- ದಾವಣಗೆರೆ ದಕ್ಷಿಣದ ಮತ ಎಣಿಕೆಗೆ ಮುನ್ನ ತೆರೆಯದ ಸ್ಟ್ರಾಂಗ್‌ ರೂಂಗಳ ಡಬಲ್ ಲಾಕರ್ ಬೀಗಗಳು - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ಕ್ಷೇತ್ರದ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಂನಲ್ಲಿದ್ದ ನಾಲ್ಕು ಕೊಠಡಿಗಳ ಪೈಕಿ 2 ಕೊಠಡಿಗಳ ಬೀಗವನ್ನು ತೆಗೆಯುವ ಬದಲು, ಬಾಗಿಲಿಗೆ ಹಾಕಿದ್ದ ಚಿಲಕಗಳನ್ನೇ ಒಡೆದು ತೆಗೆದ ಘಟನೆ ಸೋಮವಾರ ನಡೆಯಿತು.

ನಗರದ ಡಿಆರ್‌ಆರ್ ಶಾಲೆಯ ಮತ ಎಣಿಕಾ ಕೇಂದ್ರದ ನಾಲ್ಕು ಸ್ಟ್ರಾಂಗ್ ರೂಂಗಳ ಬೀಗಗಳನ್ನು ತೆರೆಯಲು ಹರಸಾಹಸ ಮಾಡಿದ ಸಿಬ್ಬಂದಿ ಕಡೆಗೆ ಬೀಗ ತೆಗೆಯುವ ಬದಲಿಗೆ ಚಿಲಕವನ್ನೇ ಸುತ್ತಿಗೆಯಿಂದ ಒಡೆದು ತೆಗೆಯಬೇಕಾದ ಪರಿಸ್ಥಿತಿ ಬಂದಿದ್ದು ಸಾಕಷ್ಟು ಪ್ರಶ್ನೆಗೆ ಆಸ್ಪದ ಮಾಡಿಕೊಟ್ಟಿದೆ.

ಚುನಾವಣಾಧಿಕಾರಿ ಬಳಿ ಇದ್ದ ಕೀಗಳಿಂದ ಸ್ಟ್ರಾಂಗ್‌ ರೂಂಗಳ ಬೀಗಗಳು ತೆಗೆದುಕೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಬಾಗಿಲುಗಳ ಚಿಲಕಗಳನ್ನು ಮುರಿದು, ಸ್ಟ್ರಾಂಗ್ ರೂಂ ಬಾಗಿಲುಗಳನ್ನು ತೆರೆಯಲಾಯಿತು. 4 ಸ್ಟ್ರಾಂಗ್ ರೂಂಗಳ ಪೈಕಿ 2 ಸ್ಟ್ರಾಂಗ್ ರೂಂಗಳ ಬೀಗಗಳನ್ನು ತೆಗೆಯಲಾಗದೇ, ಚಿಲಕಗಳನ್ನು ಮುರಿದು, 2 ಸ್ಟ್ರಾಂಗ್ ರೂಂಗಳ ಬೀಗಗಳನ್ನು ಹಾಗೆಯೇ ತೆಗೆಯಲಾಯಿತು. ಬೀಗ ತೆಗೆಯಲು ಸಿಬ್ಬಂದಿ ಹರಸಾಹಸ ಮಾಡಿದ್ದು ಮಾತ್ರ ಗಮನ ಸೆಳೆಯಿತು.


ಡಬಲ್‌ ಲಾಕರ್ ಕೀ ಇದ್ದ ಹಿನ್ನೆಲೆಯಲ್ಲಿ ಅವುಗಳನ್ನು ತೆಗೆಯಲಾಗಲಿಲ್ಲ. ಬೀಗದ ಕೈಗಳಿದ್ದರೂ ಅವುಗಳನ್ನು ತೆಗೆಯಲಾಗದ್ದರಿಂದ ಬೀಗ ಹಾಕಿದ್ದ ಚಿಲಕಗಳನ್ನೇ ಸುತ್ತಿಗೆಯಿಂದ ಹೊಡೆದು, ಬಾಗಿಲುಗಳನ್ನು ತೆಗೆಯಲಾಯಿತು. ಒಂದಾದ ನಂತರ ಒಂದು ಕೀಗಳನ್ನು ಬಳಸಿದರೂ ಬೀಗ ತೆಗೆದುಕೊಳ್ಳಲಿಲ್ಲ. ಬೀಗ ತೆಗೆಯಲು ಹಾಕಿದ್ದ ಬೀಗದ ಕೈ ಹೊಂದಾಣಿಕೆ ಆಗದ್ದರಿಂದ ಬಾಗಿಲಿಗೆ ಹಾಕಿದ್ದ ಚಿಲಕ ಮುರಿದು, ಸ್ಟ್ರಾಂಗ್ ರೂಂ ಬಾಗಿಲು ತೆಗೆಯುವಂತೆ ಮಾಡಲಾಯಿತು.

ಅನಂತರ ಸ್ಟ್ರಾಂಗ್ ರೂಂನಿಂದ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಶುರುವಾಯಿತು. ಮೊದಲು ಅಂಚೆ ಮತಗಳ ಎಣಿಕೆಯನ್ನು ಆರಂಭಿಸಲಾಯಿತು. ಕ್ಷೇತ್ರದಲ್ಲಿ 217 ಅಂಚೆ ಮತಪತ್ರಗಳು, 10 ಸೇವಾ ಮತಗಳ ಎಣಿಕೆ ನಡೆಯಿತು. ಒಟ್ಟು 227 ಮತಗಳ ಎಣಿಕೆ ಕಾರ್ಯ ಶುರುವಾಯಿತು. ಸ್ಟ್ರಾಂಗ್ ರೂಂ ಬೀಗದ ಕೈಗಳ ಗೊಂದಲದ ಮಧ್ಯೆಯೂ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಬೇಕಾಯಿತು.

ಪ್ರತಿಯೊಂದು ಸ್ಟ್ರಾಂಗ್ ರೂಂಗೂ ಎರಡೆರೆಡು ಅತ್ಯಾಧುನಿಕ ಬೀಗಗಳನ್ನೇ ಹಾಕಲಾಗಿತ್ತು. ಡಬಲ್ ಲಾಕರ್ ಬೀಗಗಳನ್ನು ಸಹ ಅವುಗಳಿಗೆ ಅ‍ಳವಡಿಸಲಾಗಿತ್ತು. ಆದರೆ, ಚುನಾವಣಾಧಿಕಾರಿ ಬಳಿ ಇದ್ದ ಕೀಗಳಿಂದ ಬೀಗಗಳನ್ನು ತೆಗೆಯಲಾಗದ ಹಿನ್ನೆಲೆ ಅನಿವಾರ್ಯವಾಗಿ 2 ಸ್ಟ್ರಾಂಗ್ ರೂಂಗಳ ಬೀಗಗಳನ್ನು ಮುರಿದು, ಬಾಗಿಲುಗಳನ್ನು ತೆಗೆಯಲಾಯಿತು.

- - -

(-ಫೋಟೋ ಇದೆ.)