ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

9 ಮತ್ತು 10ನೇ ತರಗತಿಗಳಿಗೆ ಪಾಠ ಬೋಧಿಸಲು ಪಿಯು ಉಪನ್ಯಾಸಕರನ್ನು ನಿಯೋಜಿಸುವ ಉದ್ದೇಶದಿಂದ ಸರ್ಕಾರ ಹೊರಡಿಸಿರುವ ಕರ್ನಾಟಕ ಸಾಮಾನ್ಯ ಸೇವೆಗಳು (ಪಿಯು ಶಿಕ್ಷಣ) (ನೇಮಕಾತಿ) (ತಿದ್ದುಪಡಿ) ಕರಡು ನಿಯಮಗಳು-2026 ಅನ್ನು ಕರ್ನಾಟಕ ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ 10,000ಕ್ಕೂ ಹೆಚ್ಚು ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜು ಉಪನ್ಯಾಸಕರನ್ನು ಪ್ರತಿನಿಧಿಸುವ ಕರ್ನಾಟಕ ರಾಜ್ಯ ಪಿಯು ಕಾಲೇಜು ಉಪನ್ಯಾಸಕರ ಸಂಘ ಹಾಗೂ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ (ಪಿಯು) ಪ್ರಾಂಶುಪಾಲರ ಸಂಘಗಳು ತೀವ್ರವಾಗಿ ಖಂಡಿಸುತ್ತವೆ ಎಂದು ಕರ್ನಾಟಕ ರಾಜ್ಯ ಪಿಯು ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಸಿ.ಶಂಕರಪ್ಪ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಿಯು ಉಪನ್ಯಾಸಕರನ್ನು ನಿಯೋಜಿಸುವ ಈ ಕರಡು ತಿದ್ದುಪಡಿಯು ಶೈಕ್ಷಣಿಕ ಹಿತದೃಷ್ಟಿಯಿಂದಲೂ ಸಮರ್ಥನೀಯವಲ್ಲ, ಆಡಳಿತಾತ್ಮಕವಾಗಿಯೂ ಏಕಪಕ್ಷೀಯವಾಗಿದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ರಾಷ್ಟ್ರೀಯ ಶಾಲಾ ಶಿಕ್ಷಣ ಪಠ್ಯಕ್ರಮ ಚೌಕಟ್ಟು-2023ಗಳ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದು ನಮ್ಮ ಸಂಘಟನೆಗಳು ಸ್ಪಷ್ಟಪಡಿಸಿವೆ ಎಂದರು.

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಸಾವಿರಾರು ಉಪನ್ಯಾಸಕರ ಮೇಲೆ ನೇರ ಪರಿಣಾಮ ಬೀರುವ ಈ ಮಹತ್ವದ ನಿರ್ಧಾರವನ್ನು ಸರ್ಕಾರವು ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿಗಳು, ಪೋಷಕರು, ವಿಶ್ವವಿದ್ಯಾಲಯಗಳು, ಶಿಕ್ಷಣ ತಜ್ಞರು ಹಾಗೂ ಇತರ ಹಿತಾಸಕ್ತ ಪಕ್ಷಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ, ಅಧ್ಯಯನ ಕೈಗೊಳ್ಳದೆ ಏಕಪಕ್ಷೀಯವಾಗಿ ಪ್ರಕಟಿಸಿರುವುದು ಅಸಹನೀಯ ಮತ್ತು ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರದ ಲಕ್ಷಣವಲ್ಲ ಎಂದು ಸ್ಪಷ್ಟಪಡಿಸಿವೆ.

ವೈಜ್ಞಾನಿಕ ಅಧ್ಯಯನ, ಶೈಕ್ಷಣಿಕ ಆಧಾರ ಹಾಗೂ ಹಿತಾಸಕ್ತ ಪಕ್ಷಗಳ ಸಮಾಲೋಚನೆ ಇಲ್ಲದೆ ಈ ಕರಡು ಮುಂದಿಡಲಾಗಿದೆ. ಶಿಕ್ಷಣ ವ್ಯವಸ್ಥೆಯ ಮೇಲೆ ನಡೆಸುತ್ತಿರುವ ಆಡಳಿತಾತ್ಮಕ ಪ್ರಯೋಗವೇ ಹೊರತು ಸುಧಾರಣೆ ಅಲ್ಲ. ಪ್ರೌಢಶಿಕ್ಷಣದಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಸರ್ಕಾರ ತಕ್ಷಣವೇ ಶಿಕ್ಷಕರ ನೇರ ನೇಮಕಾತಿ ನಡೆಸಬೇಕು. ಬಡ್ತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಬೇಕು. ಸಂಬಂಧಿತ ವೃಂದದಲ್ಲೇ ಸಮರ್ಪಕ ಸಿಬ್ಬಂದಿ ನಿಯೋಜಿಸಬೇಕು. ವೈಜ್ಞಾನಿಕ ಹಾಗೂ ಸಮಗ್ರ ಮಾನವ ಸಂಪನ್ಮೂಲ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಮತ್ತು ಪಿಯು ಉಪನ್ಯಾಸಕರನ್ನು ಪ್ರೌಢಶಾಲೆಗಳಿಗೆ ನಿಯೋಜನೆ ಕ್ರಮದ ಕರಡು ನಿಯಮಾವಳಿ ವಿರೋಧಿಸಿ ಆರಂಭಿಕವಾಗಿ ಜುಲೈ ಮೊದಲ ವಾರದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ರಾಜ್ಯಮಟ್ಟದ ಧರಣಿ ನಡೆಸಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೊಷ್ಠಿಯಲ್ಲಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎನ್. ಕೃಷ್ಣಪ್ಪ, ಉಪಾಧ್ಯಕ್ಷೆ ರೆಡ್ಡಮ್ಮ, ಪ್ರಧಾನ ಕಾರ್ಯದರ್ಶಿ ಸಿ. ಮಧುಸೂಧನ,ಖಜಾಂಚಿ ಎ. ಕಾಂತರಾಜು, ಪ್ರಧಾನ ಸಂಘಟನಾ ಕಾರ್ಯದರ್ಶಿ ಕೆ.ಎನ್. ಶ್ರೀನಿವಾಸಯ್ಯ, ಕಾರ್ಯದರ್ಶಿ ಕೆ.ವಿ. ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಬಿ.ಕೆ. ರವಿ, ಸಂಚಾಲಕ ಹೆಚ್.ಸಿ. ಮುನಿರಾಜು ಇದ್ದರು.


ಸಿಕೆಬಿ-2 ಸುದ್ದಿಗೊಷ್ಠಿಯಲ್ಲಿ ಡಾ.ಸಿ. ಶಂಕರಪ್ಪ ಮಾತನಾಡಿದರು.