ಕೆಎಂಸಿ ಆಸ್ಪತ್ರೆ ಮಂಗಳೂರು, ತನ್ನ ಸಮಗ್ರ ಸ್ಟ್ರೋಕ್‌ ಸಿದ್ಧತಾ ಘಟಕದ ಮೂಲಕ ಯುವ ವಯಸ್ಕರಲ್ಲಿ ಹೆಚ್ಚುತ್ತಿರುವ ಪಾರ್ಶ್ವವಾಯುವಿನ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಇಂಟರ್‌ವೆನ್ಷನಲ್ ನ್ಯೂರೋರೇಡಿಯಾಲಜಿ, ಕ್ರಿಟಿಕಲ್ ಕೇರ್, ತುರ್ತು ವೈದ್ಯಕೀಯ ಹಾಗೂ ಪುನರ್ವಸತಿ ತಜ್ಞರನ್ನು ಒಳಗೊಂಡ ತಂಡವು, ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ಸಾರ್ವಜನಿಕರು ಗುರುತಿಸುವುದು ಮತ್ತು ತಕ್ಷಣ ಚಿಕಿತ್ಸೆ ಪಡೆಯುವ ಮಹತ್ವದ ಕುರಿತು ಜಾಗೃತಿ ಮೂಡಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕೆಎಂಸಿ ಆಸ್ಪತ್ರೆ ಮಂಗಳೂರು, ತನ್ನ ಸಮಗ್ರ ಸ್ಟ್ರೋಕ್‌ ಸಿದ್ಧತಾ ಘಟಕದ ಮೂಲಕ ಯುವ ವಯಸ್ಕರಲ್ಲಿ ಹೆಚ್ಚುತ್ತಿರುವ ಪಾರ್ಶ್ವವಾಯುವಿನ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ನರವಿಜ್ಞಾನ, ನರಶಸ್ತ್ರಚಿಕಿತ್ಸೆ, ಇಂಟರ್‌ವೆನ್ಷನಲ್ ನ್ಯೂರೋರೇಡಿಯಾಲಜಿ, ಕ್ರಿಟಿಕಲ್ ಕೇರ್, ತುರ್ತು ವೈದ್ಯಕೀಯ ಹಾಗೂ ಪುನರ್ವಸತಿ ತಜ್ಞರನ್ನು ಒಳಗೊಂಡ ತಂಡವು, ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ಸಾರ್ವಜನಿಕರು ಗುರುತಿಸುವುದು ಮತ್ತು ತಕ್ಷಣ ಚಿಕಿತ್ಸೆ ಪಡೆಯುವ ಮಹತ್ವದ ಕುರಿತು ಜಾಗೃತಿ ಮೂಡಿಸಿದೆ.

ಕೆಎಂಸಿ ಆಸ್ಪತ್ರೆ ಮಂಗಳೂರಿನ ಸ್ಟ್ರೋಕ್‌ ಆರೈಕೆಯ 30 ಸುವರ್ಣ ವರ್ಷಗಳ ಅಂಗವಾಗಿ ಶನಿವಾರ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೆಎಂಸಿ ಆಸ್ಪತ್ರೆ ಮಂಗಳೂರು ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್ ಮಾತನಾಡಿ, ಪಾರ್ಶ್ವವಾಯು ಈಗ ವಯಸ್ಸಾದವರಿಗಷ್ಟೇ ಸೀಮಿತವಾಗಿಲ್ಲ. ಯುವ ವಯಸ್ಕರಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ಆರಂಭಿಕ ಲಕ್ಷಣಗಳನ್ನು ಗುರುತಿಸಿ, ಸುವರ್ಣ ಅವಧಿಯಲ್ಲಿ ಸ್ಟ್ರೋಕ್‌ ಸಿದ್ಧತಾ ಆಸ್ಪತ್ರೆಗೆ ಕರೆದೊಯ್ಯುವುದು ಅತ್ಯಂತ ಮುಖ್ಯ ಎಂದರು. ನರವಿಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಕನ್ಸಲ್ಟೆಂಟ್ಡಾ ಝಡ್.ಕೆ. ಮಿಸ್ರಿ ಮಾತನಾಡಿ, 30-50 ವರ್ಷದವರಲ್ಲಿ ಪಾರ್ಶ್ವವಾಯು ಪ್ರಕರಣಗಳ ಏರಿಕೆ ಕಾಣುತ್ತಿದೆ. ಒತ್ತಡ, ಜಡ ಜೀವನಶೈಲಿ ಮತ್ತು ಕಡಿಮೆ ವಯಸ್ಸಿನಲ್ಲೇ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡ ಪ್ರಮುಖ ಕಾರಣಗಳಾಗಿವೆ ಎಂದರು.

ನರವಿಜ್ಞಾನ ಕನ್ಸಲ್ಟೆಂಟ್‌ ಡಾ. ಶಿವಾನಂದ ಪೈ ಅವರು, ಬಿ.ಇ.ಎಫ್.ಎ.ಎಸ್‌.ಟಿ. ಸೂಚನೆಗಳನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು. ಸಮತೋಲನ ಕಳೆದುಕೊಳ್ಳುವುದು, ದೃಷ್ಟಿ ಬದಲಾವಣೆ, ಮುಖದ ಒಂದು ಭಾಗ ಬಾಗುವುದು, ಕೈಯಲ್ಲಿ ದೌರ್ಬಲ್ಯ ಮತ್ತು ಮಾತು ತೊದಲುವುದು ಪ್ರಮುಖ ಲಕ್ಷಣಗಳು. ಯಾವುದೇ ಹಠಾತ್ ನರಸಂಬಂಧಿ ಲಕ್ಷಣವನ್ನು ತುರ್ತು ಪರಿಸ್ಥಿತಿಯೆಂದು ಪರಿಗಣಿಸಬೇಕು ಎಂದರು.

ಕನ್ಸಲ್ಟೆಂಟ್‌-ನರವಿಜ್ಞಾನ ಡಾ.ರೋಹಿತ್ ಪೈ ಮಾತನಾಡಿ, ಇಸ್ಕೀಮಿಕ್ ಸ್ಟ್ರೋಕ್‌ನಲ್ಲಿ 4.5 ಗಂಟೆಗಳೊಳಗೆ ಇಂಟ್ರಾವೀನಸ್ ಥ್ರಾಂಬೊಲಿಸಿಸ್ ನೀಡುವುದು ಬಹಳ ಮುಖ್ಯ. ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಜೀವನ ಶೈಲಿಯನ್ನು ನಿಯಂತ್ರಿಸುವ ಮೂಲಕ ಮರುಪಾರ್ಶ್ವವಾಯುವನ್ನು ತಡೆಯಬಹುದು ಎಂದರು.

ಕನ್ಸಲ್ಟೆಂಟ್– ಇಂಟರ್‌ವೆನ್ಷನಲ್ ನ್ಯೂರೋರೇಡಿಯಾಲಜಿ ಡಾ.ಕೀರ್ತಿರಾಜ್ ಬಿ. ಮಾತನಾಡಿ, ಅಗತ್ಯವಿರುವ ಆಯ್ದ ಪ್ರಕರಣಗಳಲ್ಲಿ ಮೆಕ್ಯಾನಿಕಲ್ ಥ್ರಾಂಬೆಕ್ಟಮಿ ಮೂಲಕ ರಕ್ತನಾಳದಲ್ಲಿರುವ ದೊಡ್ಡ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಬಹುದು. ಇದರಿಂದ ಕೆಲವು ರೋಗಿಗಳಿಗೆ 24 ಗಂಟೆಗಳವರೆಗಿನ ವಿಸ್ತೃತ ಚಿಕಿತ್ಸಾ ಅವಕಾಶ ದೊರೆಯುತ್ತದೆ ಎಂದರು.

ಕನ್ಸಲ್ಟೆಂಟ್ – ನ್ಯೂರೋಸರ್ಜರಿ ಡಾ.ಮಯೂರ್ ಕಾಮತ್ ಮಾತನಾಡಿ, ತೀವ್ರ ಪಾರ್ಶ್ವವಾಯುವಿನಲ್ಲಿ ಮೆದುಳಿನ ಊತ ಅಥವಾ ರಕ್ತಸ್ರಾವ ಉಂಟಾದಾಗ ತ್ವರಿತ ಶಸ್ತ್ರಚಿಕಿತ್ಸಾ ಚಿಕಿತ್ಸೆ ಜೀವ ಉಳಿಸುವಲ್ಲಿ ನಿರ್ಣಾಯಕವಾಗಬಹುದು ಎಂದರು.

ತುರ್ತು ವೈದ್ಯಕೀಯ ವಿಭಾಗದ ಕ್ಲಸ್ಟರ್ ಮುಖ್ಯಸ್ಥ ಡಾ.ಜೀಧು ರಾಧಾಕೃಷ್ಣನ್ ಮಾತನಾಡಿ, ಕುಂದಾಪುರ, ಸುರತ್ಕಲ್, ಪುತ್ತೂರು, ಕಕ್ಕಿಂಜೆ ಮತ್ತು ಚೇರುವತ್ತೂರು ಸೇರಿದಂತೆ ಐದು ತುರ್ತು ಕೇಂದ್ರಗಳು ಪ್ರಾಥಮಿಕ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆರು ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳ ಮೂಲಕ ರೋಗಿಗಳಿಗೆ ತ್ವರಿತ ಚಿಕಿತ್ಸೆ ಲಭ್ಯವಾಗುವಂತೆ ಮಾಡಲಾಗಿದೆ ಎಂದರು.

ಕನ್ಸಲ್ಟೆಂಟ್-ಕ್ರಿಟಿಕಲ್ ಕೇರ್ ಡಾ.ಜಯೇಶ್ ಕಾಮತ್ ಮಾತನಾಡಿ, ಸ್ಟ್ರೋಕ್ ನಂತರ ನ್ಯೂರೋ-ಐಸಿಯು ಮೇಲ್ವಿಚಾರಣೆ, ಮೆದುಳಿನ ಊತ ನಿಯಂತ್ರಣ ಹಾಗೂ ದೇಹದ ಪ್ರಮುಖ ಕಾರ್ಯಗಳ ಸ್ಥಿರೀಕರಣ ಅತ್ಯಗತ್ಯ ಎಂದರು.

ಫಿಸಿಯೋಥೆರಪಿ ವಿಭಾಗದ ಪ್ರಾಧ್ಯಾಪಕ ಡಾ.ಅಬ್ರಹಾಂ ಜೋಶುವಾ ಮಾತನಾಡಿ, ರೋಗಿಯ ಸ್ಥಿತಿ ಸ್ಥಿರವಾದ 24-48 ಗಂಟೆಗಳೊಳಗೆ ಸೂಕ್ತ ನ್ಯೂರೋ-ರಿಹ್ಯಾಬಿಲಿಟೇಶನ್ ಆರಂಭಿಸುವುದು ಚೇತರಿಕೆಗೆ ಸಹಕಾರಿ ಎಂದರು.

ಕಾರ್ಯಕ್ರಮದ ಬಳಿಕ ಸ್ವಯಂ ಸೇವಕರಿಗಾಗಿ ಪ್ರಥಮ ಪ್ರತಿಕ್ರಿಯೆದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪಾರ್ಶ್ವವಾಯುವಿನ ಲಕ್ಷಣಗಳು, ತಪ್ಪು ಕಲ್ಪನೆಗಳು ಮತ್ತು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲಾಯಿತು.

24x7 ಸ್ಟ್ರೋಕ್ ಆರೈಕೆ ಘಟಕ: 0824 222 2227