ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಏಳು ಚಿನ್ನದ ಪದಕಕ್ಕೆ ಭಾಜನರಾಗಿರುವ ಬಾಗಲಕೋಟೆ ಜಿಲ್ಲೆ ಮುಧೋಳ ಮೂಲದ ಶ್ರೇಯಾ ಶಿ.ಹಂಜಿ ಕೃಷಿಕರ ಜೀವನಮಟ್ಟ ಉತ್ತಮಗೊಳಿಸುವ ನಿಟ್ಟಿನಲ್ಲಿ ತಮ್ಮ ಕೈಲಾದ ಸೇವೆ ಸಲ್ಲಿಸಬೇಕು ಎಂಬ ಗುರಿ ಇದೆ ಎಂದು ಹೇಳಿದ್ದಾರೆ.ಕೃಷಿ ಅರ್ಥಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿರುವ ಇವರು ಕೃಷಿ ವಿವಿಯ ಒಂದು ಚಿನ್ನದ ಪದಕ ಮತ್ತು ದಾನಿಗಳ ಆರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದು, ಗೃಹಿಣಿಯಾಗಿರುವ ತಾಯಿಯವರು ನೀಡಿದ ಬೆಂಬಲದಿಂದಾಗಿ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಸದ್ಯ ಕೃಷಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಅಧ್ಯಯನ ನಡೆಸುತ್ತಿದ್ದೇನೆ. 7 ಪದಕ ಪಡೆದದ್ದು ತುಂಬಾ ಸಂತಸ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೃಷಿ ಸಂಶೋಧಕಿ ಅಥವಾ ಸಹಾಯಕ ಪ್ರಾಧ್ಯಾಪಕಿಯಾದರೂ ಆಗಬೇಕು. ರೈತರ ಸಂಕಷ್ಟ ಪರಿಹರಿಸಬೇಕು ಎಂಬ ಅದಮ್ಯ ಆಸೆಯಿದೆ ಎನ್ನುತ್ತಾರೆ. ಇವರ ಸಹೋದರ ಸಹ ತೋಟಗಾರಿಕಾ ವಿದ್ಯಾರ್ಥಿಯಾಗಿರುವುದು ವಿಶೇಷವಾಗಿದೆ.‘ಪ್ರಭಾವ’ ನೋಡಿ ಅಧಿಕಾರಿಆಗಲು ನಿರ್ಧಾರ: ನಂದಿತಾ
ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ರೈತರ ಮೇಲೆ ಬೀರುವ ಪ್ರಭಾವ ನೋಡಿ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಪಡೆದು ರೈತರಿಗೆ ಉತ್ತಮ ಮಾರ್ಗದರ್ಶನ ನೀಡಲು ನಿರ್ಧರಿಸಿದ್ದೇನೆ ಎಂದು ಬಿಎಸ್ಸಿ ಕೃಷಿ ಪದವಿಯಲ್ಲಿ ಏಳು ಚಿನ್ನದ ಪದಕಕ್ಕೆ ಭಾಜನರಾಗಿರುವ ಎಸ್.ನಂದಿತಾ ಕನಸು ಹಂಚಿಕೊಂಡಿದ್ದಾರೆ.ಗ್ರಾಮೀಣ ಪ್ರದೇಶದ ಕಾರ್ಯಾನುಭವಕ್ಕಾಗಿ ನಾವು ಮೂರು ತಿಂಗಳು ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ವಾಸ್ತವ್ಯ ಹೂಡಿದ್ದೆವು. ಮೂರು ತಿಂಗಳು ರೈತರಿಗೆ ಕೃಷಿ ಬಗ್ಗೆ ಸಾಕಷ್ಟು ಮಾಹಿತಿ ನೀಡಿದರೂ ಅವರು ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಅಲ್ಲಿನ ತಹಶೀಲ್ದಾರರು ಒಮ್ಮೆ ನಾವಿದ್ದಲ್ಲಿಗೆ ಆಗಮಿಸಿ ರೈತರಿಗೆ ಮಾಹಿತಿ ನೀಡಿದಾಗ ಅದನ್ನು ಬಹಳಷ್ಟು ಆಸಕ್ತಿಯಿಂದ ರೈತರು ಆಲಿಸಿದರು. ಇದನ್ನು ಗಮನಿಸಿದ ನಾನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆದು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ನಿರ್ಧರಿಸಿದ್ದೇನೆ ಎಂದರು. ನಂದಿನಿ ಅವರು ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರಿನವರಾಗಿದ್ದಾರೆ. ತಂದೆ ಬಿಎಂಟಿಸಿ ನಿರ್ವಾಹಕರಾಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ.