಂ.ಎಸ್. ಬಡದಾನಿ, ಆರ್.ಎಸ್. ಆದಾಪೂರ, ಜಾಸ್ಮೀನ್ ಕಿಲ್ಲೇದಾರ, ಎಸ್.ಎಂ. ಮುಲ್ಲಾ, ಡಯಟ್ ಹಿರಿಯ ಉಪನ್ಯಾಸಕಿ ಸುಜಾತಾ ಹುನ್ಮೂರ, ಸಾವಿತ್ರಿ ಕೊಂಡಗೂಳಿ ಉಪಸ್ಥಿತರಿದ್ದರು.ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿಗಳು, ಡಯಟ್ ಹಿರಿಯ ಉಪನ್ಯಾಸಕರು, ವಿಷಯ ಪರಿವೀಕ್ಷಕರು, ಸಹಾಯಕ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ದೈಹಿಕ ಶಿಕ್ಷಣ ಪರಿವೀಕ್ಷಕರು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿಗಳು, ಸಮೂಹ ಸಂಪನ್ಮೂಲ ವ್ಯಕ್ತಿಗಳು ತಾಂತ್ರಿಕ ಸಿಬ್ಬಂದಿ ಹಾಜರಿದ್ದರು, ಶಿಕ್ಷಣಾಧಿಕಾರಿ ಎಚ್.ಜಿ. ಮಿರ್ಜಿ ಸ್ವಾಗತಿಸಿದರು. ವಿಷಯ ಪರಿವೀಕ್ಷಕ ಎಂ.ಎ.ಬಾಳಿಕಾಯಿ ನಿರೂಪಿಸಿದರು.