ಸಾರಾಂಶ
ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಮಾತನಾಡಿ, ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ಒಳಮೀಸಲಾತಿ ಬಗ್ಗೆ ಯಾವ ಕಾಳಜಿಯೂ ಇಲ್ಲ ಎಂದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದಲ್ಲೆಡೆ ಮಾದಿಗ ಮುನ್ನಡೆ ಸಮಾವೇಶಗಳ ಅಭೂತಪೂರ್ವ ಯಶಸ್ವಿನಿಂದ ಕೆಂಗಟ್ಟಿರುವ ಕಾಂಗ್ರೆಸ್ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶೋಷಿತ ಸಮಾಜಗಳನ್ನು ದಿಕ್ಕು ತಪ್ಪಿಸಲು ಕೇಂದ್ರಕ್ಕೆ ಕಳುಹಿಸಿರುವ ಶಿಫಾರಸ್ಸನ್ನು ಮಾದಿಗ ಸಮಾಜ ಒಕ್ಕೊರಿಲಿನಿಂದ ವಿರೋಧಿಸಲಿದೆ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಮುತ್ತಣ್ಣ ಬೆಣ್ಣೂರ ಹೇಳಿದರು.ನವನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕರಿಗೆ ಒಳಮೀಸಲಾತಿ ಬಗ್ಗೆ ಯಾವ ಕಾಳಜಿಯೂ ಇಲ್ಲ. ದಲಿತರನ್ನು ಮತ ಬ್ಯಾಂಕಾಗಿ ಬಳಸಿಕೊಂಡು ಕೊನೆಗೆ ಉಂಡೆನಾಮೆ ಹಾಕುವ ಕಪಟನೀತಿ ಇಂದು ಬಯಲಿಗೆ ಬಂದಿದೆ. ಅಪ್ರಸುತ್ತವಾಗಿರುವ 341ನೇ ವಿಧಿಯ ತಿದ್ದುಪಡಿ ಗಮ್ಮವನ್ನು ತೋರಿಸಿ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಮೋಸ ಮಾಡಿದೆ ಎಂದು ಹೇಳಿದರು.
2020ರ ಆಗಸ್ಟ್ 27ರಂದು ಸುಪ್ರೀಂಕೋರ್ಟ್ ನ್ಯಾ.ಮಿಶ್ರಾ ನೇತೃತ್ವದ ಪಂಚಪೀಠ ಮೀಸಲಾತಿ ವರ್ಗೀಕರಣ ವಿಷಯದಲ್ಲಿ 341ನೇ ವಿಧಿ ತಿದ್ದುಪಡಿ ಅಗತ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದೆ. ಈ ಐತಿಹಾಸಿಕ ತೀರ್ಪು ಸುಪ್ರೀಂಕೋರ್ಟ್ 7 ಸದಸ್ಯರ ಪೀಠದ ಮುಂದೆ ವಿಚಾರಣೆ ಬಂದಿರುವಾಗ ವಕೀಲ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಅಗ್ಗದ ನಿರ್ಣಯ ಕೈಗೊಂಡು ನಗೆಪಾಟಲಿಗೆ ಈಡಾಗಿದ್ದಾರೆಂದು ಹೇಳಿದರು.ಕಾಂಗ್ರೆಸ್ಸಿಗರ ಡೊಂಬರಾಟಕ್ಕೆ ಕುಣಿಯುವರಯ ಯಾರೂ ಇಲ್ಲ. ಸುಮ್ಮನೆ ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಈ ಗೊಂದಲ ಇಲ್ಲಿಗೆ ನಿಲ್ಲಿಸದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟ ಪ್ರಾರಂಬಿಸಬೇಕಾಗುತ್ತೆದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಚಂದ್ರಗಿರಿ, ಸುನಿಲ ಕೆಂಭೊಗಿ, ಸಿದ್ದು ಮಾದರ, ಕಾಂತಿಚಂದ್ರ ಜ್ಯೋತಿ, ಹಣಮಂತ ಮುತ್ತಲದಿನ್ನಿ ಸೇರಿದಂತೆ ಇತರರು ಇದ್ದರು.