ಸಾರಾಂಶ
ಬಾರ್ ಬಾಗಿಲು ತೆರೆಯುವುದೇ ಬೇಡ ಎಂದು ಸಿ.ಕೆ.ಪಾಳ್ಯದ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ಗಂಡ, ಮಕ್ಕಳು ದುಡಿದ ಹಣವನ್ನೆಲ್ಲ ಮದ್ಯ ಸೇವನೆಗಾಗಿ ಬಾರ್‌ಗೆ ಸುರಿಯುತ್ತಿದ್ದಾರೆ. ಹೆಂಡತಿ, ಮಕ್ಕಳು, ಅಕ್ಕ ತಂಗಿಯರು ಬೀದಿ ಪಾಲಾಗುತ್ತಿದ್ದಾರೆ. ಊರಲ್ಲಿ ಕುಡುಕರ ಹಾವಳಿ ಹೆಚ್ಚಾಗಲಿದೆ. ಹೀಗಾಗಿ ನಮ್ಮೂರಿನಲ್ಲಿ ಬಾರ್ ಬಾಗಿಲು ತೆರೆಯುವುದೇ ಬೇಡ ಎಂದು ಸಿ.ಕೆ.ಪಾಳ್ಯದ ನೂರಾರು ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೇರುಘಟ್ಟದ ಸಿ.ಕೆ.ಪಾಳ್ಯದ ಮಹಿಳೆಯರು ಒಂದೆಡೆ ಜಮಾಯಿಸಿ ಮದ್ಯದಂಗಡಿ ವಿರೋಧಿಸಿ ಬಾರ್ ಬೇಡವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಡ ಕೂಲಿ ಕಾರ್ಮಿಕರೇ ವಾಸವಿರೋ ಗ್ರಾಮದಲ್ಲಿ ಬಾರ್ ಮುಚ್ಚಿಸುವಂತೆ ಆಗ್ರಹಿಸಿದರು.
ಸುತ್ತಮುತ್ತಲು ಶಾಲೆಗಳು, ದೇವಸ್ಥಾನಗಳಿವೆ. ಕೃಷಿ ಭೂಮಿಯ ಹಸಿರು ವಲಯದಲ್ಲಿ ಅನಧಿಕೃತ ಬಾರ್ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಸಿಎಲ್-7 ವಸತಿ ಗೃಹ ನಿರ್ಮಾಣ ಮಾಡಲು ಕಟ್ಟಡ ನಿರ್ಮಾಣ ಮಾಡಿ ಸಿಎಲ್-2 ವೈನ್ಸ್ ಸ್ಟೋರ್, ಸಿಎಲ್-9 ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲಾಗುತ್ತಿದೆ ಎಂದು ಕಿಡಿಕಾರಿದರು.ತಹಸೀಲ್ದಾರ್ ಸೂಚನೆ ಮೇರೆಗೆ ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗರ ಜೊತೆಗೆ ಸ್ಥಳಕ್ಕೆ ದೌಡಾಯಿಸಿದ ಉಪತಹಸೀಲ್ದಾರ್ ಚಂದ್ರಶೇಖರ್ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದರು. ಗ್ರಾಮದ ಪ್ರತಿಯೊಬ್ಬರಿಂದಲೂ ಮಾಹಿತಿ ಪಡೆಯಲಾಗಿದೆ. ಬಾರ್ ತೆರೆಯುವುದರ ಅನಾಹುತವನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಅಬಕಾರಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.