ಜಿಲ್ಲೆಯ ವಿದ್ಯಾರ್ಥಿ ನಿಲಯಗಳಲ್ಲಿ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಕಟ್ಟಡ ದುರಸ್ತಿ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದೆ. ಅನೇಕ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡಗಳಿಲ್ಲ. ಆದ್ದರಿಂದ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ೪,೫೦೦ಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನಿರಂತರ ಹೋರಾಟ ನಡೆಸಲಿದೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಕೋಲಾರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಶಿಕ್ಷಣದ ವ್ಯಾಪಾರೀಕರಣ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಹಕ್ಕುಗಳ ಉಲ್ಲಂಘನೆ ವಿರುದ್ಧ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನಿರಂತರ ಹೋರಾಟ ನಡೆಸಲಿದೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಕೋಲಾರ ತಿಳಿಸಿದರು.ನಗರದ ಸ್ವಾಭಿಮಾನ ಭವನದಲ್ಲಿ ನಡೆದ ಎಸ್ಎಫ್ಐನ ೧೦ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬಡವರು, ದಲಿತರು, ಹಿಂದುಳಿದವರು, ಕಾರ್ಮಿಕರು ಹಾಗೂ ರೈತರ ಮಕ್ಕಳಿಗೂ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಬೇಕು. ಸಮಾನತೆ, ಸಾಮಾಜಿಕ ನ್ಯಾಯ ಮತ್ತು ವೈಚಾರಿಕತೆಯ ಆಶಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಂಘಟಿಸಿ, ಶಿಕ್ಷಣ ವಿರೋಧಿ ನೀತಿಗಳ ವಿರುದ್ಧ ಹೋರಾಟ ಮುಂದುವರಿಸಲಾಗುವುದು ಎಂದರು.ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿ ನಿಲಯಗಳಲ್ಲಿ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಕಟ್ಟಡ ದುರಸ್ತಿ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿದೆ. ಅನೇಕ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡಗಳಿಲ್ಲ. ಆದ್ದರಿಂದ ಅಗತ್ಯ ಮೂಲಸೌಕರ್ಯ ಕಲ್ಪಿಸಿ, ಹಾಸ್ಟೆಲ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ವಿದ್ಯಾರ್ಥಿಗಳ ಆಹಾರ ಭತ್ಯೆಯನ್ನು ೪,೫೦೦ಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು. ನೀಟ್, ಎನ್ಟಿಎ ಹಾಗೂ ಕೆಪಿಎಸ್ಸಿ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿನ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಕುರಿತು ಪ್ರಸ್ತಾಪಿಸಿದ ಅವರು, ಇಂತಹ ಘಟನೆಗಳು ವಿದ್ಯಾರ್ಥಿ-ಯುವಜನರ ಭವಿಷ್ಯಕ್ಕೆ ಧಕ್ಕೆ ತರುತ್ತವೆ. ಇವುಗಳ ವಿರುದ್ಧ ಎಸ್ಎಫ್ಐ ಹೋರಾಟ ನಡೆಸಲಿದೆ ಎಂದರು.ಸಮ್ಮೇಳನದಲ್ಲಿ ನೂತನ ಜಿಲ್ಲಾ ಸಮಿತಿಯ ಸಂಚಾಲಕರಾಗಿ ಮೇಘ ಆಯ್ಕೆಯಾದರು. ಸಹ ಸಂಚಾಲಕರಾಗಿ ಅಮೂಲ್ಯ, ಹರ್ಷಿತ್ ಹಾಗೂ ರಕ್ಷಿತ್ ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಚೈತ್ರ, ಅಮೂಲ್ಯ, ಲಕ್ಷ್ಮೀ, ವರ್ಷಿತ್, ಪ್ರಜ್ಮಲ್, ಲತಾ ಹಾಗೂ ಮಮತಾ ಆಯ್ಕೆಯಾದರು.ಕಾರ್ಯಕ್ರಮದಲ್ಲಿ ವಿವೇಕ್, ಡಿವೈಎಫ್ಐನ ಪೃಥ್ವಿ ಎಂ.ಜಿ., ಅರವಿಂದ್, ನವೀನ್ ಕುಮಾರ್, ವಿಶ್ವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
===ಫೋಟೋ
೧೦ನೇ ಎಸ್ಎಫ್ಐ ಜಿಲ್ಲಾ ಸಮ್ಮೇಳನದಲ್ಲಿ ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಕೋಲಾರ ಮಾತನಾಡಿದರು.