ಮಹದಾಯಿ ನೀರಾವರಿ ಯೋಜನೆಗೆ ತೀವ್ರ ವಿರೋಧ

| Published : May 28 2025, 12:41 AM IST

ಸಾರಾಂಶ

ಮಹದಾಯಿ, ಕಳಸಾಬಂಡೂರಿ ನೀರಾವರಿ ಯೋಜನೆ ಅನುಷ್ಠಾನವಾದರೆ ಸಾವಿರಾರು ಹೆಕ್ಟರ್ ಪ್ರದೇಶದ ಅರಣ್ಯ ನಾಶವಾಗುತ್ತದೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹದಾಯಿ ನೀರಾವರಿ ಯೋಜನೆಯು ಖಾನಾಪುರ ತಾಲೂಕಿನ ಪಶ್ಚಿಮಘಟ್ಟದ ಪರಿಸರಕ್ಕೆ ಮಾರಕವಾಗಿದೆ. ಪಶ್ಚಿಮಘಟ್ಟ ಪ್ರದೇಶ ಉಳಿವಿಗೆ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ ಎಂದು ಪರಿಸರವಾದಿ ಕ್ಯಾಪ್ಟನ್‌ ನಿತೀನ ದೋಂಡ ಕರೆ ನೀಡಿದರು.

ನಗರದ ಮರಾಠ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ನಮ್ಮ ನೀರು ನಮ್ಮ ಹಕ್ಕು ಹೋರಾಟದ ಸಭೆಯಲ್ಲಿ ಅವರು ಮಾತನಾಡಿದರು.

1500 ಕಿ.ಮೀ.ವರೆಗೆ ಮಲಪ್ರಭಾ ನದಿ ಹರಿಯುತ್ತದೆ. ಅಘನಾಶಿ, ಕಳಸಾ ಬಂಡೂರಿ, ಮಹದಾಯಿ ನದಿ ನೀರು ನಿರಂತರವಾಗಿ ಹರಿದು ಸಮುದ್ರ ಸೇರುತ್ತದೆ. ಇದು ಸಹಜ ಪ್ರತಿಕ್ರಿಯೆ ಆಗಿದೆ. ಇದರಿಂದಾಗಿ ಯಾವುದೇ ಹಾನಿಯಾಗಲ್ಲ. ಆದರೆ ಮಹದಾಯಿ, ಕಳಸಾಬಂಡೂರಿ ನೀರಾವರಿ ಯೋಜನೆ ಅನುಷ್ಠಾನವಾದರೆ ಸಾವಿರಾರು ಹೆಕ್ಟರ್ ಪ್ರದೇಶದ ಅರಣ್ಯ ನಾಶವಾಗುತ್ತದೆ. ಇದು ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದರು.

ಪರಿಸರವಾದಿ ದಿಲೀಪ ಕಾಮತ ಮಾತನಾಡಿ, ಮಹದಾಯಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಖಾನಾಪುರ ತಾಲೂಕಿನ ಪಶ್ಚಿಮಘಟ್ಟ ಪ್ರದೇಶದಲ್ಲಿನ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿನ ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಪರಿಸರಕ್ಕೆ ಮಾರಕವಾಗಿದೆ. ಹಾಗಾಗೀ, ಯಾವುದೇ ಕಾರಣಕ್ಕೂ ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಬಾರದು. ಪಶ್ಚಿಮಘಟ್ಟ ಪ್ರದೇಶದ ಉಳಿವಿಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಡಬೇಕಿದೆ. ಖಾನಾಪುರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅಪರೂಪದ ಸಸ್ಯಜೀವಿ, ವನ್ಯಜೀವಿಗಳಿವೆ. ಸೂಕ್ಷ್ಮ, ಅತೀಸೂಕ್ಷ್ಮ ಪ್ರದೇಶವನ್ನು ಒಳಗೊಂಡಿರುತ್ತದೆ. ಹಾಗಾಗಿ, ಯಾವುದೇ ಕಾರಣಕ್ಕೂ ಮಹದಾಯಿ ಯೋಜನೆಯನ್ನು ಅನುಷ್ಠಾನಗೊಳಿಸಬಾರದು ಎಂದರು.

ಹಿಡಕಲ್‌ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆಗೆ ಮತ್ತೆ ಚಾಲನೆ ನೀಡಲಾಗಿದೆ. ಈ ಯೋಜನೆಗೆ ತಡೆಹಾಕಬೇಕು. ಈ ಮೂಲಕ ಬೆಳಗಾವಿ ಜಿಲ್ಲೆಗೆ ಅನ್ಯಾಯಮಾಡಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು.

ಜೂ.3ರಂದು ಬೃಹತ್‌ ರ್‍ಯಾಲಿ:

ಮಹದಾಯಿ ಯೋಜನೆ ಹಾಗೂ ಹಿಡಕಲ್‌ ಜಲಾಶಯದಿಂದ ಧಾರವಾಡಕ್ಕೆ ನೀರು ಪೂರೈಕೆ ಮಾಡುವ ಯೋಜನೆ ಕೈಬಿಡುವಂತೆ ಆಗ್ರಹಿಸಿ ಪರಿಸರವಾದಿಗಳು, ಸಾಮಾಜಿಕ ಕಾರ್ಯಕರ್ತರು, ರೈತ ಮುಖಂಡರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಜೂ.3ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಂದು ಬೆಳಗ್ಗೆ 10 ಗಂಟೆಗೆ ನಗರದ ಸರ್ದಾರ್ಸ್ ಕಾಲೇಜು ಮೈದಾನದಿಂದ ಚನ್ನಮ್ಮ ವೃತ್ತದ ಮೂಲಕ ಬೃಹತ್‌ ಮೆರವಣಿಗೆ ಮೂಲಕ ತೆರಳಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು. ಈ ರ್‍ಯಾಲಿಯಲ್ಲಿ ಗದಗ ಕಪ್ಪತಗುಡ್ಡ ಸ್ವಾಮೀಜಿ, ಸುರೇಶ ಹೆಬ್ಶಿಕರ, ಎಸ್‌.ಆರ್‌. ಹಿರೇಮಠ, ಶಿವಾಜಿ ಕಾಗಿನಕರ ಸೇರಿದಂತೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ರೈತ ಮುಖಂಡ ಸಿದಗೌಡ ಮೋದಗಿ, ನೀತಾ ಪೋತದಾರ, ಮಾಜಿ ಸಚಿವ ಶಶಿಕಾಂತ ನಾಯಕ, ಸಾಮಾಜಿಕ ಕಾರ್ಯಕರ್ತ ಸುಜಿತ ಮುಳಗುಂದ, ಮಲ್ಲೇಶ ಚೌಗಲೆ,ಚುನ್ನಪ್ಪ ಪೂಜಾರಿ, ಲತೀಫ್‌ಖಾನ್‌ ಪಠಾಣ, ಮೊದಲಾದವರು ಉಪಸ್ಥಿತರಿದ್ದರು.