ವಕ್ಫ್‌ ಆಸ್ತಿ ವಿವಾದ ವಿಚಾರವಾಗಿ ಕೈ ವಿರುದ್ಧ ಹೋರಾಟ : ಬಿಜೆಪಿ ಬಣ ರಾಜಕೀಯ ತೀವ್ರ

| Published : Nov 21 2024, 01:01 AM IST / Updated: Nov 21 2024, 11:58 AM IST

ಸಾರಾಂಶ

ವಕ್ಫ್‌ ಆಸ್ತಿ ವಿವಾದ ವಿಚಾರವಾಗಿ ಹೋರಾಟ ನಡೆಸಲು ಮುಂದಾಗಿರುವ ಪ್ರತಿಪಕ್ಷ ಬಿಜೆಪಿಯಲ್ಲಿ ಬಣ ರಾಜಕೀಯ ತೀವ್ರಗೊಂಡಿದೆ.

 ಬೆಂಗಳೂರು : ವಕ್ಫ್‌ ಆಸ್ತಿ ವಿವಾದ ವಿಚಾರವಾಗಿ ಹೋರಾಟ ನಡೆಸಲು ಮುಂದಾಗಿರುವ ಪ್ರತಿಪಕ್ಷ ಬಿಜೆಪಿಯಲ್ಲಿ ಬಣ ರಾಜಕೀಯ ತೀವ್ರಗೊಂಡಿದೆ. ಇದೇ ತಿಂಗಳ 28ರಿಂದ ರಾಜ್ಯಾದ್ಯಂತ ಪ್ರತ್ಯೇಕವಾಗಿ ಜನ ಜಾಗೃತಿ ಅಭಿಯಾನ ನಡೆಸಲು ಮುಂದಾಗಿರುವ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ನೇತೃತ್ವದ ಅತೃಪ್ತ ನಾಯಕರ ತಂಡಕ್ಕೆ ತಿರುಗೇಟು ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿಗರು ಪ್ರತ್ಯೇಕ ಸಭೆ ನಡೆಸುವ ಮೂಲಕ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.

ಬುಧವಾರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ 15ಕ್ಕೂ ಹೆಚ್ಚು ಮಾಜಿ ಶಾಸಕರು ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆಸಿ ಅತೃಪ್ತ ನಾಯಕರು ನಡೆಸಲು ಉದ್ದೇಶಿಸಿರುವ ಅಭಿಯಾನಕ್ಕೆ ವರಿಷ್ಠರು ತಕ್ಷಣವೇ ಮಧ್ಯಪ್ರವೇಶ ಮಾಡಿ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದೆ.

ತಮ್ಮ ಪ್ರತ್ಯೇಕ ಅಭಿಯಾನ ಕೈಬಿಟ್ಟು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಸಾರಥ್ಯದಲ್ಲಿ ನಡೆಸಲು ಉದ್ದೇಶಿಸಿರುವ ‘ನಮ್ಮ ಭೂಮಿ, ನಮ್ಮ ಹಕ್ಕು’ ಹೋರಾಟದಲ್ಲಿ ಭಾಗಿಯಾಗುವಂತೆ ಅತೃಪ್ತ ನಾಯಕರಿಗೆ ಸೂಚಿಸಬೇಕು ಎಂದು ಸಭೆ ವರಿಷ್ಠರಿಗೆ ಮನವಿ ಮಾಡಿದೆ.

ವಿಜಯೇಂದ್ರ ನೇತ್ರತ್ವದಲ್ಲೇ ಅಭಿಯಾನ ನಡೆಯಬೇಕು. ಯಾವುದೇ ಕಾರಣಕ್ಕೂ ಯತ್ನಾಳ್ ಅವರ ಸಾರಥ್ಯಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಬೇಕು ಎಂಬ ತೀರ್ಮಾನವನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಕ್ಷದ ರಾಜ್ಯಾಧ್ಯಕ್ಷರು ಹೋರಾಟ, ಪ್ರತಿಭಟನೆಯ ಸಾರಥ್ಯವನ್ನು ವಹಿಸುವುದು ಸಂಪ್ರದಾಯ. ರಾಜ್ಯಾಧ್ಯಕ್ಷರನ್ನು ಹೊರಗಿಟ್ಟು ಇತರ ಕೆಲವು ನಾಯಕರು ನಡೆಸಲು ಉದ್ದೇಶಿಸಿರುವ ಅಭಿಯಾನವನ್ನು ತಡೆಯದಿದ್ದರೆ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಸಾಧ್ಯವಾದರೆ ಶೀಘ್ರದಲ್ಲೇ ಮುಖಂಡರ ನಿಯೋಗವೊಂದು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ , ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಹಲವು ನಾಯಕರನ್ನು ಭೇಟಿ ಮಾಡಿ ವಸ್ತು ಸ್ಥಿತಿ ಮನವರಿಕೆ ಮಾಡಿಕೊಡಬೇಕು ಎಂದು ಸಭೆಯಲ್ಲಿ ಹಲವರು ಒತ್ತಾಯ ಮಾಡಿದರು ಎಂದು ತಿಳಿದು ಬಂದಿದೆ.

ಇನ್ನು ಸಭೆಯಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ನಾಯಕತ್ವದ ವಿರುದ್ಧ ಅಪಸ್ವರ ತೆಗೆಯುತ್ತಿರುವವರ ಬಗ್ಗೆಯೂ ಶಿಸ್ತು ಕ್ರಮ ಜರುಗಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಕ್ಫ್‌ ವಿವಾದ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಪಕ್ಷದ ಮೂರು ತಂಡಗಳು ಪ್ರವಾಸ ಕೈಗೊಳ್ಳಲಿದೆ. ಯಾವುದೇ ಕಾರಣಕ್ಕೂ ನಾಲ್ಕನೇ ತಂಡಕ್ಕೆ ಅವಕಾಶ ನೀಡಬಾರದು. ಶಾಸಕ ಯತ್ನಾಳ್‌ ಪ್ರತ್ಯೇಕ ನಡೆಸುತ್ತಿರುವುದು ಸರಿಯಲ್ಲ ಎಂದರು.

ಪ್ರತ್ಯೇಕ ಪ್ರವಾಸ ಕೈಬಿಡದಿದ್ದರೆ ನಾವು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತೇವೆ. ಪಕ್ಷ ವಿರೋಧಿ ನಾಯಕರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇವೆ. ನಾವು ವಿಜಯೇಂದ್ರ ಅವರ ಪರವಾಗಿ ಸಭೆ ನಡೆಸಿಲ್ಲ ಎಂದು ತಿಳಿಸಿದರು.

ಮಾಜಿ ಸಚಿವ ಬಿ.ಸಿ ಪಾಟೀಲ್ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷರ ಮೂಲಕವೇ ಎಲ್ಲವೂ ನಡೆಯಬೇಕು. ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದಂತೆ ವಿಜಯೇಂದ್ರ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ರಾಜ್ಯಾಧ್ಯಕ್ಷರ ಬೆಂಬಲಕ್ಕೆ ನಿಂತು‌ ಕೆಲಸ ಮಾಡುತ್ತೇವೆ.

ಸಭೆಯಲ್ಲಿ ಮಾಜಿ ಶಾಸಕರಾದ ರೂಪಾಲಿ ನಾಯಕ, ಸುನೀಲ್ ನಾಯ್ಕ್, ಸುನೀಲ್ ಹೆಗಡೆ, ವೈ.ಸಂಪಂಗಿ, ಎಸ್ ಕೆ ಬೆಳ್ಳುಬ್ಬಿ , ಮಾಡಾಳ್ ವಿರೂಪಾಕ್ಷಪ್ಪ, ವಿರೂಪಾಕ್ಷಪ್ಪ ಬಳ್ಳಾರಿ, ವೆಂಕಟ ಮುನಿಯಪ್ಪ, ನಾಗೇಂದ್ರ, ನಿರಂಜನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.