ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನ ಗೆದ್ದು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರತಿಯೊಬ್ಬ ಕಾರ್ಯಕರ್ತನೂ ಈಗಿನಿಂದಲೇ ಸಂಘಟನಾ ಕಾರ್ಯದಲ್ಲಿ ತೊಡಗಬೇಕು. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಸ್ಥಾನ ಗೆದ್ದು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಪ್ರತಿಯೊಬ್ಬ ಕಾರ್ಯಕರ್ತನೂ ಈಗಿನಿಂದಲೇ ಸಂಘಟನಾ ಕಾರ್ಯದಲ್ಲಿ ತೊಡಗಬೇಕು. ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲೂಕಿನ ಚೇಳೂರು ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಸೇವಾ ಸಂಕಲ್ಪ ಅಭಿಯಾನ ಹಾಗೂ ಬೂತ್ ವಿಜಯ ಸಂಕಲ್ಪ ಯಾತ್ರೆಗೆ ನಗರಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಸಾರ್ಥಕ 25 ವರ್ಷಗಳ ಸಾರ್ವಜನಿಕ ಸೇವೆಯ ಯಶಸ್ಸು ಗುರಿತಿಸಿ ಸೇವಾ ಸಂಕಲ್ಪದ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಆರೋಗ್ಯ ಶಿಬಿರ, ಸ್ವಚ್ಛತಾ ಕಾರ್ಯ ಸೇರಿ ವಿವಿಧ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಹಿರಿಯ ನಾಯಕ ಮಲ್ಲಿಕಾರ್ಜುನಯ್ಯ ಅವರ ಕೊಡುಗೆ ಅಪಾರ. ಪಕ್ಷದ ಕಾರ್ಯಕರ್ತರು ಪರಸ್ಪರ ಕಿತ್ತಾಟ ಮಾಡಿಕೊಳ್ಳುವುದರಿಂದ ಮೂರನೇ ವ್ಯಕ್ತಿಗೆ ಲಾಭವಾಗುತ್ತದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.ಒಂದು ಕಾಲದಲ್ಲಿ ಬಿಜೆಪಿ ನಗರ ಪ್ರದೇಶಕ್ಕೆ ಸೀಮಿತವಾದ ಪಕ್ಷ ಎಂದು ಟೀಕಿಸಲಾಗುತ್ತಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಾದ್ಯಂತ ಹಗಲು-ರಾತ್ರಿ ಎನ್ನದೆ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ಪರಿಣಾಮ ಬಿಜೆಪಿ ಇಂದು ರಾಜ್ಯದಾದ್ಯಂತ ಬಲಿಷ್ಠವಾಗಿದೆ. ನಿಷ್ಠಾವಂತ ಕಾರ್ಯಕರ್ತರಿಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಟಿಕೆಟ್ ನೀಡಿ ಬೆಂಬಲಿಸಬೇಕು ಎಂದು ಜಿಲ್ಲಾ ನಾಯಕರಿಗೆ ಸೂಚಿಸಿದರು.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ನಿಗಮಗಳನ್ನು ಸ್ಥಾಪಿಸಲಾಗಿತ್ತು. ಆದರೆ ಅವುಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡದೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ರಾಜ್ಯದ ರೈತರು ಭೀಕರ ಬರಗಾಲದಿಂದ ತತ್ತರಿಸುತ್ತಿದ್ದರೂ ಸರ್ಕಾರ ಪರಿಹಾರ ನೀಡಿಲ್ಲ. ಬಳ್ಳಾರಿ ಚಲೋ ಪಾದಯಾತ್ರೆ ಮೂಲಕ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ‌ ನೀಡಿದೆವು. ರೈತರಿಗೆ ಹೆಕ್ಟೇರ್‌ಗೆ ಕನಿಷ್ಠ 50 ಸಾವಿರ ಹಣ ಕೊಡಬೇಕು ಎಂದು ಮನವಿ ಮಾಡಿದೆವು. ಆದರೆ ಸರ್ಕಾರ ತಲಾ 2500 ರು. ಬರ ಪರಿಹಾರ ಘೋಷಣೆ ಮಾಡಿದ್ದು, ಇನ್ನೂ ಹಣ ಬಂದಿಲ್ಲ ಎಂದು ಆರೋಪಿಸಿದರು.

ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎನ್. ಸುರೇಶ್ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಜಯೇಂದ್ರ ಮನವಿ ಮಾಡಿದರು.ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ಬೂತ್ ಗೆದ್ದರೆ ತಾಲೂಕು ಗೆಲ್ಲಬಹುದು. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರೂ ಸಕ್ರಿಯವಾಗಿ ಸಂಘಟನಾ ಕಾರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದರು.

ವೈ.ಎಚ್. ಹುಚ್ಚಯ್ಯ, ಅಂಬಿಕಾ ಹುಲಿನಾಯಕ್, ಚಂದ್ರಶೇಖರ್ ಬಾಬು ಸೇರಿ ಹಲವರು ಮಾತನಾಡಿದರು. ತಾಲೂಕು ಮಂಡಲ ಅಧ್ಯಕ್ಷ ಬಲರಾಮಣ್ಣ, ಜಿ.ಎಸ್. ಬಸವರಾಜು, ಶಾಸಕ ಜ್ಯೋತಿ ಗಣೇಶ್, ವಿನಯ್ ಬಿದರೆ, ಬ್ಯಾಟರಂಗೇಗೌಡ, ಹುಲಿನಾಯಕ್, ಎನ್.ಸಿ. ಪ್ರಕಾಶ್, ನವ್ಯಬಾಬು, ಯಶೋದಮ್ಮ, ಪಂಚಾಕ್ಷರಿ, ನಂಜೇಗೌಡ, ಭಾರತೀ ಹಿತೇಶ್, ಪ್ರಬಣ್ಣ, ಚಂದ್ರಶೇಖರ್, ರುದ್ರೇಶ್, ಯತೀಶ್ ಸೇರಿದಂತೆ ಸಾವಿರಾರು ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.