ಸಾರಾಂಶ
ಕಿನ್ನಿಗೋಳಿಯ ಯುಗಪುರುಷದ ಸಭಾ ಭವನದಲ್ಲಿ ಜರುಗಿದ ನಾಗರಿಕರ ಸಭೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ನಾಗರಿಕರು ಉಗ್ರ ಹೋರಾಟಕ್ಕೆ ನಿರ್ಧರಿಸಿದ್ದಾರೆ.
ಕನ್ನಡಪ್ರಭವಾರ್ತೆ ಮೂಲ್ಕಿ
ಬಜಪೆ ಪ. ಪಂ. ನ ತ್ಯಾಜ್ಯವನ್ನು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ಮಾಡಿ ಡಂಪ್ ಮಾಡುವ ಬಗ್ಗೆ ಕಳೆದ ಕೆಲ ತಿಂಗಳ ಹಿಂದೆ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರಿಕರಿಂದ ಉಗ್ರ ಪ್ರತಿಭಟನೆ ವ್ಯಕ್ತವಾಗಿದೆ. ಈ ಬಗ್ಗೆ ಕಿನ್ನಿಗೋಳಿಯ ಯುಗಪುರುಷದ ಸಭಾ ಭವನದಲ್ಲಿ ಜರುಗಿದ ನಾಗರಿಕರ ಸಭೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ನಾಗರಿಕರು ಉಗ್ರ ಹೋರಾಟಕ್ಕೆ ನಿರ್ಧರಿಸಿದ್ದಾರೆ.ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ನಾಗರಿಕರ ಸಭೆಯಲ್ಲಿ ಸಾಮಾಜಿಕ ಹೋರಾಟಗಾರ ಕಟೀಲು ಸಂಜೀವ ಮಡಿವಾಳ ಮಾತನಾಡಿ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಮತ್ತು ಬಜಪೆ ಪಟ್ಟಣ ಪಂಚಾಯಿತಿ ಹೆಸರಿನಲ್ಲಿ ತ್ಯಾಜ್ಯ ಘಟಕವನ್ನು ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಆದೇಶವನ್ನು ನೀಡಿ ಭೂ ದಾಖಲೆಯನ್ನು ಅಧಿಕೃತವಾಗಿ ತ್ಯಾಜ್ಯ ಘಟಕದ ಹೆಸರಿನಲ್ಲಿ ಮಾಡಲಾಗಿದೆ. ತ್ಯಾಜ್ಯ ಘಟಕವನ್ನು ಸ್ಥಾಪಿಸುವುದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಅವರು ಹೇಳಿದರು.ಸಮಿತಿಯ ಮೊರ್ಗನ್ ವಿಲಿಯಂ ಮಾತನಾಡಿ, ಘಟಕ ನಿರ್ಮಾಣದ ಜಾಗದ ಅಕ್ಕ ಪಕ್ಕದಲ್ಲಿ 500ಕ್ಕೂ ಮಿಕ್ಕಿ ವಸತಿ ಇರುವ ಮನೆಗಳು ಇದ್ದು ಪವಿತ್ರವಾದ ನಂದಿನಿ ನದಿ ಹರಿಯುತ್ತಿದೆ. ಶಿಕ್ಷಣ ಸಂಸ್ಥೆಗಳು ಇದ್ದು ಪರಿಸರಕ್ಕೆ ಇನ್ನಷ್ಟು ಮಾರಕವಾಗಲಿದೆ. ಬಜಪೆ ಭಾಗದಲ್ಲಿ ತ್ಯಾಜ್ಯ ಘಟಕ ಮಾಡಲು ಸಾಕಷ್ಟು ಜಾಗವಿದ್ದರೂ ಕಿನ್ನಿಗೋಳಿ ಭಾಗದಲ್ಲಿ ಘಟಕ ಮಾಡುವ ಬಗ್ಗೆ ದೊಡ್ಡ ಹುನ್ನಾರವಿದೆ ಎಂದರು.
ಹೋರಾಟ ಸಮಿತಿ ಸಭೆಯಲ್ಲಿ ಭುವನಾಭಿರಾಮ ಉಡುಪ, ಕುಶಲ್, ರಾಧಾಕೃಷ್ಣ ನಾಯಕ್, ಸುರೇಶ್ ಭಟ್, ಸತೀಶ್ ಭಟ್, ದಾಮೋದರ ಶೆಟ್ಟಿ, ಲೂವಿಸ್ ಪಿಂಟೋ, ದೇವಿಪ್ರಸಾದ್ ಮತ್ತಿತರು ಇದ್ದರು.