ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಹುಬ್ಬಳ್ಳಿ–ಧಾರವಾಡ ಕೈಗಾರಿಕೆಗಳಿಗೆ ಹಿಡಕಲ್ ನೀರು ಪೂರೈಸುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಈ ಯೋಜನೆಯನ್ನು ಕೈಬಿಡುವಂತೆ ಬೆಳಗಾವಿಯ ನಮ್ಮ ನೀರು- ನಮ್ಮ ಹಕ್ಕು ಹೋರಾಟದ ಸಮಿತಿ ಒಕ್ಕೊರಲಿನಿಂದ ಆಗ್ರಹಿಸಿದೆ.ನಗರದ ಮಾರುತಿ ಗಲ್ಲಿಯ ಮಾರುತಿ ಮಂದಿರದಲ್ಲಿ ಗುರುವಾರ ನಡೆದ ನಮ್ಮ ನೀರು-ನಮ್ಮ ಹಕ್ಕು ಹೋರಾಟದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಬೆಳಗಾವಿ ಜಿಲ್ಲಾಧಿಕಾರಿ ಗಮನಕ್ಕೆ ತರದೆ, ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗಳಿಗೆ ನೀರು ಕೊಡಲು ಮುಂದಾಗಿರುವುದು ಸರಿಯಲ್ಲ. ಸರ್ಕಾರ ತಕ್ಷಣವೇ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಪ್ರತಿವರ್ಷ ಬೇಸಿಗೆಯಲ್ಲಿ ಬೆಳಗಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತದೆ. ನೀರಿಗಾಗಿ ಜನರು ಹಾಹಾಕಾರ ಪಡುತ್ತಾರೆ. ಕುಡಿಯುವ ಉದ್ದೇಶದ ಜತೆಗೆ, ಕೃಷಿ ಚಟುವಟಿಕೆಗಾಗಿಯೂ ನೀರು ಬೇಕಾಗುತ್ತದೆ. ಆದರೆ, ಹಿಡಕಲ್ ಜಲಾಶಯದ ನೀರನ್ನು ಕೈಗಾರಿಕೆಗಳಿಗಾಗಿ ಅನ್ಯ ಜಿಲ್ಲೆಗೆ ಪೂರೈಸುವುದಾದರೆ, ಬೆಳಗಾವಿಗರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.ಕೈಗಾರಿಕೆಗೆ ನೀರು ಒದಗಿಸುವ ಯೋಜನೆಯ ಕಾಮಗಾರಿ ಆರಂಭವಾಗಿ, ಮುಕ್ತಾಯದ ಹಂತ ತಲುಪಿದೆ. ಪಕ್ಷ, ಜಾತಿ ಮತ್ತು ಭಾಷೆ ಮರೆತು, ಬೆಳಗಾವಿಯ ಎಲ್ಲ ನಾಗರಿಕರು ಒಗ್ಗಟ್ಟಿನಿಂದ ಹೋರಾಡಿದರೆ ಯೋಜನೆ ತಡೆಯಬಹುದು. ಹಾಗಾಗಿ ಎಲ್ಲರೂ ಒಂದಾಗಿ ಹೋರಾಡೋಣ. ಕೈಗಾರಿಕೆಗಳಿಗೆ ನೀರು ಒದಗಿಸುವುದನ್ನು ತಡೆಯೋಣ ಎಂದರು.
ಜನರ ಹಿತ ಕಾಯಲು ಸರ್ಕಾರ ಇದೆಯೇ ಹೊರತು, ಇಂಥ ಜನವಿರೋಧಿ ಯೋಜನೆ ಜಾರಿಗೊಳಿಸಲು ಅಲ್ಲ. ಹಾಗಾಗಿ ತಕ್ಷಣವೇ ಯೋಜನೆಯ ಕಾಮಗಾರಿ ಸ್ಥಗಿತಗೊಳಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.ಮಾಜಿ ಶಾಸಕ ರಮೇಶ ಕುಡಚಿ ಮಾತನಾಡಿ, ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಮಂಜೂರಾತಿ ಕೊಟ್ಟಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಹಾಗಾದರೆ ಟೆಂಡರ್ ಪ್ರಕ್ರಿಯೆ ಅಂತಿಮವಾಗಿ ಕಾಮಗಾರಿ ಆರಂಭವಾಗಿದ್ದು ಹೇಗೆ? ನಮ್ಮ ಜಿಲ್ಲೆಯ ಸಚಿವರಿಗೆ ಇದು ಗಮನಕ್ಕೆ ಬರಲಿಲ್ಲವೇ ಎಂದು ಪ್ರಶ್ನಿಸಿದರು.
ಜನರ ಹಿತ ಮರೆತು, ಹಿಡಕಲ್ ಜಲಾಶಯದ ನೀರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲ ನಾಯಕರು ಪಕ್ಷಾತೀತವಾಗಿ ಇದರ ವಿರುದ್ಧ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.ಪರಿಸರವಾದಿ ದಿಲೀಪ್ ಕಾಮತ ಮಾತನಾಡಿ, ನೆಲ, ಜಲದ ವಿಚಾರವಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಮಧ್ಯೆ ವಿವಾದ ನಡೆಯುತ್ತಲೇ ಇವೆ. ಈಗ ಬೆಳಗಾವಿ-ಧಾರವಾಡ ಮಧ್ಯೆ ಜಗಳ ಹಚ್ಚುವ ಕೆಲಸ ನಡೆದಿದೆ. ರಾಜಕಾರಣಿಗಳು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಇಂಥ ಯೋಜನೆ ರೂಪಿಸುತ್ತಾರೆ. ಹಾಗಾಗಿ ಒಗ್ಗಟ್ಟಿನಿಂದ ಸರ್ಕಾರದ ವಿರುದ್ಧ ನಾವೆಲ್ಲರೂ ಹೋರಾಟ ಮುಂದುವರಿಸೋಣ ಎಂದರು.
ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರದೆಯೇ ಈ ಯೋಜನೆ ಕೈಗೆತ್ತಿಕೊಂಡಿದ್ದು ಸರಿಯಲ್ಲ. ಬೇಕಿದ್ದರೆ ಸಚಿವ ಎಂ.ಬಿ. ಪಾಟೀಲ ಅವರು ಹಿಪ್ಪರಗಿ ಬ್ಯಾರೇಜ್‌ನಿಂದ ಹುಬ್ಬಳ್ಳಿ-ಧಾರವಾಡದ ಕೈಗಾರಿಕೆಗೆ ನೀರು ಕೊಡಲಿ. ಆದರೆ, ಹಿಡಕಲ್ ಜಲಾಶಯದಿಂದ ಬೇಡ ಎಂದು ಆಗ್ರಹಿಸಿದರು.ಮಾಜಿ ಸಚಿವ ಶಶಿಕಾಂತ ನಾಯಿಕ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪರಿಶಿಷ್ಟ ಹೋರಾಟಗಾರ ಮಲ್ಲೇಶ ಚೌಗಲೆ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಸಾಜೀದ್ ಶೇಖ್, ಮೊಹಮ್ಮದ್ ಜಹಾಂಗೀರ್ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.