ಸಾರಾಂಶ
ಎಸ್.ಎಂ. ಸೈಯದ್ಗಜೇಂದ್ರಗಡ: ಪಟ್ಟಣದ ತಹಸೀಲ್ದಾರ್ ಕಚೇರಿ ತಾತ್ಕಾಲಿಕ ಸ್ಥಳಾಂತರ ಕುರಿತಂತೆ ಎಪಿಎಂಸಿ ವರ್ತಕರು, ಶ್ರಮಿಕರು, ದಲಿತಪರ ಸಂಘಟನೆ ಸೇರಿ ಸಾರ್ವಜನಿಕ ಸಮೂಹದಿಂದ ವಿರೋಧ ವ್ಯಕ್ತವಾಗಿದ್ದು, ಸ್ಥಳೀಯ ಎಪಿಎಂಸಿಯಲ್ಲಿನ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗೆ ತಹಸೀಲ್ದಾರ್ ಕಾರ್ಯಾಲಯ ಸ್ಥಳಾಂತರವು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿರುವ ತಹಸೀಲ್ದಾರ್ ಕಚೇರಿಯನ್ನು ರೋಣ ರಸ್ತೆಯ ಎಪಿಎಂಸಿ ಆವರಣದಲ್ಲಿನ ಕೃಷಿ ಉತ್ಪನ ಮಾರುಕಟ್ಟೆಗೆ ತಾತ್ಕಾಲಿಕ ಸ್ಥಳಾಂತರ ಕುರಿತಂತೆ ತಹಸೀಲ್ದಾರ್ ಅವರು ಆದೇಶಿಸಿ ಬರೆದಿದ್ದ ಪತ್ರ ವಿರೋಧಿಸಿ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರು ಎಪಿಎಂಸಿ ಶ್ರಮಿಕರು ಹಾಗೂ ವರ್ತಕರ ಜತೆಗೆ ಚರ್ಚಿಸುವ ಬದಲು ಕೈಗೊಂಡಿರುವ ಏಕಪಕ್ಷೀಯ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಗಜೇಂದ್ರಗಡ ಬಂದ್ ಮಾಡುವುದಾಗಿ ಎಪಿಎಂಸಿ ವರ್ತಕರು, ಶ್ರಮಿಕರು ಪ್ರತಿಭಟಿಸಿದ್ದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಸದಾವಾಹನ ಹಾಗೂ ರೈತರಿಂದ ಗಿಜಿಗುಡುತ್ತದೆ. ಅಲ್ಲದೆ ಎಪಿಎಂಸಿ ಎದುರಿನ ಬಯಲು ಜಾಗೆಯಲ್ಲಿನ ತರಕಾರಿ ಮಾರುಕಟ್ಟೆಗೆ ನೂರಾರು ಜನರು ಆಗಮಿಸುವುದರಿಂದ ರೋಣ ರಸ್ತೆ ಜನಜಂಗುಳಿಯಿಂದ ಕೂಡಿರುತ್ತದೆ. ಇಂತಹ ಇಕ್ಕಟ್ಟಿನ ಪ್ರದೇಶದಲ್ಲಿ ತಹಸೀಲ್ದಾರ್ ಕಚೇರಿಯನ್ನು ಎಪಿಎಂಸಿಗೆ ವರ್ಗಾಯಿಸುವುದು ಅವೈಜ್ಞಾನಿಕ. ತಹಸೀಲ್ದಾರ್ ಕಚೇರಿ ಶಿಥಿಲಗೊಂಡಿದೆ, ಪಾರ್ಕಿಂಗ್ ವ್ಯವಸ್ಥೆಯಿಲ್ಲ ಎಂಬ ನೆಪಗಳನ್ನು ಮುಂದು ಮಾಡಿ ಇಲ್ಲಿನ ಕಾಲಕಾಲೇಶ್ವರ ವೃತ್ತದ ಕೂಗಳತೆ ದೂರದಲ್ಲಿ ಮುಖಂಡರೊಬ್ಬರು ಆರಂಭಿಸಲು ಉದ್ಧೇಶಿಸಿರುವ ಬಾರ್ ಆರಂಭಕ್ಕೆ ತಹಸೀಲ್ದಾರ್ ಕಚೇರಿಯನ್ನು ಎಪಿಎಂಸಿ ಆವರಣಕ್ಕೆ ಎತ್ತಂಗಡಿ ಮಾಡಲಾಗುತ್ತಿದೆ ಎಂದು ದಲಿತಪರ ಸಂಘಟನೆಯ ಮುಖಂಡರು ಆರೋಪಿಸಿ ವಿರೋಧ ವ್ಯಕ್ತಪಡಿಸಿದ್ದರು.ಪಟ್ಟಣದ ಜನನಿಬಿಡ ಪ್ರದೇಶವಾಗಿರುವ ಕಾಲಕಾಲೇಶ್ವರ ವೃತ್ತದಲ್ಲಿನ ತಹಸೀಲ್ದಾರ್ ಕಚೇರಿಯು ಶಿಥಿಲಗೊಂಡಿದೆ, ಕಚೇರಿಗೆ ಆಗಮಿಸುವ ಜನರು ಹಾಗೂ ವಾಹನಗಳ ಪಾರ್ಕಿಂಗ್ ಸಮಸ್ಯೆ ಆಗುತ್ತದೆ. ಎಪಿಎಂಸಿ ಆವರಣದಲ್ಲಿನ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗೆ ತಹಸೀಲ್ದಾರ್ ಕಚೇರಿಯನ್ನು ಬಾಡಿಗೆ ರಹಿತವಾಗಿ ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ ಸದರಿ ಕಟ್ಟಡಕ್ಕೆ ತಹಸೀಲ್ದಾರ್ ಕಚೇರಿ ಸ್ಥಳಾಂತರಿಸಲು ಕೋರಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು. ಆದರೆ ತಹಸೀಲ್ದಾರ್ ಅವರು ಆಯ್ಕೆ ಮಾಡಿರವ ಕಟ್ಟಡವು ಸಹ ಸುಸ್ಥಿತಿಯಲ್ಲಿಲ್ಲ ಹಾಗೂ ಇಲ್ಲಿಯೂ ಸಹ ಪಾರ್ಕಿಂಗ್ ಸಮಸ್ಯೆ ಇದೆ ಎಂದು ಎಪಿಎಂಸಿಯಿಂದ ವಿರೋಧ ವ್ಯಕ್ತವಾಗಿತ್ತು. "ಗಜೇಂದ್ರಗಡ ತಹಸೀಲ್ದಾರ್ ಕಚೇರಿ ದುರಸ್ತಿಗೆ ಈಗಾಗಲೇ ಟೆಂಡರ್ ಆಗಿದ್ದು, ೮ರಿಂದ ೯ ತಿಂಗಳ ಒಳಗೆ ದುರಸ್ತಿ ಪೂರ್ಣಗೊಳ್ಳಲಿದೆ. ಅಲ್ಲಿವರೆಗೆ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಅವರು ಸಹಕಾರ ನೀಡಬೇಕು ಎಂದಾಗ ಸ್ಥಳಾಂತರದಿಂದ ಆಗುವ ಅಡಚಣೆ ಕುರಿತ ವಿವರಣೆ ಬಳಿಕ. ಟೆಂಡರ್‌ಗೆ ಬೇರೆ ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಲಾಗುವುದು. ನೀವು ಸ್ಥಳಾಂತರಕ್ಕೆ ಸಹಕಾರ ನೀಡಿ ಎಂದು ಆದೇಶಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕೃಷಿ ಉತ್ಪನ್ನು ಮಾರುಕಟ್ಟೆ ಸಮಿತಿ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ತಹಸೀಲ್ದಾರ್ ಕಚೇರಿ ಎಪಿಎಂಸಿ ಆವರಣದಲ್ಲಿನ ಗಜೇಂದ್ರಗಡ ಎಪಿಎಂಸಿಗೆ ತಾತ್ಕಾಲಿಕ ಸ್ಥಳಾಂತರಿಸುವ ಕುರಿತಂತೆ ಪ್ರಸ್ತಾವನೆ ಕಳುಹಿಸಿದ್ದಾರೆ. ""ಪಟ್ಟಣದ ತಹಸೀಲ್ದಾರ್ ಕಚೇರಿಯು ಎಪಿಎಂಸಿ ಆವರಣದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಕ್ಕೆ ವಿರೋಧಿಸಿ ಸಂಬಂಧಿಸಿದವರಿಗೆ ಮನವಿ ನೀಡಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ. ಎಪಿಎಂಸಿಗೆ ತಹಸೀಲ್ದಾರ್ ಕಚೇರಿ ಸ್ಥಳಾಂತರವಾಗುವುದಿಲ್ಲ ಎಂದು ನಂಬಿದ್ದೇವೆ. ಸ್ಥಳಾಂತರದ ನಿರ್ಧಾರ ಹೊರಬಿದ್ದರೆ ಹೋರಾಟ ಮುಂದುವರೆಸುತ್ತೇವೆ ಎಂದು ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಅಮರೇಶ ಬಳಿಗೇರ ಹೇಳಿದರು. "ತಹಸೀಲ್ದಾರ್ ಕಚೇರಿಯನ್ನು ತಾತ್ಕಾಲಿಕವಾಗಿ ಎಪಿಎಂಸಿಗೆ ಸ್ಥಳಾಂತರಿಸಲು ಶೀತಲಿಕರಣದ ಕಾರಣವನ್ನು ತಹಸೀಲ್ದಾರ್ ನೀಡುತ್ತಿದ್ದಾರೆ. ಸ್ಥಳಾಂತರದಿಂದ ಜನರಿಗೆ ತೊಂದರೆ ಆಗುತ್ತದೆ. ಹೀಗಾಗಿ ವಿರೋಧವಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಮಾಜಿ ಚೇರಮನ್ ಅಶೋಕ ವನ್ನಾಲ ಹೇಳಿದರು. "ಗಜೇಂದ್ರಗಡ ತಹಸೀಲ್ದಾರ್ ಕಚೇರಿಯನ್ನು ರೋಣ ರಸ್ತೆಯ ಎಪಿಎಂಸಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಗೆ ತಾತ್ಕಾಲಿಕವಾಗಿ ವರ್ಗಾಯಿಸಲು ಕುರಿತಂತೆ ಸಾಧಕ-ಬಾಧಕದ ಪ್ರಸ್ತಾವನೆ ಮೇಲಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೊಳೆಆಲೂರು ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಭಾರ ಕಾರ್ಯದರ್ಶಿ ಜೆ. ರಾಘವೇಂದ್ರ ಹೇಳಿದರು.