ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನೂತನವಾಗಿ ರಚಿತವಾಗಿರುವ ಕಾಲೇಜು ಅಭಿವೃದ್ದಿ ಸಮಿತಿಗಳಿಗೆ ಸರ್ಕಾರದ ಅನುಮೋದನೆ ನೀಡುವಲ್ಲಿನ ವಿಳಂಬ ನೀತಿ ಬಗ್ಗೆ ಶಾಸಕ ಜಿ.ಡಿ. ಹರೀಶ್ ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಗುರುವಾರ ವಿಧಾನಸಭೆಯಲ್ಲಿ ಚುಕ್ಕಿ ಗುರುತಿನ ಪ್ರಶ್ನೆಯ ಮೂಲಕ ಸರ್ಕಾರ ಅನುಸರಿಸುತ್ತಿರುವ ವಿಳಂಬನೀತಿಯನ್ನು ಬಲವಾಗಿ ಖಂಡಿಸಿದರು.ಈ ವೇಳೆ ಮಾತನಾಡಿದ ಅವರು, 20 ತಿಂಗಳ ಹಿಂದೆ ತಾಲೂಕಿನ ವಿವಿಧ ಪದವಿ ಕಾಲೇಜುಗಳಲ್ಲಿ ನೂತನವಾಗಿ ಕಾಲೇಜು ಅಭಿವೃದ್ದಿ ಸಮಿತಿಗಳನ್ನು ರಚಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿತ್ತು. ಆದರೆ ಸರ್ಕಾರದ ಅನುಮೋದನೆ 20 ತಿಂಗಳುಗಳಾದರೂ ದೊರಕಿರಲಿಲ್ಲ. ಸದನದಲ್ಲಿ ರಾಜ್ಯಾದ್ಯಂತ ಪದವಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ನೇಮಕಾಗಿ, ಪ್ರಾಧ್ಯಾಪಕರ ಕೊರತೆ ಕುರಿತು ಇದೀಗ ಚರ್ಚೆ ನಡೆದಿದೆ. ಕಾಲೇಜಿನ ಡಿ ಗ್ರೂಪ್ ನೌಕರರನ್ನು ಸರ್ಕಾರ ನೀಡಿದಿದ್ದ ಪಕ್ಷದಲ್ಲಿ ಸಿಡಿಸಿ ಸಮಿತಿಯೇ ನೇಮಕ ಮಾಡಿಕೊಂಡು ಸಿಡಿಸಿ ಮೂಲಕವೇ ವೇತನ ನೀಡಲಾಗುತ್ತದೆ. ಆದರೆ ಸರ್ಕಾರ ಸಮಿತಿಗೆ ಅನುಮೋದನೆ ನೀಡುತ್ತಿಲ್ಲ. ಡಿ ಗ್ರೂಪ್ ನೌಕರರ ಸಮಸ್ಯೆಯನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು. ಪ್ರಾಂಶುಪಾಲರು ಪಟ್ಟಿ ನೀಡಿದ್ದಾರೆಯೇ ತಿಳಿಸಿ ಸಿಡಿಸಿ ಸಮಿತಿ ರಚನೆಯ ಉದ್ದೇಶವೇನೆಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ತಮ್ಮ ಉತ್ತರದಲ್ಲಿ ನೀಡಿರುವಂತೆ ಕಾಲೇಜು ಕಟ್ಟಡ, ಪೀಠೋಪಕರಣ ಸೌಲಭ್ಯ, ಗ್ರಂಥಾಲಯಸೌಲಭ್ಯ, ಸಂಪನ್ಮೂಲ ಕ್ರೋಢೀಕರಣದ ಉದ್ದೇಶಕ್ಕಾಗಿ ರಚಿಸಲಾಗುವುದೆಂದು ಉನ್ನತ ಶಿಕ್ಷಣ ಸಚಿವರು ತಮ್ಮ ಉತ್ತರದಲ್ಲಿ ನೀಡಿದ್ದಾರೆ. ಸಚಿವರು ನೀಡಿರುವ ಉತ್ತರದಲ್ಲಿ ಸಮಿತಿಗೆ ಇತರೆ ಸದಸ್ಯರನ್ನು ನೇಮಿಸುವ ಸಂದರ್ಭದಲ್ಲಿ ಆಯಾ ಕಾಲೇಜಿನ ಪ್ರಾಂಶುಪಾಲರು ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸದಸ್ಯರನ್ನು ನಿರ್ಣಯಿಸಿದ ಪಟ್ಟಿಯನ್ನು ಪ್ರಾಂಶುಪಾಲರು ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಅನುಸರಿಸಿ ನಂತರ ಕಾಲೇಜು ಶಿಕ್ಷಣ ನಿರ್ದೇಶಕರ ಕಚೇರಿಯ ಆಯುಕ್ತರಿಗೆ ಸಲ್ಲಿಸಿ ಅನುಮೋದನೆ ಪಡೆಯಬೇಕೆಂದು ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿದ್ದಾರೆ. ಸಿಡಿಸಿ ಪ್ರಕ್ರಿಯೆ ನಡೆಸಬಾರದು ಈ ನಡುವೆ 2023ರ ನ. 11 ರಂದು ಜಿಲ್ಲಾ ಉಸ್ತುವಾರಿ ಸಚಿವರು ಕಾಲೇಜಿಗೆ ಪತ್ರ ಬರೆದು ಸಿಡಿಸಿ ಸಮಿತಿ ರಚನೆ ಕುರಿತು ಉಸ್ತುವಾರಿ ಸಚಿವರು ಪರಿಶೀಲನೆ ನಡೆಸುತ್ತಿದ್ದು, ಸಚಿವರ ಅನುಮೋದನೆ ಸಿಗುವವರೆಗೆ ಉದ್ದೇಶಿದ ಸಮಿತಿ ಯಾವುದೇ ಪ್ರಕ್ರಿಯೆಗಳನ್ನು ನಡೆಸಕೂಡದೆಂದು ತಿಳಿಸಿದ್ದಾರೆ. ಹೀಗಾದಾಗ 4 ರಿಂದ 5 ಸಾವಿರ ರು. ಗಳಿಗೆ ಕೆಲಸ ಮಾಡುವ ಡಿ. ಗ್ರೂಪ್ ನೌಕರರ ಪರಿಸ್ಥಿತಿ ಏನಾಗಬೇಡ ಎಂದು ಬೇಸರದಿಂದ ಪ್ರಶ್ನಿಸಿದರು. ಅಲ್ಲದೇ ಮುಂದುವರೆದು ಉಸ್ತುವಾರಿ ಸಚಿವರು ಕಾಲೇಜಿನ ಪ್ರಾಂಶುಪಾಲರು ತಮಗೆ ಯಾವುದೇ ಸದಸ್ಯರನ್ನೊಳಗೊಂಡ ಪಟ್ಟಿ ಸಲ್ಲಿಸಿಲ್ಲ ಎಂದಿದ್ದಾರೆಂದು ತಿಳಿಸಿದರು. ಯಾರಪಟ್ಟಿ ಅನುಮೋದನೆ ಮಾಡಿದ್ದೀರಿ? ಮಧ್ಯೆ ಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, ಇದೀಗ ಸಮಿತಿ ಅನುಮೋದನೆಯಾಗಿದೆಯಲ್ಲ, ಸರಿಯಾಗಿದೆಯೇ ಎಂದು ಪ್ರಶ್ನಿಸಿದಾಗ, ಅದನ್ನು ಸಚಿವರೇ ಹೇಳಬೇಕು. ನಾನು ಇದೀಗ ಸದನದಲ್ಲಿ ಈ ಕುರಿತು ಪ್ರಶ್ನೆ ಕೇಳಿದ ನಂತರ ಕಳೆದ ಮಾ. 7 ರಂದು ಸಮಿತಿ ಅನುಮೋದನೆ ನೀಡಲಾಗಿದೆ. ಮಾರ್ಗದರ್ಶಿ ಸೂತ್ರದಲ್ಲಿರುವಂತೆ ವಿವಿಧ ಕ್ಷೇತ್ರಗಳಿಂದ ಸದಸ್ಯರನ್ನು ನೇಮಕ ಮಾಡಲಾಗಿದೆಯೇ ಎನ್ನುವುದನ್ನು ಜಿಲ್ಲಾ ಉಸ್ತುವಾರಿ ಸಚಿವರು ಗಮನಿಸಿದ್ದಾರೆಯೇ? ಪ್ರಾಂಶುಪಾಲರು ಪಟ್ಟಿ ಸಲ್ಲಿಸಿಲ್ಲ ಎಂದು ಉಸ್ತುವಾರಿ ಸಚಿವರೇ ಹೇಳಿರುವುದು. ಹಾಗಿದ್ದಲ್ಲಿ ಈ ಪಟ್ಟಿ ಎಲ್ಲಿಂದ ಬಂದಿದೆ? ಯಾರ ಪಟ್ಟಿಯನ್ನು ಅನುಮೋದನೆ ಮಾಡಿದ್ದೀರಿ? ಇದನ್ನು ಉನ್ನತ ಶಿಕ್ಷಣ ಸಚಿವರು ಸ್ಪಷ್ಟಪಡಿಸಬೇಕು ಎಂದು ಪಟ್ಟು ಹಿಡಿದರು.ಶಾಸಕ ಹರೀಶ್ ಗೌಡರ ಪ್ರಶ್ನೆಯಿಂದ ತಬ್ಬಿಬ್ಬಾದಂತೆ ಕಂಡು ಬಂದ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್, ಈ ಹಿಂದೆ ಉಸ್ತುವಾರಿ ಸಚಿವರು ಪಟ್ಟಿಯನ್ನು ಕಳುಹಿಸಿ ನಂತರ ಅದನ್ನು ಅನುಮೋದನೆ ಮಾಡುವುದು ಬೇಡ, ನಾನು ಬೇರೆ ಪಟ್ಟಿ ಕಳುಹಿಸುತ್ತೇನೆಂದು ತಿಳಿಸಿದರು. ಅದರಂತೆ ಇದೀಗ ಪಟ್ಟಿಗೆ ಅನುಮೋದನೆ ನೀಡಲಾಗಿದೆ. ಮಾರ್ಗದರ್ಶಿ ಸೂತ್ರಗಳಂತೆ ಸದಸ್ಯರ ನೇಮಕವಾಲ್ಲವೆನ್ನುವುದಾದರೆ ಪರಿಶೀಲಿಸೋಣ. ಎಂದಾಗ, ಹಾಗಲ್ಲ, ಪ್ರಾಂಶುಪಾಲರು ಪಟ್ಟಿ ಸಲ್ಲಿಸಿಲ್ಲವೆಂದು ಉಸ್ತುವಾರಿ ಸಚಿವರೇ ತಿಳಿಸಿದ್ದಾರೆ. ಹಾಗಾದರೆ ಇದೀಗ ಅನುಮೋದನೆಗೊಂಡಿರುವ ಪಟ್ಟಿಯನ್ನು ಉಸ್ತುವಾರಿ ಸಚಿವರ ಗಮನಿಸಿದ್ದಾರಾ? ಯಾರ ಪಟ್ಟಿಯನ್ನು ಅನುಮೋದನೆ ಮಾಡಿದ್ದಾರೆನ್ನುವುದನ್ನು ಸಚಿವರು ಸ್ಪಷ್ಟಪಡಿಸಬೇಕಲ್ಲ ಎಂದು ಒತ್ತಾಯಿಸಿದರು.ಸ್ಪೀಕರ್ ಮಧ್ಯೆ ಪ್ರವೇಶಿಸಿ, ಹಾಗಾದರೆ ಪ್ರಾಂಶುಪಾಲ ನಾನು ಪಟ್ಟಿ ಕೊಟ್ಟಿಲ್ಲ ಎಂದು ಬರೆದುಕೊಡಲಿ ಅಲ್ವಾ ಎಂದಾಗ ಅದನ್ನು ಸಚಿವರು ಸ್ಪಷ್ಟಪಡಿಸಲಿ ಎಂದು ಹರೀಶ್ ಗೌಡರು ಒತ್ತಾಯಿಸಿದಾಗ, ಈ ಕುರಿತು ತನಿಖೆ ನಡೆಸಿ ಮಾಹಿತಿ ನೀಡಿರೆಂದು ಸ್ಪೀಕರ್ ಸೂಚಿಸಿದರು. ಸಚಿವ ಸುಧಾಕರ್, ಈ ಕುರಿತು ಉಸ್ತುವಾರಿ ಸಚಿವರಲ್ಲಿ ಚರ್ಚಿಸಿ ಮಾಹಿತಿ ನೀಡಲಾಗುವುದೆಂದರು. -- ಬಾಕ್ಸ್--
-- ಪ್ರಶ್ನೆ ಕೇಳಿದ್ದೇನೆ--ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಜಿ.ಡಿ. ಹರೀಶ್ ಗೌಡ, ತಾಲೂಕಿನ ವಿವಿಧ ಕಾಲೇಜುಗಳ ಸಿಡಿಸಿ ಸಮಿತಿ ರಚನೆ ಕುರಿತು ಪ್ರಶ್ನೆ ಕೇಳಿದ್ದೇನೆ. ಡಿ ಗ್ರೂಪ್ ನೌಕರರಿಗೆ ಅನ್ಯಾಯವಾಗುವಂತೆ ನಾವ್ಯಾರು ನಡೆದುಕೊಳ್ಳಬಾರದು. ಸರ್ಕಾರದ ಈ ನಡೆ ಎಲ್ಲಿಗೆ ತೆಗೆದುಕೊಂಡು ಹೋಗುತ್ತದೋ ತಿಳಿಯುತ್ತಿಲ್ಲ. ಪ್ರಾಂಶುಪಾಲರು ಪಟ್ಟಿ ಸಲ್ಲಿಸಿಲ್ಲವೆಂದು ತಿಳಿಸಿದ ನಂತರ ಇದೀಗ ಯಾವ ಪಟ್ಟಿಯನ್ನು ಅನುಮೋದಿಸಿದ್ದಾರೆ ಎನ್ನುವುದು ತಿಳಿಯಬೇಕಿದೆ.